ADVERTISEMENT

‘ಬೇಸಿಗೆ ಸಂಭ್ರಮ’ ನಮಗೆ ಬೇಡ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 5:38 IST
Last Updated 12 ಏಪ್ರಿಲ್ 2017, 5:38 IST

ಮೈಸೂರು: ಸರ್ಕಾರಿ ಶಾಲೆಗಳ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸಲು ಉದ್ದೇಶಿಸಿರುವ ‘ಬೇಸಿಗೆ ಸಂಭ್ರಮ’ಕ್ಕೆ ಶಿಕ್ಷಕ ಸಮುದಾಯ ವಿರೋಧ ವ್ಯಕ್ತಪಡಿಸಿದೆ.

ಬಿರುಬೇಸಿಗೆಯಲ್ಲಿ ನೆತ್ತಿ ಸುಡಿಸಿಕೊಳ್ಳುವ ಅಗತ್ಯವಿಲ್ಲ. ಬೇಸಿಗೆ ರಜೆ ನೀಡುವುದು ಮಾನಸಿಕ, ದೈಹಿಕವಾಗಿ ಸದೃಢರಾಗಲು; ದುರ್ಬಲಗೊಳ್ಳಲು ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಬೇಸಿಗೆ ರಜೆಯ ವೇಳೆ ಐದು ವಾರ ಸತತವಾಗಿ ವಿದ್ಯಾರ್ಥಿಗಳಿಗಾಗಿ ಶಿಬಿರ ನಡೆಸುವುದು ಸೂಕ್ತವಲ್ಲ. ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳಿಗೆ ಬರುವುದಿಲ್ಲ. ರಜೆಯನ್ನು ವಿದ್ಯಾರ್ಥಿಗಳು, ಶಿಕ್ಷಕರಿಗೆ ನೀಡುವ ಉದ್ದೇಶವೇ ಮಾನಸಿಕ ಹಾಗೂ ದೈಹಿಕವಾಗಿ ದೃಢಗೊಳ್ಳಲು. ಈ ಕಾರ್ಯಕ್ರಮವು ಈ ಉದ್ದೇಶವನ್ನೇ ದುರ್ಬಲಗೊಳಿಸಿ ಕಲಿಕೆಯನ್ನು ವಿಚಲಿತ ಗೊಳಿಸುತ್ತದೆ ಎಂದು ಪ್ರತಿಕ್ರಿಯಿಸಿದರು.

ADVERTISEMENT

ವರ್ಷವಿಡೀ ವಿದ್ಯಾರ್ಥಿಗಳು ಶಿಕ್ಷಕರನ್ನು ನೋಡಿರುತ್ತಾರೆ. ಮತ್ತೆ ಬೇಸಿಗೆ ರಜೆಯಲ್ಲೂ ಅವರನ್ನೇ ನೋಡಬೇಕು ಎಂದರೆ ಹೇಗೆ? ಈ ಶಿಬಿರವನ್ನು ನಡೆಸಲೇಬೇಕು ಎನ್ನುವುದೇ ಆದಲ್ಲಿ, ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸುವ ಮೂಲಕ ಅಥವಾ ಬಿ.ಇಡಿ, ಡಿ.ಇಡಿ ತರಬೇತಿ ಪಡೆದ ನಿರುದ್ಯೋಗಿ ಶಿಕ್ಷಕರಿಗೆ ಶಿಬಿರದ ಜವಾಬ್ದಾರಿ ನೀಡುವುದು ಒಳಿತು ಎಂದು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

‘ಅಲ್ಲದೇ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್‌ ಸೇಠ್‌ ಹಾಗೂ ಆಯುಕ್ತರಾದ ಸೌಜನ್ಯಾ ಅವರಿಗೂ ಮನವಿ ಸಲ್ಲಿಸಿದ್ದೇವೆ. ಸಚಿವರೂ ಸೇರಿದಂತೆ ನಮಗೆ ಈ ಕುರಿತು ಪೂರಕವಾಗಿ ಸ್ಪಂದನೆ ಸಿಗುವ ವಿಶ್ವಾಸವಿದೆ’ ಎಂದು ಹೇಳಿದರು.

ಸೇತುಬಂಧ ಜತೆ ನಡೆಸಿದರೆ ತಕರಾರಿಲ್ಲ:‘ಅಂತೂ, ಈ ಕಾರ್ಯಕ್ರಮವನ್ನು ನಡೆಸಲೇಬೇಕು ಎನ್ನುವುದಾದರೆ, ಈ ಕಾರ್ಯಕ್ರಮವನ್ನು ಜೂನ್ ತಿಂಗಳಲ್ಲಿ ನಡೆಸುವ ‘ಸೇತುಬಂಧ’ದ ಜತೆಗೆ ನಡೆಸಲಿ. ಇದಕ್ಕೆ ನಮ್ಮ ತಕರಾರೇನಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.