ADVERTISEMENT

ಪ್ರತಿಧ್ವನಿಸಲಿರುವ ಸ್ಥಳೀಯ ‘ರಾಜಕಾರಣ’

ಬಿಜೆಪಿ ಕಾರ್ಯಕಾರಿಣಿ: ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:01 IST
Last Updated 4 ಮೇ 2017, 7:01 IST

ಮೈಸೂರು: ರಾಜ್ಯಮಟ್ಟದಲ್ಲಿ ನಾಯಕರ ನಡುವೆ ಉದ್ಭವಿಸಿರುವ ಬಿಕ್ಕಟ್ಟಿನ ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡುವ ವಿಚಾರ ಹಾಗೂ ಈಚೆಗಿನ ರಾಜಕೀಯ ಬೆಳವಣಿಗೆಗಳು ಮೇ 6 ಹಾಗೂ 7ರಂದು ಇಲ್ಲಿ ನಡೆಯಲಿರುವ ಬಿಜೆಪಿ ಕಾರ್ಯ ಕಾರಿಣಿಯಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ.

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿನ ಸೋಲು, ವಕ್ತಾರ ಸ್ಥಾನದಿಂದ ಗೋ. ಮಧುಸೂದನ ವಜಾ, ವಿ.ಶ್ರೀನಿವಾಸ ಪ್ರಸಾದ್‌ ಹಾಗೂ ಅವರ ಬೆಂಬಲಿಗರ ನೇಮಕ ವಿವಾದ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಪದಾಧಿಕಾರಿ ಗಳ ಆಯ್ಕೆ ಕುರಿತು ಕಾರ್ಯಕರ್ತ ರಲ್ಲಿರುವ ಅಸಮಾಧಾನ ಕುರಿತು ರಾಜೇಂದ್ರ ಕಲಾಮಂದಿರದಲ್ಲಿ ನಡೆಯ ಲಿರುವ ಎರಡು ದಿನಗಳ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನಂಜನಗೂಡು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಅವರನ್ನು ಕಾರ್ಯಕಾರಿಣಿಗೆ ಕೆಲವೇ ದಿನಗಳು ಉಳಿದಿರುವಾಗ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿರುವುದು ಕುತೂಹಲ ಕೆರಳಿಸಿದೆ. ಅಲ್ಲದೆ, ಅವರ ಬೆಂಬಲಿಗರಾದ ಕೆ.ಆರ್‌.ಮೋಹನ ಕುಮಾರ್‌ ಹಾಗೂ ಸಿ.ಬಸವರಾಜು ಅವರನ್ನು ಕಾರ್ಯಕಾರಿಣಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಕ ಮಾಡಿ ರುವುದು ಕೆಲ ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಹಳೆ ಮೈಸೂರು ಭಾಗದಲ್ಲಿ ದಲಿತ ಸಮುದಾಯವನ್ನು ಸೆಳೆಯುವುದು, ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಉದ್ದೇಶದೊಂದಿಗೆ ಪ್ರಸಾದ್‌ ಅವರನ್ನು ನೇಮಕ ಮಾಡಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ ಎಂಬುದು ಒಂದು ಬಣದ ವಾದ.

ಅಲ್ಲದೆ, ಮೈಸೂರು, ಚಾಮರಾಜ ಗರ ಜಿಲ್ಲೆಯ ಪದಾಧಿಕಾರಿಗಳ ನೇಮಕ ಸಂಬಂಧ ಸ್ಥಳೀಯ ಮುಖಂಡರಲ್ಲಿ ಅಸಮಾಧಾನವಿದೆ. ಕೆ.ಎಸ್‌.ಈಶ್ವರಪ್ಪ ಕೂಡ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಹಲವು ತಿಂಗಳು ಕಳೆದರೂ ಯಾವುದೇ ಬದಲಾವಣೆ ಆಗಿಲ್ಲ. ಈ ಕುರಿತು ಧ್ವನಿ ಎತ್ತಲು ಕೆಲ ಸದ್ಯರು ಸಿದ್ಧತೆ ನಡೆಸಿದ್ದಾರೆ.

‘ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಸುಗಮವಾಗಿ ನಡೆಯುತ್ತಿದೆ. ಯಾವುದೇ ಬಣಗಳು ಇಲ್ಲ. ಹೀಗಾಗಿ, ಭಿನ್ನಮತದ ಪ್ರಶ್ನೆಯೇ ಇಲ್ಲ.  ಕಾರ್ಯಕಾರಿಣಿಯಲ್ಲಿ ಪಕ್ಷವನ್ನು ಬಲಪಡಿಸುವ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.

ಪಂಡಿತ್‌ ದೀನದಯಾಳ್‌ ಜನ್ಮಶತಾಬ್ಧಿ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತ್ಯುತ್ಸ ವವನ್ನು ವಾರ್ಡ್‌ ಮಟ್ಟದಲ್ಲಿ ಆಚರಣೆ ಮಾಡುತ್ತಿರುವ ಬಗ್ಗೆ ಸಮಾಲೋಚನೆ ನಡೆಯಲಿದೆ’ ಎಂದು ಜಿಲ್ಲಾ ಬಿಜೆಪಿ ಪ್ರಭಾರಿ ಎಲ್‌.ನಾಗೇಂದ್ರ ತಿಳಿಸಿದರು.

ಟಿಕೆಟ್‌ ಹಂಚಿಕೆ ಚರ್ಚೆ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಈ ಭಾಗದ ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ವಿಷಯ ಕೂಡ ಚರ್ಚೆಗೆ ಬರಲಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಗಳ ಪಟ್ಟಿ ಬೆಳೆಯುತ್ತಿರುವುದು ಪ್ರಬಲ ಆಕಾಂಕ್ಷಿಗಳಾಗಿರುವ ಎಸ್‌.ಎ. ರಾಮದಾಸ್‌ ಹಾಗೂ ಎಚ್‌.ವಿ.ರಾಜೀವ್‌ ಅವರ ಎದೆ ಬಡಿತ ಹೆಚ್ಚಿಸಿದೆ.

‘ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಈಗಲೇ ಆ ಬಗ್ಗೆ ಚರ್ಚೆ ಸಾಧ್ಯತೆ ಕಡಿಮೆ. ಈ ಹಿಂದೆ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಿ 25 ಸಾವಿರ ಮತ ಪಡೆದಿದ್ದೆ. ಅಲ್ಲದೆ, ಪಾಲಿಕೆ ಸದಸ್ಯನಾಗಿ, ಮುಡಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ ದ್ದೇನೆ. ಈಗ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ಪಕ್ಷ ಟಿಕೆಟ್‌ ನೀಡಿದರೆ ಮತ್ತೆ ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ. ಪಕ್ಷದ ಸಿದ್ಧಾಂತಕ್ಕೆ ಬದ್ಧ’ ಎಂದು ನಾಗೇಂದ್ರ ಹೇಳಿದರು.

ಎಲ್ಲಕ್ಕಿಂತ ಮುಖ್ಯವಾಗಿ ನಂಜನ ಗೂಡು, ಗುಂಡ್ಲುಪೇಟೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣವಾದ ಅಂಶಗಳ ಕುರಿತು ಚರ್ಚೆ ನಡೆಯಲಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಈಗಾಗಲೇ ವರದಿ ತರಿಸಿಕೊಂಡು ಅಸಮಾಧಾನ ವ್ಯಕ್ತ ಪಡಿಸಿದೆ ಎನ್ನಲಾಗಿದೆ.

ಯಡಿಯೂರಪ್ಪ ಅವರಲ್ಲದೆ, ರಾಜ್ಯ ಬಿಜೆಪಿ ಉಸ್ತುವಾರಿ ಆರ್‌.ಮುರಳೀಧರ ರಾವ್‌, ಕೇಂದ್ರ ಸಚಿವರು, ಸಂಸದರು, ಶಾಸಕರು, ರಾಜ್ಯ ಕೋರ್ ಕಮಿಟಿ ಸದಸ್ಯರು, ರಾಜ್ಯ ಕಾರ್ಯಕಾರಿಣಿ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಮೋರ್ಚಾಗಳ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆ.ಎಸ್‌.ಈಶ್ವರಪ್ಪ ಅವರು ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ.

*
ಜಿಲ್ಲಾಮಟ್ಟದ ಪದಾಧಿಕಾರಿಗಳ ನೇಮಕ ವಿವಾದ ಈಗ ಮುಗಿದ ವಿಷಯ. ಆರಂಭದಲ್ಲಿ ತುಸು ಅಸಮಾಧಾನವಿದ್ದುದು ನಿಜ. ಕಾರ್ಯಕಾರಿಣಿಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಯಲಿದೆ.
-ಎಲ್‌.ನಾಗೇಂದ್ರ,
ಜಿಲ್ಲಾ ಬಿಜೆಪಿ ಪ್ರಭಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT