ADVERTISEMENT

ಬಿರುಗಾಳಿ, ಮಳೆಗೆ ಮರಗಳು ಧರೆಗೆ

ಗ್ರಾಮೀಣ ಪ್ರದೇಶದಲ್ಲೂ ವರುಣನ ಕೃಪೆ; ಬಿತ್ತನೆಯತ್ತ ಮುಖ ಮಾಡಿದ ರೈತರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:22 IST
Last Updated 17 ಏಪ್ರಿಲ್ 2017, 7:22 IST
ಮೈಸೂರು: ನಗರದಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿ ದಿದ್ದು, ಮೂರು ಮರಗಳು ನೆಲಕ್ಕು ರುಳಿದೆ. ಘಟನೆಯಲ್ಲಿ ಕಾರೊಂದು ಜಖಂಗೊಂಡಿದ್ದರೆ, ತೆಂಗಿನಮರವೊಂದಕ್ಕೆ ಬೆಂಕಿ ತಗುಲಿದೆ.
 
ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯ ಶ್ರೀರಾಮಮಂದಿರದ ಬಳಿ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದು, ಕಾರು ಸಂಪೂರ್ಣ ಜಖಂ ಗೊಂಡಿತು. ಕಾರಿನಲ್ಲಿ ಯಾರೂ ಇಲ್ಲದೇ ಇದ್ದುದ್ದರಿಂದ ಅನಾಹುತ ಸಂಭವಿಸಿಲ್ಲ.
 
ಜಯಲಕ್ಷ್ಮಿಪುರಂನಲ್ಲಿ ದೊಡ್ಡ ದೊಂದು ಮರ ಉರುಳಿ ಬಿದ್ದಿತು. ಮರ ಉರುಳುವ ಸದ್ದಿಗೆ ಸ್ಥಳದಲ್ಲಿದ್ದ ಜನರು ಚಿಲ್ಲಾಪಿಲ್ಲಿಯಾಗಿ ಓಡಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. 
 
ಕಾಳಿದಾಸ ರಸ್ತೆಯ ಚಂದ್ರಕಲಾ ಆಸ್ಪತ್ರೆ ಬಳಿ ತೆಂಗಿನಮರವೊಂದು ರಸ್ತೆಗೆ ಉರುಳಿತು. ಇದರಿಂದ ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಯಿತು. ಇಲ್ಲೆಲ್ಲ ಅಭಯ–2 ತಂಡ ಸ್ಥಳಕ್ಕೆ ಭೇಟಿ ನೀಡಿ ಉರುಳಿ ಬಿದ್ದ ಮರಗಳನ್ನು ತೆರವು ಗೊಳಿಸಿತು. ಮಳೆಗಿಂತ ಗಾಳಿಯ ಆರ್ಭಟವೇ ಹೆಚ್ಚಿತ್ತು. ನಗರ ವ್ಯಾಪ್ತಿಯಲ್ಲಿ 8 ಮಿ.ಮೀ ಮಳೆಯಷ್ಟೇ ಸುರಿದಿದೆ.
 
ತೆಂಗಿನಮರಕ್ಕೆ ಬೆಂಕಿ: ಶ್ರೀರಾಂಪುರದ ಮುಖ್ಯರಸ್ತೆಯ ಶಾಂತರಾಜು ಎಂಬುವ ವರ ಮನೆಯ ಮುಂದೆ ಬಿರುಗಾಳಿಗೆ ಸಿಲುಕಿದ ತೆಂಗಿನಮರದ ಗರಿಗಳು ವಿದ್ಯುತ್ ತಂತಿಗೆ ತಗುಲಿ ಇಡೀ ಮರಕ್ಕೆ ಬೆಂಕಿ ವ್ಯಾಪಿಸಿತು. ಇದರಿಂದ ಭಯ ಗೊಂಡ ಸುತ್ತಮುತ್ತಲ ನಿವಾಸಿಗಳು ಅಗ್ನಿ ಶಾಮಕ ಪಡೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕಪಡೆಯ ಸಿಬ್ಬಂದಿ ತೆಂಗಿನಮರಕ್ಕೆ ಹೊತ್ತಿದ್ದ ಬೆಂಕಿ ನಂದಿಸುವಲ್ಲಿ ಸಫಲರಾದರು.
 
ಗ್ರಾಮಾಂತರ ಭಾಗದಲ್ಲಿ ಭರ್ಜರಿ ಮಳೆ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಭರ್ಜರಿ ಮಳೆಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲು ಹಾಗೂ ಹೆಚ್ಚಿನ ಉಷ್ಣಾಂಶ ಇತ್ತು. ಮಧ್ಯಾಹ್ನ 3 ಗಂಟೆಯ ನಂತರ ವಾತಾವರಣದಲ್ಲಿ ಬದಲಾವಣೆಯಾಗುತ್ತಾ ಬಂದಿತು. ಸಂಜೆ 6ರ ನಂತರ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಬೀಳಲಾರಂಭಿಸಿತು.

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 93 ಮಿ.ಮೀ, ಹಂಪಾಪುರದಲ್ಲಿ 57, ನಂಜನಗೂಡು, ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ತಲಾ 56.5, ಕೆ.ಆರ್. ನಗರದಲ್ಲಿ 44.5, ಹಾರೋಹಳ್ಳಿಯಲ್ಲಿ 41.8, ಇಲವಾಲದಲ್ಲಿ 36, ತಿ.ನರಸೀಪುರದಲ್ಲಿ 36.5 ಮಿ.ಮೀ ಮಳೆ ಸುರಿದಿದೆ. ಹಲವೆಡೆ ಭಾರಿ ಗಾಳಿ ಬೀಸಿದೆ. 
 
ಧಾರಾಕಾರ ಮಳೆ
ನಂಜನಗೂಡು/ಹಂಪಾಪುರ:  ಬಿಸಿಲ ಬೇಗೆಯಿಂದ ಪರಿತಪಿಸುತ್ತಿದ್ದ ನಗರದ ಜನತೆಗೆ ಭಾನುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಗುಡುಗು, ಮಿಂಚಿನಿಂದ ಕೂಡಿದ ಮಳೆ ತಂಪೆರೆಯಿತು.
 
ಸಂಜೆ 7 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ರಾಷ್ಟ್ರಪತಿ ರಸ್ತೆಯಲ್ಲಿ ಮೋರಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡಚಣೆ ಉಂಟಾಯಿತು.

ಅಲ್ಲದೆ, ಮಹಾತ್ಮ ಗಾಂಧಿ ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು. ಮಳೆ ಆರಂಭಗೊಂಡ ನಂತರ ನಗರದಾದ್ಯಂತ ವಿದ್ಯುತ್ ಕಡಿತಗೊಂಡಿತು. ತಾಲ್ಲೂಕಿನ ವಿವಿಧೆಡೆ ಮಳೆಯಾಗಿದ್ದು, ಯಾವುದೇ ಅನಾಹುತ ಸಂಭವಿಸಿರುವ ವರದಿಯಾಗಿಲ್ಲ.
 
ಸಮಸ್ಯೆ ತಾತ್ಕಾಲಿಕ ದೂರ: ಹಂಪಾಪುರ ಹೋಬಳಿಯಾದ್ಯಂತ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿಯಿತು. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣ ದಲ್ಲಿ ಗಾಳಿ ಬೀಸಿತು. ಒಂದು ವಾರದ ಹಿಂದೆ ಸತತ ಮೂರು ದಿನ ಮಳೆಯಾ ಗಿತ್ತು. ರೈತರು ಜಮೀನು ಹದ ಮಾಡಿ ಕೊಂಡು ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದರು. ಭಾನುವಾರ ಮಳೆಯಾ ಗಿರುವುದರಿಂದ ರೈತರು ಬಿತ್ತನೆಯತ್ತ ಮುಖ ಮಾಡಲಿದ್ದಾರೆ.
 
ವಾರದ ಹಿಂದೆ ಮಳೆಯಾದಾಗ ಕೆಲವು ಕೆರೆ– ಕಟ್ಟೆಗಳಲ್ಲಿ ನೀರು ಸಂಗ್ರಹ ವಾಗಿತ್ತು. ಇದರಿಂದ ಜಾನುವಾರುಗಳ ಕುಡಿಯುವ ನೀರಿನ ಬವಣೆ ತಾತ್ಕಾಲಿಕ ವಾಗಿ ದೂರವಾಗಿತ್ತು. ಆದರೆ, ವಾರವಾ ದರೂ ಮಳೆ ಬಾರದಿದ್ದರಿಂದ ಸಂಗ್ರಹ ವಾಗಿದ್ದ ನೀರು ಬತ್ತುವ ಹಂತದಲ್ಲಿತ್ತು.
 
ಈಗ ಸುರಿದ ಮಳೆಯಿಂದಾಗಿ ಸಣ್ಣ ಪುಟ್ಟ ಕೆರೆ– ಕಟ್ಟೆಗಳಲ್ಲಿ ಮತ್ತೆ ನೀರು ಸಂಗ್ರಹವಾಗಿದೆ. ಮುಂದಿನ ಒಂದು ವಾರದ ನೀರಿನ ತೊಂದರೆ ನೀಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.