ADVERTISEMENT

ಪ್ರಶಸ್ತಿ ಪಡೆದು ಭಾವುಕರಾದ ಮಲ್ಲೇಶ್

ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರ; ಮೂವರಿಗೆ ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:54 IST
Last Updated 30 ಜನವರಿ 2017, 7:54 IST
ಪ್ರಶಸ್ತಿ ಪಡೆದು ಭಾವುಕರಾದ ಮಲ್ಲೇಶ್
ಪ್ರಶಸ್ತಿ ಪಡೆದು ಭಾವುಕರಾದ ಮಲ್ಲೇಶ್   
ಮೈಸೂರು: ‘ನಾನೇನೂ ಹೇಳಲಾರೆ, ನಿಮಗೆ ನಮಸ್ಕಾರ’ ಎಂದು ಹೋರಾಟ ಗಾರ ಪ.ಮಲ್ಲೇಶ್ ಭಾವುಕರಾದರು.
 
ಡಿ.ರಮಾಬಾಯಿ ಚಾರಿಟಬಲ್‌ ಫೌಂಡೇಷನ್‌ ಮತ್ತು ಎಂ.ಗೋಪಿನಾಥ ಶೆಣೈ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಇಲ್ಲಿನ ಕಲಾಮಂದಿರದಲ್ಲಿ ಭಾನುವಾರ ನಡೆದ ‘ರಮಾಗೋವಿಂದ’ ರಾಷ್ಟ್ರೀಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿದರು.
 
ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಪ್ರಕಾಶ ಬಾಬಾ ಆಮ್ಟೆ, ಡಾ.ಮಂದಾಕಿನಿ ಆಮ್ಟೆ ಹಾಗೂ ಡಾ.ವಿಜಯನಾಥ ಶೆಣೈ ಅವರ ಸಾಧನೆ ಬಣ್ಣಿಸಲು ಭಾಷೆ ಕುಂಟುತ್ತದೆ. ಇಂತಹ ಅಪರೂಪದ ಸಾಧಕರ ಕುರಿತು ಮಾತನಾಡಲು ಯಾವ ಭಾಷೆಯೂ ಸಾಲದು. ಇವರಿಗೆ ನಮಸ್ಕರಿಸುವುದಷ್ಟೇ ಸಾಧ್ಯ ಎಂದು ತಿಳಿಸಿದರು.
 
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಕಾಶ ಬಾಬಾ ಆಮ್ಟೆ ‘ನಮ್ಮ ಜೀವನ ಇನ್ನೊಬ್ಬರಿಗೆ ಮಾದರಿಯಾದದ್ದು ಸಾರ್ಥಕ ಎನಿಸಿದೆ. ನಮ್ಮ ಜೀವನ ಕುರಿತು ಮರಾಠಿ ಭಾಷೆಯಲ್ಲಿ ಬಂದ ಸಿನಿಮಾ ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ ಪಡೆಯಿತು. ಇದು ಹಲವು ಯುವಕರಿಗೆ ಸಮಾಜ ಸೇವೆ ಮಾಡಲು ಪ್ರೇರಣೆ ಯಾಯಿತು. ಇದು ನನಗೆ ಸಾರ್ಥಕ್ಯ ಭಾವವನ್ನು ತಂದಿತು’ ಎಂದರು. 
 
‘ನನ್ನ ತಂದೆ ಬಾಬಾ ಆಮ್ಟೆಗೆ ಇಬ್ಬರು ಮಕ್ಕಳು. ಸೋದರ ವಿಕಾಸ್ ಯಾವಾಗಲು ಆಶ್ರಮದಲ್ಲೇ ಇರುತ್ತಿದ್ದರು. ನನ್ನನ್ನು ವೈದ್ಯ ವೃತ್ತಿಗೆ ಸೇರಿಸಿದ ತಂದೆ, ವೈದ್ಯಕೀಯ ಪದವಿ ಮುಗಿದ ಬಳಿಕ ಕಾಡಿನೊಳಗೆ ಕರೆದುಕೊಂಡು ಹೋಗಿ ಆದಿವಾಸಿಗಳ ಸೇವೆ ಮಾಡುವಂತೆ ಹೇಳಿದರು. ಅಲ್ಲೊಂದು ಆಸ್ಪತ್ರೆ ಕಟ್ಟಲು ಸರ್ಕಾರದಿಂದ ಭೂಮಿ ಕೇಳಿದೆ. ಮೂರು ವರ್ಷವಾದರೂ ಭೂಮಿ ಮಂಜೂರಾಗಲಿಲ್ಲ. ಅಷ್ಟರಲ್ಲಿ ಮದುವೆಯಾಯಿತು. ನನ್ನ ಕೈಹಿಡಿದ ಮಂದಾಕಿನಿ ಸಹ ಆದಿವಾಸಿಗಳ ಸೇವೆ ಬಂದಳು. ಇದೀಗ ನನ್ನ ಮಗ ಮತ್ತು ಸೊಸೆ ಇಬ್ಬರೂ ವೈದ್ಯರಾಗಿದ್ದು, ಆದಿವಾಸಿಗಳ ಸೇವೆಯಲ್ಲಿ ನಿರತರಾಗಿ ದ್ದಾರೆ’ ಎಂದು ಅನುಭವ ಬಿಚ್ಚಿಟ್ಟರು.
 
130 ವರ್ಷಗಳ ಇತಿಹಾಸ ಹೊಂದಿರುವ ತೆಲಂಗಾಣ ರಾಜ್ಯ ಹೈದರಾಬಾದ್‌ನ ‘ಸುರಭಿ’ ಎಂಬ ಒಂದೇ ಕುಟುಂಬದ 60 ಮಂದಿ ಕಲಾವಿದರ ನಾಟಕ ತಂಡವು ‘ಮಾಯಾಬಜ್ಹಾರ್‌’ ನಾಟಕ ಪ್ರಸ್ತುತಪಡಿಸಿತು. ಅತ್ಯಾಧುನಿಕ ತಂತ್ರಜ್ಞಾನ, ನೆರಳು ಬೆಳಕಿನ ವಿನ್ಯಾಸಗಳು, ನಾಟಕದ ಹಿಂದಿನ ಪರದೆ ಬದಲಾಗುವ ವಿದ್ಯಮಾನ ಸಭಿಕರ ಗಮನ ಸೆಳೆದವು.
 
ಡಾ.ಪ್ರಕಾಶ ಬಾಬಾ ಆಮ್ಟೆ, ಡಾ.ಮಂದಾಕಿನಿ ಆಮ್ಟೆ ಹಾಗೂ ಡಾ.ವಿಜಯನಾಥ ಶೆಣೈ ಅವರಿಗೆ ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು.
 
ಉದ್ಯಮಿಗಳಾದ ಎಂ.ರಮಾನಾಥ ಶೆಣೈ, ಎಂ.ಜಗನ್ನಾಥ ಶೆಣೈ, ಎಂ.ಗೋಪಿನಾಥ ಶೆಣೈ, ವಸುಮತಿ ಶೆಣೈ, ಸಾವಿತ್ರಿ ಶೆಣೈ, ಜಯರಾಮ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.