ADVERTISEMENT

ಭೂಮಿ ದುರ್ಬಳಕೆ; ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 4:36 IST
Last Updated 16 ಮಾರ್ಚ್ 2017, 4:36 IST

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಗಿರಿ ಜನರ ಭೂಮಿಯಲ್ಲಿ ಕೇರಳ ರಾಜ್ಯ ದವರು ಶುಂಠಿ ಬೆಳೆಯುತ್ತಿರುವ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗಿರಿಜನರಿಗೆ ಸಾಮಾಜ ಕಲ್ಯಾಣ ಹಾಗೂ ಅರಣ್ಯ ಇಲಾಖೆ ನೀಡಿರುವ ಕೃಷಿ ಭೂಮಿ ಅನ್ಯರ ಪಾಲಾಗಿದೆ. ಈ ಭೂಮಿ ಕೇರಳದವರ ಶುಂಠಿ ಬೇಸಾಯಕ್ಕೆ
ಬಳಕೆ ಯಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ನೀಡಿದ್ದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಸಮಾಜ ಕಲ್ಯಾಣ ಇಲಾಖೆಗೆ ಪುನರ್ವಸತಿ ಕೇಂದ್ರದ ನಿವಾಸಿಗಳು ನೀಡಿದ್ದ ದೂರಿನ ಆಧಾರದ ಮೇರೆಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಉಪವಿಭಾಗಾಧಿಕಾರಿಗೆ ದೂರು ನೀಡಲಾಗಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ಗಿರಿಜನರ ಕೃಷಿ ಭೂಮಿ ದುರ್ಬಳಕೆ ಆಗುತ್ತಿರುವುದು ಸಾಬೀತಾದರೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೊನ್ನೇಗೌಡ ತಿಳಿಸಿದರು.

ADVERTISEMENT

‘ಎರಡು ದಿನದ ಒಳಗೆ ಅಕ್ರಮವಾಗಿ ಶುಂಠಿ ಬೇಸಾಯ ಮಾಡುತ್ತಿರುವ ಸತ್ಯಾಸತ್ಯತೆ ಹೊರ ಬರಲಿದ್ದು, ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿ ಜೆ.ಕೆ.ಮಣಿ, ಜೆ.ಕೆ. ತಿಮ್ಮಯ್ಯ ಮಾತನಾಡಿ, ‘ತಾಲ್ಲೂಕು  ಅಧಿಕಾರಿಯಿಂದ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೂ ಈ ದೂರು ರವಾನಿಸಲಾಗಿದೆ. ಭರತವಾಡಿ  ಮತ್ತು ಹಳೆ ಪೆಂಜಳ್ಳಿ ಗ್ರಾಮದಲ್ಲಿ 24 ಮಂದಿ ಗಿರಿಜನರಿಗೆ ನೀಡಿರುವ ಭೂಮಿಯಲ್ಲಿ ಅಕ್ರಮವಾಗಿ ಶುಂಠಿ ಬೆಳೆಯಲಾ ಗುತ್ತಿದೆ.  ಭೂಮಿ ಗುತ್ತಿಗೆ ನೀಡಿದ ಗಿರಿಜನರು ಮದ್ಯವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಗಿರಿಜನರ ದೌರ್ಜನ್ಯ ಪ್ರಕರಣ ದಾಖಲಿಸುವಂತೆ ಈಗಾಗಲೇ ಪೊಲೀಸರಿಗೂ ಮನವಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

**

ವಿದ್ಯುತ್ ಕಳ್ಳರ ಮೇಲೆ ‘ಸೆಸ್ಕ್’ ದಾಳಿ

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಶುಂಠಿ ಬೇಸಾಯ ಮಾಡುತ್ತಿರುವವರು ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಹೊಂದಿರುವ ಬಗ್ಗೆ ಬಂದ ದೂರಿನ ಮೇರೆಗೆ ‘ಸೆಸ್ಕ್’ ಜಾಗೃತ ದಳ ಮಂಗಳವಾರ ದಾಳಿ ನಡೆಸಿತು.

‘ಪುನರ್ವಸತಿ ಕೇಂದ್ರ ಘಟಕ 1, 2 ಮತ್ತು 6ರಲ್ಲಿ 60ಕ್ಕೂ ಹೆಚ್ಚು ಜನರು ಶುಂಠಿ ಬೇಸಾಯ ಮಾಡು ತ್ತಿದ್ದು, ಬಹುತೇಕರು ಕೇರಳದವ ರಾಗಿದ್ದಾರೆ. ಇವರು ಶುಂಠಿ ಬೇಸಾಯಕ್ಕೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಹೊಂದಿರುವ ಬಗ್ಗೆ ಇಲಾಖೆಗೆ ದೂರು ಬಂದಿತ್ತು. ಈ ಬಗ್ಗೆ ಒಂದು ವಾರದಿಂದ ಪರಿಶೀಲನೆ ನಡೆಸಲಾಯಿತು. ದಾಳಿ ಸಂದರ್ಭ ದಲ್ಲಿ ಘಟಕ 6ರಲ್ಲಿ ಮೋಹನ್‌ ಎಂಬುವವರು ಅಕ್ರಮ ಸಂಪರ್ಕ ಪಡೆದಿರುವುದು ಪತ್ತೆಯಾಯಿತು. ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸ ಲಾಗಿದೆ’ ಎಂದು ಜಿಲ್ಲಾ ಸೆಸ್ಕ್ ಜಾಗೃತ ದಳದ ಅಧಿಕಾರಿ ತಪಸಂ ತಿಳಿಸಿದ್ದಾರೆ.

‘ಹುಣಸೂರು, ಎಚ್‌.ಡಿ.ಕೋಟೆ ಹಾಗೂ ತಿ.ನರಸೀಪುರ ತಾಲ್ಲೂಕಿನ ಹಲವೆಡೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಬೇಸಾಯ ನಡೆಸುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಈ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ಇಲ್ಲಿವರೆಗೆ ಜಿಲ್ಲೆಯಲ್ಲಿ 7 ಪ್ರಕರಣ ದಾಖಲಿಸಲಾಗಿದೆ. ಹುಣಸೂರು ತಾಲ್ಲೂಕಿನಲ್ಲಿ ಶುಂಠಿ ಬೇಸಾಯ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಬಹು ತೇಕರು ಅಕ್ರಮ ಸಂಪರ್ಕ ಹೊಂದಿ ರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಮುಂದಿನ ವಾರದಲ್ಲೂ ಜಾಗೃತಿ ದಳ ಕಾರ್ಯಾಚರಣೆ ನಡೆಸಲಿದೆ’ ಎಂದರು.

‘ಹುಣಸೂರು ತಾಲ್ಲೂಕಿನ ನಾಗಾಪುರ ಹಾಗೂ ಶೆಟ್ಟಹಳ್ಳಿ ಭಾಗದಲ್ಲಿ 7 ಅಕ್ರಮ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಇದ್ದು, ಶೀಘ್ರದಲ್ಲೇ ದಾಳಿ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.