ADVERTISEMENT

ಬೀನ್ಸ್ ಸಗಟು ದರ ಕುಸಿತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 5:52 IST
Last Updated 21 ನವೆಂಬರ್ 2017, 5:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಬೀನ್ಸ್‌ನ ಸಗಟು ದರದಲ್ಲಿ ಈ ವಾರ ಹೆಚ್ಚಿನ ಇಳಿಕೆಯಾಗಿದ್ದು, ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ. ಕಳೆದ ವಾರ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 22–25 ಇದ್ದದ್ದು, ಶನಿವಾರ ₹ 15ಕ್ಕೆ ಕುಸಿಯಿತು. ಕೇರಳ ವ್ಯಾಪಾರಸ್ಥರಿಂದ ಬೇಡಿಕೆ ಕಡಿಮೆಯಾಗಿದ್ದು ಹಾಗೂ ಪೂರೈಕೆಯಲ್ಲಿ ಹೆಚ್ಚಾಗಿದ್ದು ಇದಕ್ಕೆ ಕಾರಣ ಎಂದು ತರಕಾರಿ ವ್ಯಾಪಾರಿ ಮಲ್ಲೇಶ್ ತಿಳಿಸಿದರು.

ಕಳೆದ ವಾರ ಮಾರುಕಟ್ಟೆಗೆ ಬೀನ್ಸ್ ದಿನವೊಂದಕ್ಕೆ 102 ಕ್ವಿಂಟಲ್‌ನಷ್ಟು ಬೀನ್ಸ್ ಆವಕವಾಗುತ್ತಿತ್ತು. ಈಗ ಇದರ ಪ್ರಮಾಣ 166 ಕ್ವಿಂಟಲ್‌ಗೆ ಹೆಚ್ಚಿದೆ. ಕಾರ್ತಿಕ ಮಾಸ ಮುಕ್ತಾಯವಾಗಿರುವುದರಿಂದ ಶುಭ ಸಮಾರಂಭಗಳು ಕಡಿಮೆಯಾಗಿವೆ. ಇದರಿಂದ ಬೇಡಿಕೆಯೂ ಇಳಿಮುಖವಾಗಿದೆ. ಹೀಗಾಗಿ, ಬೀನ್ಸ್ ಬೆಲೆಯಲ್ಲಿ ಹೆಚ್ಚಿನ ಇಳಿಕೆಯಾಗಿದ್ದರೆ, ಉಳಿದ ತರಕಾರಿಗಳ ಬೆಲೆಗಳೂ ಕಡಿಮೆಯಾಗಿವೆ. ಟೊಮೆಟೊ ಮತ್ತು ಕ್ಯಾರೆಟ್ ಕೆ.ಜಿಗೆ ₹ 6, ಬದನೆ ₹ 2, ಎಲೆಕೋಸು ₹ 2, ದಪ್ಪಮೆಣಸಿನಕಾಯಿ ₹ 2, ಹಸಿಮೆಣಸಿನಕಾಯಿ ₹ 4 ಕಡಿಮೆಯಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಯಥಾಸ್ಥಿತಿ: ಒಂದೆಡೆ ಸಗಟು ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದ್ದರೆ, ಮತ್ತೊಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಯಥಾಸ್ಥಿತಿಯಲ್ಲಿಯೇ ಇದೆ. ದರ ಇಳಿಕೆಯಾಗುತ್ತಿರುವುದು ಕಳೆದ ಎರಡು, ಮೂರು ದಿನಗಳಿಂದ ಮಾತ್ರ. ಹೆಚ್ಚಿನ ವ್ಯಾಪಾರಸ್ಥರು ಇದಕ್ಕೂ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದರಿಂದ ದರ ಇಳಿಕೆಯ ಲಾಭ ಗ್ರಾಹಕರಿಗೆ ದೊರೆಯುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ADVERTISEMENT

ಬಾಳೆಹಣ್ಣಿನ ದರದಲ್ಲಿ ಇಳಿಕೆ: ಹಾಪ್‌ಕಾಮ್ಸ್‌ನ ಏಲಕ್ಕಿ ಬಾಳೆಹಣ್ಣಿನ ದರದಲ್ಲಿ ಇಳಿಕೆಯಾಗಿದೆ. ಇದನ್ನು ಬಿಟ್ಟರೆ ಸಗಟು ಮಾರುಕಟ್ಟೆಯಲ್ಲೂ ದರ ಇಳಿದಿದೆ. ಭರಪೂರವಾದ ಆವಕ ಹೆಚ್ಚಾಗಿರುವುದರಿಂದ ದರ ಇಳಿಕೆಯಾಗಿದೆ. ಆದರೆ, ಇನ್ನಿತರ ಕಡೆ ಕೆ.ಜಿಗೆ ₹ 70ರಲ್ಲೇ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್ ದರ ಉತ್ತಮ ಗುಣಮಟ್ಟದ ಏಲಕ್ಕಿ ಬಾಳೆಹಣ್ಣಿಗೆ ₹ 50 ಹಾಗೂ ದ್ವಿತೀಯ ಗುಣಮಟ್ಟದ ಹಣ್ಣಿನ ದರ ₹ 35 ಇದೆ. ಪಚ್ಚಬಾಳೆಯ ದರ ₹ 24 ಇದೆ.

ಏರುಗತಿಯಲ್ಲಿ ಮೊಟ್ಟೆ ಧಾರಣೆ:
ಕೋಳಿಮೊಟ್ಟೆ ಧಾರಣೆ ಏರುಗತಿಯಲ್ಲಿಯೇ ಮುಂದುವರಿದಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ಒಂದು ಮೊಟ್ಟೆಗೆ ₹ 5.13 ಇತ್ತು. ಸೋಮವಾರ ₹ 5.53ಕ್ಕೆ ತಲುಪಿ ಮೊಟ್ಟೆ ಉತ್ಪಾದಕರಿಗೆ ಹರ್ಷ ತಂದಿದೆ.

ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮರ್ಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್ ದರದಲ್ಲಿ ಏರಿಳಿತವಾಗಿದೆ. ಬ್ರಾಯ್ಲರ್ ಪೇರೆಂಟ್ ಕೋಳಿ ದರ ₹ 101ರಲ್ಲಿ ಇದ್ದದ್ದು ₹ 105ಕ್ಕೆ ಹೆಚ್ಚಿದೆ. ಕಮರ್ಷಿಯಲ್ ಬ್ರಾಯ್ಲರ್ ಕೋಳಿ ದರ ಕೆ.ಜಿಗೆ ₹ 85 ಇದ್ದುದು, ₹ 64ಕ್ಕೆ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.