ADVERTISEMENT

ಬಸ್ ಬಿಟ್ಟರೆ ಮತ, ಇಲ್ಲದಿದ್ದರೆ ಬಹಿಷ್ಕಾರ

ಖಂಡೇಗೌಡನಪುರ ಗ್ರಾಮಸ್ಥರ ಪುನರುಚ್ಚಾರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 9:41 IST
Last Updated 20 ಏಪ್ರಿಲ್ 2018, 9:41 IST
ಗ್ರಾಮಕ್ಕೆ ಅಧಿಕಾರಿಗಳ ಭೇಟಿ
ಗ್ರಾಮಕ್ಕೆ ಅಧಿಕಾರಿಗಳ ಭೇಟಿ   

ಹಂಪಾಪುರ: ಬಸ್ ಸೌಕರ್ಯ ಕಲ್ಪಿಸದ ಹೊರತು ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಖಂಡೇಗೌಡನಪುರ ಗ್ರಾಮಸ್ಥರು ಪುನರುಚ್ಚರಿಸಿದ್ದಾರೆ.

ಎಚ್.ಡಿ.ಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕುಮಾರ್, ಸೋಮೇಶ್ ಮಾತನಾಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಬಸ್ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದಕ್ಕೆ ಸಾರಿಗೆ ನಿಗಮದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗ್ರಾಮಕ್ಕೆ ಹೋಗುವ ರಸ್ತೆ ಚಿಕ್ಕದಾ ಗಿದೆ. ಇದರಿಂದ ಬಸ್ ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ, ನಾವು ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ADVERTISEMENT

ದುರಸ್ತಿಗೊಂಡ ರಸ್ತೆ: ಗ್ರಾಮಸ್ಥರೇ ರಸ್ತೆ ದುರಸ್ತಿ ಮಾಡಿದ್ದಾರೆ. ಮನೆಗೆ ತಲಾ ₹ 2 ಸಾವಿರದಂತೆ ವಸೂಲಿ ಮಾಡಿ ಸುಮಾರು 2 ಕಿಲೋ ಮೀಟರ್ ರಸ್ತೆಯ ಇಕ್ಕೆಲದಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿದ್ದಾರೆ. ಅಲ್ಲದೆ, ಕೆರೆ ಏರಿಯ ಮೇಲೆ ಸುಮಾರು 300 ಮೀಟರ್ ನಷ್ಟು ರಸ್ತೆ ವಿಸ್ತರಣೆ ಮಾಡಲಾಗಿದೆ. ಗ್ರಾಮಸ್ಥರೆಲ್ಲರೂ ಸೇರಿ 7 ದಿನ ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದರು.

ರಸ್ತೆ ದುರಸ್ತಿ ನಂತರವೂ ಬಸ್ ಸೌಲಭ್ಯ ಕಲ್ಪಿಸಿಲ್ಲ. ಗ್ರಾಮಕ್ಕೆ ಸೇರಿಲ್ಲದ ಮೈಸೂರು ತಾಲ್ಲೂಕಿಗೆ ಸೇರಿದ 4 ಕಿಲೋಮೀಟರ್ ರಸ್ತೆಯೂ ಸರಿಯಾಗಿಲ್ಲ. ಆದ್ದರಿಂದ ಬಸ್ ಬಿಡಲು ಸಾಧ್ಯವಿಲ್ಲ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅವರು ಕಿಡಿಕಾರಿದರು.

ಕಳೆ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದೇವು. ಆದರೆ, ಚುನಾವಣೆ ನಂತರ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರಿಂದ ಹಿಂಪಡೆದಿದ್ದೇವು. ಆದರೆ, ಇಲ್ಲಿವರೆಗೂ ಸೌಲಭ್ಯ ಒದಗಿಸಿಲ್ಲ. ಹೀಗಾಗಿ, ಈ ಬಾರಿ ಬಸ್ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಮತ ಚಲಾವಣೆ, ಇಲ್ಲವಾದಲ್ಲಿ ಬಹಿಷ್ಕಾರ ಎಂದು ಹೇಳಿದರು.

**

ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕರ ಜತೆ ಚರ್ಚಿಸಲಾಗಿದೆ. ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

 ಮಂಟೇಸ್ವಾಮಿ, ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.