ADVERTISEMENT

ಪೌಷ್ಟಿಕ ಆಹಾರ ವಿತರಣೆಯಲ್ಲಿ ಲೋಪ: ಗಿರಿಜನರಿಂದ ದೂರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 8:26 IST
Last Updated 12 ಜನವರಿ 2017, 8:26 IST

ಹುಣಸೂರು: ನಾಗಾಪುರ ಪುನರ್ವಸತಿ ಕೇಂದ್ರ ಬ್ಲಾಕ್‌ 2 ಮತ್ತು 6ರ ನಿವಾಸಿಗರಿಗೆ ಸರ್ಕಾರ ವಿತರಿಸುವ ಪೌಷ್ಟಿಕ ಆಹಾರ ಸಮರ್ಪಕವಾಗಿ ವಿತರಿಸದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಗೆ ಜೆ.ಕೆ. ತಿಮ್ಮ ಮತ್ತು ಜೆ.ಕಿ ಮಣಿ ಎಂಬುವವರು ದೂರು ನೀಡಿದ್ದಾರೆ.

ಪುನರ್ವಸತಿ ಕೇಂದ್ರದ ಗಿರಿಜನರಿಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಕಳೆದ 6 ವರ್ಷದಿಂದ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಆದರೆ, ಅದು ಸಮರ್ಪಕವಾಗಿ ವಿತರಣೆ ಆಗದೆ ಅಧಿಕಾರಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಗಿರಿಜನರು ಅಲೆಮಾರಿಗಳಾಗಿದ್ದು, ಕೂಲಿ ಕಾರ್ಮಿಕರಾಗಿ ಕೊಡಗಿನ ಕಾಫಿ ತೋಟಗಳಿಗೆ ತೆರಳುವ ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಗಿರಿಜನರಿಗೆ ವಿತರಿಸುವ ಪೌಷ್ಟಿಕ ಆಹಾರಕ್ಕೆ ಪ್ರತಿ ತಿಂಗಳು ₹2.50 ಕೋಟಿ  ಜಿಲ್ಲಾಡಳಿತ ತೊಡಗಿಸುತ್ತಿದ್ದು ಶೇ 30ರಷ್ಟು ಆಹಾರ ಗಿರಿಜನರಿಗೆ ಒಂದಲ್ಲಾ ಒಂದು ಕಾರಣಗಳಿಗೆ ತಲಪುತ್ತಿಲ್ಲ. ಅಲ್ಲದೇ, ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ವಾಸವಿಲ್ಲದ ಗಿರಿಜನರ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ನಾಗಾಪುರ ಪುನರ್ವಸತಿ ಕೇಂದ್ರದ 2 ಮತ್ತು 6 ಘಟಕದಲ್ಲಿ ಒಟ್ಟು 141 ಗಿರಿಜನರು ವಾಸವಿದ್ದು, ಈ ಪೈಕಿ130 ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ಉಳಿದ ಆಹಾರ ಫಲಾನುಭವಿಗೆ ತಲಪಿಸುವ ಬದಲಿಗೆ ಅಧಿಕಾರಿಗಳು ಹಿಂದಕ್ಕೆ ತೆಗೆದುಕೊಂಡು ಹೋಗುವ ವಾಡಿಕೆ ನಿರಂತರವಾಗಿದೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೊನ್ನೇಗೌಡ ‘ಪೌಷ್ಟಿಕ ಆಹಾರ ವಿತರಣೆಯಲ್ಲಿ ಎದುರಾಗಿರುವ ಸಮಸ್ಯೆ ನೀಗಿಸಲು ಬಯೋ ಮೆಟ್ರಿಕ್‌ ಪದ್ಧತಿ ಜಾರಿಗೊಳಿಸುವ ಆಲೋಚನೆ ಇಲಾಖೆಗಿದೆ. ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ತಲೆ ದೂರಿರುವ ಸಮಸ್ಯೆಗೆ ಮಧ್ಯವರ್ತಿಗಳ ಹಾವಳಿ ಕಾರಣವಾಗಿದೆ. ಅದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾ ಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.