ADVERTISEMENT

ಬಾಲಕ ಸೇರಿ ಮೂವರು ಆತ್ಮಹತ್ಯೆ

ಪ್ರಾಣಕ್ಕೆ ಕಂಟಕವಾದ ಸಹಪಾಠಿಯಿಂದ ಪಡೆದ ₹ 100ರ ನೋಟು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:56 IST
Last Updated 16 ಫೆಬ್ರುವರಿ 2017, 9:56 IST
ಮೈಸೂರು: 7ನೇ ತರಗತಿಯ ವಿದ್ಯಾರ್ಥಿ ಸೇರಿ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರತ್ಯೇಕ ಘಟನೆಗಳು ಬುಧವಾರ ಬೆಳಕಿಗೆ ಬಂದಿವೆ.
 
ಹಣಕಾಸಿನ ವಿಚಾರವಾಗಿ ಶಾಲೆಯಲ್ಲಿ ಶಿಕ್ಷಕರು ನಡೆಸಿದ ವಿಚಾರಣೆ ಯಿಂದ ಮನನೊಂದ ಭೈರವೇಶ್ವರ ನಗರದ ನಿವಾಸಿ ಚೆಲುವರಾಜ್‌ ಎಂಬುವರ ಪುತ್ರ ಪವನ್‌ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬಾಲಕ ಭೈರವೇಶ್ವರ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
 
‘ಸಹಪಾಠಿಯೊಬ್ಬರಿಂದ ಪಡೆದು ಕೊಂಡಿದ್ದ ₹ 100 ಹಣವನ್ನು ಪವನ್‌ ಮರಳಿಸಿರಲಿಲ್ಲ. ಈ ವಿಚಾರವಾಗಿ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಇದು ಶಾಲೆಯ ಶಿಕ್ಷಕರ ಗಮನಕ್ಕೂ ಬಂದಿತ್ತು. ಹೀಗಾಗಿ, ಪೋಷಕರನ್ನು ಶಾಲೆಗೆ ಕರೆತರುವಂತೆ ಶಿಕ್ಷಕರು ಬಾಲಕನಿಗೆ ಸೂಚನೆ ನೀಡಿದ್ದರು’ ಎಂದು ಮೇಟಗಳ್ಳಿ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
 
‘ಶಿಕ್ಷಕರು ತಂದೆಯ ಎದುರೇ ಬಾಲಕನ ವಿಚಾರಣೆ ನಡೆಸಿದ್ದರು. ಎಲ್ಲರ ಸಮ್ಮುಖದಲ್ಲಿಯೇ ಚೆಲುವರಾಜ್‌ ₹ 100 ಹಣ ಮರಳಿಸಿದ್ದರು. ಇದರಿಂದ ಮನನೊಂದ ಬಾಲಕ ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಮರಳಿದ ಬಳಿಕ ಕೊಠಡಿಗೆ ತೆರಳಿದ್ದಾನೆ. ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಹುಹೊತ್ತಾದರೂ ಕೊಠಡಿಯಿಂದ ಪುತ್ರ ಹೊರಬರದೆ ಇದ್ದಾಗ ಅನುಮಾನಗೊಂಡ ಪೋಷಕರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
 
ಸಾಲ ಬಾಧೆ: ವಿಪರೀತ ಸಾಲ ಮಾಡಿಕೊಂಡಿದ್ದ ಶ್ರೀರಾಂಪುರದ 2ನೇ ಹಂತದ ನಿವಾಸಿ ನವೀನ್‌ (30) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದ ನವೀನ್‌, ಖಾಸಗಿ ಕಂಪೆನಿ ಯೊಂದರ ಉದ್ಯೋಗಿ ಯಾಗಿದ್ದರು. ಪರಿಚಯಸ್ಥರ ಬಳಿ ವಿಪರೀತ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
 
‘ಮಂಗಳವಾರ ರಾತ್ರಿ ಊಟ ಮುಗಿಸಿದ ಬಳಿಕ ನವೀನ್‌ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ. ರಾತ್ರಿ ಅನುಮಾನಗೊಂಡ ಸಹೋದರ ಪರಿಶೀಲಿಸಿದಾಗ ನೇಣು ಹಾಕಿ ಕೊಂಡಿದ್ದು ಬೆಳಕಿಗೆ ಬಂದಿದೆ. ಒಂದೂವರೆ ವರ್ಷದ ಹಿಂದೆಯಷ್ಟೇ ಇವರು ಮದುವೆಯಾಗಿದ್ದರು’ ಎಂದು ಕುವೆಂಪುನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
 
ಲಾರಿಯಲ್ಲೇ ಆತ್ಮಹತ್ಯೆ: ಚಾಲಕನೊಬ್ಬ ಲಾರಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕಡಕೊಳದ ಸಮೀಪ ಬುಧವಾರ ಬೆಳಕಿಗೆ ಬಂದಿದೆ. ನಂಜನಗೂಡು ತಾಲ್ಲೂಕಿನ ನಗರ್ಲೆ ಸಮೀಪದ ಸರಗೂರಿನ ಮಹದೇವ ಸ್ವಾಮಿ ಅಲಿಯಾಸ್‌ ಮಾದೇಶ (26) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
 
‘ಕಬ್ಬು ತುಂಬಿದ ಲಾರಿಯ ಕಂಬಿಗೆ ಹಗ್ಗದಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಹದೇವಸ್ವಾಮಿ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಬುಧವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದೆವು’ ಎಂದು ದಕ್ಷಿಣ ಠಾಣೆ ಪೊಲೀಸರು ತಿಳಿಸಿದ್ದಾರೆ.
 
ಅಪಘಾತ: ಬೈಕ್‌  ಸವಾರ ಸಾವು
ಮೈಸೂರು: ಸಾರಿಗೆ ಸಂಸ್ಥೆಯ ಬಸ್‌ ಹಿಂದಿಕ್ಕಲು ಯತ್ನಿಸಿ ಆಯತಪ್ಪಿ ಕೆಳಗೆ ಬಿದ್ದ ದ್ವಿಚಕ್ರ ವಾಹನ ಸವಾರನ ಮೇಲೆ ಬಸ್‌ ಹರಿದು ಮೃತಪಟ್ಟಿರುವ ಘಟನೆ ಭೋಗಾದಿಯಲ್ಲಿ ನಡೆದಿದೆ.
 
ಭೋಗಾದಿ ನಿವಾಸಿ ಅಶೋಕ್‌ (36) ಮೃತಪಟ್ಟವರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಕಾಲಕ್ಕೆ ಧಾವಿಸದ ‘ಆಂಬುಲೆನ್ಸ್‌ 108’ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.
 
‘ಗೌರಿಬಿದನೂರಿನ ಅಶೋಕ್‌ ಅವರು ಭೋಗಾದಿಯಲ್ಲಿ ನೆಲೆಸಿದ್ದರು. ಮಂಗಳವಾರ ರಾತ್ರಿ 10.30ರ ಸುಮಾರಿಗೆ ನಗರದಿಂದ ಮನೆಗೆ ಮರಳುತ್ತಿದ್ದರು. ಅಡಕನಹಳ್ಳಿಗೆ ಸಾಗುತ್ತಿದ್ದ ಬಸ್‌ ಅನ್ನು ಭೋಗಾದಿ ಚೆಕ್‌ಪೋಸ್ಟ್‌ ಬಳಿ ಹಿಂದಿಕ್ಕಲು ಯತ್ನಿಸಿದ್ದಾರೆ. ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಅಶೋಕ್‌ ಅವರ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದಿದೆ’ ಎಂದು ಕೆ.ಆರ್‌.ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
 
ಸ್ಥಳೀಯರು ಆಂಬುಲೆನ್ಸ್‌ಗೆ ಕರೆ ಮಾಡಿದ್ದರೂ, ಆಂಬುಲೆನ್ಸ್‌ ಧಾವಿಸುವುದಕ್ಕೂ ಮುನ್ನವೇ ಅಶೋಕ್‌ ಮೃತಪಟ್ಟಿದ್ದಾರೆ. ಸಕಾಲಕ್ಕೆ ಧಾವಿಸಲಿಲ್ಲ ಎಂದು ಆರೋಪಿಸಿ ಆಂಬುಲೆನ್ಸ್‌ ಸಿಬ್ಬಂದಿಯ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.
 
ಖಾತೆದಾರರಿಂದ ₹ 50 ಸಾವಿರ ವಂಚನೆ
 
ಮೈಸೂರು: ಬ್ಯಾಂಕ್‌ ಸಿಬ್ಬಂದಿಯ ಸೋಗಿನಲ್ಲಿ ಖಾತೆದಾರರೊಬ್ಬರಿಗೆ ಕರೆ ಮಾಡಿದ ದುಷ್ಕರ್ಮಿ ₹ 50 ಸಾವಿರ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗೋಕುಲಂ ನಿವಾಸಿ ಅರೇಗೌಡ ಮೋಸ ಹೋದ ವ್ಯಕ್ತಿ. ಜ. 26ರಂದು  ಅರೇಗೌಡ ಅವರಿಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ‘ನಿಮ್ಮ ಎಟಿಎಂ ಕಾರ್ಡ್‌ ಸ್ಥಗಿತಗೊಂಡಿದೆ’ ಎಂದಿದ್ದಾರೆ. ಇದರಿಂದ ಆತಂಕಗೊಂಡ ಅರೇಗೌಡ ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ವಂಚನೆ ಮಾಡಲಾಗಿದೆ ಎಂದು ವಿ.ವಿ.ಪುರಂ ಠಾಣೆಯ ಪೊಲೀಸರು ತಿಳಿಸಿದ್ದಾರೆ.ಎಟಿಎಂ ಕಾರ್ಡ್‌ಗೆ ಮರುಚಾಲನೆ ನೀಡಲು ಕೆಲ ಮಾಹಿತಿ ನೀಡುವಂತೆ ಅರೇಗೌಡ ಅವರಿಗೆ ವಂಚಕರು ಸೂಚಿಸಿದ್ದಾರೆ. 
 
ಕಾರ್ಡ್‌ ಮೇಲಿನ ಸಂಖ್ಯೆ ಹಾಗೂ ರಹಸ್ಯ ಸಂಖ್ಯೆಯನ್ನು ಪಡೆದಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ)ಶಾಖೆಯ ಖಾತೆಯಿಂದ₹ 49,997 ಹಣವನ್ನು ದುಷ್ಕರ್ಮಿಗಳು ವಿವಿಧ ವ್ಯಾಲೆಟ್‌ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಮೋಸ ಹೋಗಿರುವುದು ಖಾತೆದಾರರಿಗೆ ತಡವಾಗಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.