ADVERTISEMENT

ಬೇಸಿಗೆ; ಗುಳೆ ಹೋಗದಂತೆ ಕಟ್ಟೆಚ್ಚರ

ಖಾತ್ರಿಯಲ್ಲಿ ಯೋಜನೆಯಲ್ಲಿ ಉದ್ಯೋಗ ನೀಡಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 9:17 IST
Last Updated 11 ಫೆಬ್ರುವರಿ 2017, 9:17 IST
ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಲೆಕ್ಕ ಪರಿಶೋಧನಾ ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗಣಪತಿ ಇಂಡೋಳ್ಕರ್‌ ಮಾತನಾಡಿದರು
ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಲೆಕ್ಕ ಪರಿಶೋಧನಾ ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗಣಪತಿ ಇಂಡೋಳ್ಕರ್‌ ಮಾತನಾಡಿದರು   

ಹುಣಸೂರು: ‘ಬೇಸಿಗೆ ಎದುರಾಗಿದ್ದು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಗುಳೆ ಹೋಗದಂತೆ  ತಡೆಯಲು ಅವರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಲು ತಾಲ್ಲೂಕು ಆಡಳಿತ ಸಜ್ಜಾಗಿದೆ’ ಎಂದು ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗಣಪತಿ ಇಂಡೋಳ್ಕರ್‌ ಹೇಳಿದರು.

ತಾಲ್ಲೂಕಿನ ನೇರಳಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ 2016–17ನೇ ಸಾಲಿನ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಮತ್ತಷ್ಟು ಹೆಚ್ಚು ಅನುದಾನ ಕಾದಿರಿಸಿದೆ ಎಂದರು.

ಗ್ರಾಮದ ಪರಿಮಿತಿಯಲ್ಲಿ ಸಿಗುವ ಅನೇಕ ಸರ್ಕಾರಿ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಕೂಲಿ ಸೃಷ್ಟಿಸಿ ಬೇಸಿಗೆಯಲ್ಲಿ ನೆಮ್ಮದಿ ಜೀವನ ನಡೆಸಲು ಪಿಡಿಒಗಳು ಜವಾಬ್ದಾರಿ ಹೊರಬೇಕು ಎಂದರು.

ಸಭೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧಕ ಹಾಗೂ ತಾಲ್ಲೂಕು ಸಂಯೋಜಕ ಯೋಗೇಶ್‌  ಮಾತನಾಡಿ,  ಪಂಚಾಯಿತಿ ವತಿಯಿಂದ 59 ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಇವುಗಳಲ್ಲಿ ಗ್ರಾಮ ಪರಿಮಿತಿಯೊಳಗಿನ ಶಾಲಾ ಕಾಪೌಂಡ್‌ ನಿರ್ಮಾಣ, ರಾಜಕಾಲುವೆ, ಚರಂಡಿ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ.

ಕಾಡಂಚಿನ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿದ್ದರೂ ಕಾಡಾನೆ ಹಾವಳಿ ಹೆಚ್ಚಿದೆ. ರಾತ್ರಿ ಕಾವಲು ಕಾಯಲು ನರೇಗಾ ಯೋಜನೆಯಲ್ಲಿ ಕಾವಲುಗಾರರನ್ನು ನೇಮಿಸಿಕೊಳ್ಳುವ ಅವಕಾಶ  ಕಲ್ಪಿಸಲಾಗಿದೆ ಎಂದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್‌, ಉಪಾಧ್ಯಕ್ಷ ಈಶ್ವರ್,  ತಾ.ಪಂ ಸದಸ್ಯೆ ಪುಷ್ಪಲತ ಗಣಪತಿ ,ರೂಪಾ ನಂದೀಶ್‌, ತಾ.ಪಂ ಮಾಜಿ ಸದಸ್ಯ ಗಣಪತಿ, ಪಿ.ಡಿ.ಒ. ಮಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.