ADVERTISEMENT

ಬಿರುಗಾಳಿ, ಮಳೆ; ನೆಲಕಚ್ಚಿದ 700 ಬಾಳೆಗಿಡ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 12:16 IST
Last Updated 23 ಏಪ್ರಿಲ್ 2018, 12:16 IST
ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಭಾನುವಾರ ಸುರಿದ ಮಳೆಗೆ ಕಿಟ್ಟಪ್ಪ ಎಂಬುವವರ ಬಾಳೆತೋಟ ಸಂಪೂರ್ಣ ನಾಶವಾಗಿದೆ.
ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಭಾನುವಾರ ಸುರಿದ ಮಳೆಗೆ ಕಿಟ್ಟಪ್ಪ ಎಂಬುವವರ ಬಾಳೆತೋಟ ಸಂಪೂರ್ಣ ನಾಶವಾಗಿದೆ.   

ನಂಜನಗೂಡು: ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಯಿತು. ಕೆಲವೆಡೆ ಹಾನಿ ಸಂಭವಿಸಿದೆ.

ಕೋಣನೂರು ಗ್ರಾಮದಲ್ಲಿ ತೆಂಗಿನ ಮರಗಳು ಹಾಗೂ ಬಾಳೆತೋಟ ನಾಶವಾಗಿದೆ. ಗ್ರಾಮದ ಕಿಟ್ಟಪ್ಪ ಎಂಬುವವರಿಗೆ ಸೇರಿದ 700 ಬಾಳೆಗಿಡ ನೆಲಕಚ್ಚಿವೆ. ಕೂಸಣ್ಣ ಎಂಬುವವರಿಗೆ ಸೇರಿದ 4-5 ತೆಂಗಿನಮರಗಳು ಧರೆಗುರುಳಿವೆ. ಅಲ್ಲದೆ, ಇದೇ ಗ್ರಾಮದ ಕರಿಯಪ್ಪ ಎಂಬುವವರ ಮನೆಯ ಚಾವಣಿ ಬಿರುಗಾಳಿಗೆ ಹಾರಿ ಹೋಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ.

ವರುಣಾ, ಸುತ್ತಮುತ್ತ ಮಳೆ

ADVERTISEMENT

ವರುಣಾ: ಹೋಬಳಿಯ ಹೊಸಕೋಟೆ, ದೇವಲಾಪುರ, ಮೆಲ್ಲಹಳ್ಳಿ, ಮದೇಗೌಡನಹುಂಡಿ, ಲಕ್ಷ್ಮೀಪುರ, ವರಕೋಡು ಭಾಗದಲ್ಲಿ ಭಾನುವಾರ ಸಂಜೆ ಸುಮಾರು ಅರ್ಧ ಗಂಟೆ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿಯಿತು. ಯಾವುದೇ ಹಾನಿಯ ವರದಿಯಾಗಿಲ್ಲ.

ಉತ್ತಮ ಮಳೆ

ಪಿರಿಯಾಪಟ್ಟಣ: ಪಟ್ಟಣ ಸೇರಿದಂತೆ ಕಂಪಲಾಪುರ, ಮೆಲ್ಲಹಳ್ಳಿ, ಕಿರನೆಲ್ಲಿ, ಅಬ್ಬೂರು ಸೇರಿದಂತೆ ಪಟ್ಟಣದ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ಯಾವುದೇ ಹಾನಿ ಸಂಭವಿರುವ ವರದಿಯಾಗಿಲ್ಲ. ಕೆಲವು ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ ವಾತಾವರಣ ಕಾವೇರಿತ್ತು. ಎರಡು ದಿನಗಳಿಂದ ಬಿದ್ದ ಮಳೆಯಿಂದ ತಂಪಾದ ವಾತಾವಣರ ನಿರ್ಮಾಣವಾಗಿ ಬಿಸಿಲ ಬೇಗೆಯಿಂದ ಬಳಲಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಹುಣಸೂರು: ಕಳೆದೆರಡು ದಿನಗಳಿಂದ ತಾಲ್ಲೂಕಿನ ಅಲ್ಲಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಬಿದ್ದ ಮಳೆಗೆ ತೆಂಗಿನಮರಗಳು ಧರೆಗುರುಳಿವೆ. ಅಲ್ಲದೆ, ಮನೆಗಳ ಚಾವಣಿ ಹಾರಿಹೋಗಿವೆ.

ಹನಗೋಡು ಹೋಬಳಿಯ ಚಿಕ್ಕಹೆಜ್ಜೂರು, ಕೊಳವಿಗೆ, ಯಶೋದರಪುರದಲ್ಲಿ ಸಾಕಷ್ಟು ಹಾನಿಯಾಗಿದೆ. ಅಲ್ಲದೆ, ಕೋಣನಹೊಸಹಳ್ಳಿ, ಮುದಗನೂರು ಗ್ರಾಮದಲ್ಲೂ ಹಾನಿಯುಂಟಾಗಿದೆ. ಚಿಕ್ಕಹೆಜ್ಜೂರಿನಲ್ಲಿ ದೇವರಾಜು ಎಂಬುವವರ ಮನೆ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ತೆಂಗಿನ ಮರ ಅರ್ಧಕ್ಕೆ ಕಡಿದು ಬಿದ್ದಿದೆ. ಮನೆ ಚಾವಣಿ ಹೆಂಚುಗಳು ಬಿರುಗಾಳಿಗೆ ಹಾರಿಹೋಗಿದೆ. ಗೋಡೆ ಬಿರುಕು ಬಿಟ್ಟಿದೆ.

ಇದೇ ಗ್ರಾಮದ ನಂಜುಂಡಪ್ಪ ಎಂಬುವವರ ಮನೆ ಗೋಡೆ ಸಹ ಬಿರುಕು ಬಿಟ್ಟಿದೆ. ಮೂರ್ತಿ, ಮಾಜಿ ಚೇರ್ಮನ್ ಚಂದ್ರಶೇಖರ್‌ ಅವರ ಮನೆಯ ಹೆಂಚುಗಳು ಹಾರಿಹೋಗಿವೆ. ಅಲ್ಲದೆ, ರೂಪಾ ನಂದೀಶ್ ಎಂಬುವವರು ಇತ್ತೀಚೆಗೆ ನಿರ್ಮಿಸಿದ್ದ ಹೊಸ ಮನೆಯ ಚಾವಣಿಗೆ ಹೊದಿಸಿದ್ದ ಶೀಟುಗಳು ಹಾರಿಹೋಗಿ, ದೂರದ ವಿದ್ಯುತ್ ಮಾರ್ಗದ ಮೇಲೆ ಬಿದ್ದಿವೆ. ಇದರಿಂದ ಇಡೀ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಸುಮಾರು 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಮೈಸೂರು- ಬಂಟ್ವಾಳ ಹೆದ್ದಾರಿ ಪಕ್ಕದ ಯಶೋಧರಪುರ ಬಳಿ ಹೈಟೆಷನ್ ಲೈನ್ ಮೇಲೆ ತೆಂಗಿನ ಮರ ಉರುಳಿ ಬಿದ್ದು, ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.