ADVERTISEMENT

ಮಡಿಕೇರಿಯಲ್ಲಿ ಎಡಿಜಿಪಿ, ಐಜಿಪಿ ಮೊಕ್ಕಾಂ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2016, 9:15 IST
Last Updated 9 ನವೆಂಬರ್ 2016, 9:15 IST

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ನ.10ರಂದು ನಡೆಯುವ ಟಿಪ್ಪು ಜಯಂತಿಗೆ ಭಾರಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಎಡಿಜಿಪಿ) ಸುನಿಲ್‌ ಅಗರವಾಲ್‌ ಹಾಗೂ ದಕ್ಷಿಣ ವಲಯದ ಐಜಿಪಿ ಬಿ.ಕೆ. ಸಿಂಗ್‌ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದು, ಇವರ ಮೇಲುಸ್ತುವಾರಿಯಲ್ಲಿ ಜಯಂತಿಯ ಬಂದೋಬಸ್ತ್‌ ನಡೆಯಲಿದೆ.

ಕಳೆದ ವರ್ಷ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಕಾರಣ ಮಡಿಕೇರಿಯಲ್ಲಿ ಗಲಭೆ ನಡೆದಿತ್ತು. ಈ ಬಾರಿ ಎರಡು ದಿನ ಮೊದಲೇ ಕೊಡಗು ಜಿಲ್ಲೆಯು ಖಾಕಿ ಕಣ್ಗಾವಲಿಗೆ ಜಾರಿದ್ದು ಎಲ್ಲೆಲ್ಲೂ ಪೊಲೀಸ್‌ ಸರ್ಪಗಾವಲು ಕಾಣಿಸುತ್ತಿದೆ.

ಮಂಗಳವಾರ ಸಂಜೆ ಬೇರೆಬೇರೆ ಜಿಲ್ಲೆಗಳಿಂದ ಪೊಲೀಸರು ಬಂದಿದ್ದು, ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತ, ಖಾಸಗಿ ಬಸ್‌ ನಿಲ್ದಾಣ, ಚೌಕಿ, ಮಹದೇವಪೇಟೆ ಸೇರಿದಂತೆ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಬೀಡುಬಿಟ್ಟಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳು ಹಾಗೂ ವಾಹನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಮಾತನಾಡಿ, ಕೊಡಗು ಜಿಲ್ಲೆಯ ಭದ್ರತೆಗೆ ಎಡಿಜಿಪಿ, ಐಜಿಪಿ, ಇಬ್ಬರು ಎಸ್‌ಪಿ ದರ್ಜೆಯ ಅಧಿಕಾರಿಗಳು, 8 ಮಂದಿ ಡಿವೈಎಸ್‌ಪಿ, 20 ಇನ್‌ಸ್ಪೆಕ್ಟರ್‌, 170 ಮಂದಿ ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಅಸ್ಟಿಟೆಂಟ್‌ ಸಬ್‌ಇನ್‌ಸ್ಪೆಕ್ಟರ್‌, 1,450 ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌, ಮಹಿಳಾ ಕಾನ್‌ಸ್ಟೆಬಲ್‌, 500 ಮಂದಿ ಹೋಂಗಾರ್ಡ್ಸ್‌, 3 ತುಕಡಿ ಕ್ಷಿಪ್ರ ಕಾರ್ಯಾಚರಣೆ ಪಡೆ (120 ಸಿಬ್ಬಂದಿ), 12 ಕೆಎಸ್‌ಆರ್‌ಪಿ ತುಕಡಿ, 23 ಡಿಎಆರ್‌ ತುಕಡಿ, 170 ಸೆಕ್ಟರ್‌ ಮೊಬೈಲ್‌ ವಾಹನ, ರಾತ್ರಿಯ ಗಸ್ತಿಗೆ 24 ಸೆಕ್ಟರ್‌ ಮೊಬೈಲ್‌ ವಾಹನ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮರ ಕಡಿದರೆ ಕೇಸ್‌ ಎಚ್ಚರಿಕೆ:  ಕಳೆದ ವರ್ಷ ಟಿಪ್ಪು ಜಯಂತಿ ವೇಳೆ ಕೆಲವು ರಸ್ತೆಗಳಲ್ಲಿ ರಾತ್ರಿ ವೇಳೆ ಮರ ಕಡಿದು ರಸ್ತೆಗೆ ಅಡ್ಡಲಾಗಿ ಹಾಕಲಾಗಿತ್ತು. ಈ ವರ್ಷ ಆ ರೀತಿ ಮಾಡಿದವರ ಮೇಲೆ ಕಳವು ಪ್ರಕರಣ ದಾಖಲಿಸಲಾಗುವುದು. ರಸ್ತೆ ಸಂಚಾರಕ್ಕೆ ಅಡ್ಡಿಯಾದರೆ ತುರ್ತಾಗಿ ತೆರವು ಮಾಡಲು ಜಿಲ್ಲೆಯಾದ್ಯಂತ 24 ಸೆಕ್ಟರ್‌ ವಾಹನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವಾಹನದಲ್ಲಿ ಮರ ಕತ್ತರಿಸಲು ಗರಗಸ, ಹಗ್ಗ, ಬೆಂಕಿ ನಂದಿಸುವ ಪರಿಕರ ಇರಲಿದೆ ಎಂದು ಮಾಹಿತಿ ನೀಡಿದರು.

ರಾತ್ರಿ ವೇಳೆಯಲ್ಲಿ ಕಿಡಿಗೇಡಿಗಳ ಚಲನ, ವಲನ ವೀಕ್ಷಣೆಗೆ ಬೈನಾಕ್ಯೂಲರ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲಾ ಪೊಲೀಸ್‌ ವಾಹನಗಳಿಹೆ ಗ್ರಿಲ್‌ ಅಳವಡಿಕೆ ಮಾಡಲಾಗಿದೆ. ಬುಧವಾರ ಸಂಜೆಯಿಂದ ಗಡಿಭಾಗದ ರಸ್ತೆಗಳನ್ನು ಬಂದ್‌ ಮಾಡಿ ವಾಹನ ಸಂಚಾರ ನಿರ್ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.

ಗಡಿಭಾಗದಲ್ಲಿ ಭದ್ರತೆ ಹೆಚ್ಚಳ: ಜಿಲ್ಲೆಯ 10 ಕಡೆ ಚೆಕ್‌ಪೋಸ್ಟ್‌   ಆರಂಭಿಸಲಾಗಿದೆ. ಗಡಿಭಾಗಗಳಾದ ಕುಟ್ಟ, ಮಾಕುಟ್ಟ, ಕರಿಕೆ, ಸಂಪಾಜೆ, ಕೊಪ್ಪಗೇಟ್‌, ಆನೆಚೌಕೂರು, ಮಾಲ್ದಾರೆ, ಶನಿವಾರಸಂತೆ, ಕೊಡ್ಲಿಪೇಟೆ, ಶಿರಂಗಾಲ, ಸಂಪಾಜೆ, ಸಿದ್ದಾಪುರದಲ್ಲಿ ವಾಹನ ತಪಾಸಣೆ ತೀವ್ರಗೊ    ಳಿಸಲಾಗಿದೆ. ಅಲ್ಲಿ ತಪ್ಪಿಸಿಕೊಂಡು ಒಳನುಗ್ಗಿದರೆ ಜಿಲ್ಲೆಯ 40 ಆಯಕಟ್ಟಿನಲ್ಲಿ ಸ್ಥಳಗಳಲ್ಲಿ        ನಾಕಾಬಂದಿ ವ್ಯವಸ್ಥೆ ಮಾಡಲಾಗಿದೆ. ಗಡಿಭಾಗದಲ್ಲಿ ಪ್ರವೇಶ ಪಡೆಯುವ ಪ್ರತಿವಾಹನ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದು, ಪ್ರತಿಕ್ಷಣದ ಮಾಹಿತಿ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

80 ವಿಡಿಯೊ ಕ್ಯಾಮೆರಾ: ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ಹಾಗೂ ಶನಿವಾರಸಂತೆಯಲ್ಲಿ ನಡೆಯುವ ಎಲ್ಲ ಚಲನ ವಲನಗಳನ್ನು 80 ವಿಡಿಯೊ ಕ್ಯಾಮೆರಾಗಳಲ್ಲಿ ರೆಕಾರ್ಡ್‌ ಮಾಡಲಾಗುವುದು. ಇನ್ನೂ 100 ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಮಾದಾಪುರ, ಹೊಸತೋಟ, ಶನಿವಾರಸಂತೆ, ನೆಲ್ಲಿಹುದಿಕೇರಿ, ಮೂರ್ನಾಡು, ಗೋಣಿಕೊಪ್ಪಲು, ಕೊಡ್ಲಿಪೇಟೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಕಾನೂನು ಉಲ್ಲಂಘಿಸಿದರೆ ಕ್ರಮ: ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಮಾಜಘಾತುಕ ಶಕ್ತಿಗಳನ್ನು ಬಂಧಿಸಿದರೆ ತಕ್ಷಣವೇ ಕ್ರಮ ಕೈಗೊಳ್ಳಲು ಅನುಕೂಲ ಆಗುವಂತೆ ವಿಶೇಷ ಕಾರ್ಯ ನಿರ್ವಹಾಕ ದಂಡಾಧಿಕಾರಿಗಳ ನೇಮಕಕ್ಕೆ ಮನವಿ ಮಾಡಲಾಗಿತ್ತು. ಅದರಂತೆ 10 ಮಂದಿಯನ್ನು ಸರ್ಕಾರ ನೇಮಿಸಿ ಆದೇಶಿಸಿದೆ. ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಸಹಾಯವಾಗಲಿದೆ ಎಂದು ಎಸ್‌ಪಿ ಎಚ್ಚರಿಕೆ ನೀಡಿದರು.

ಇಂದು ಮಡಿಕೇರಿಯಲ್ಲಿ ಪಥಸಂಚಲನ:  ಕಾನೂನು ಉಲ್ಲಂಘಿಸುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ವಿವಿಧೆಡೆ ಸಾರ್ವಜನಿಕರಲ್ಲಿ ಧೈರ್ಯ ತುಂಬಿ ಆತಂಕ ದೂರ ಪಥಸಂಚಲನ ನಡೆಸಲಾಗಿದೆ. ಮಡಿಕೇರಿಯಲ್ಲಿ ಬುಧವಾರ ಸಂಜೆ 4ಕ್ಕೆ ಪಥಸಂಚಲನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ನ.10ರಂದು ಕೋಟೆ ಆವರಣದಲ್ಲಿ ಟಿಪ್ಪು ಜಯಂತಿ ಆಚರಿಸಲಾಗುವುದು. ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿಯಿದ್ದು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮಾಜಘಾತುಕ ಶಕ್ತಿಗಳಿಮ ಆಸ್ಪದ ನೀಡದಂತೆ ಎಲ್ಲ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಕೊಡಗು ಶಾಂತಿಪ್ರಿಯ ಜಿಲ್ಲೆ. ಇಲ್ಲಿ ಶಾಂತಿಗೆ ಭಂಗವಾಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕರಿಸಬೇಕು. ಇದೂ ಸಹ ಸರ್ಕಾರಿ ಕಾರ್ಯಕ್ರಮವಾಗಿದ್ದು, ಎಲ್ಲ ಜಯಂತಿಗಳಂತೆಯೇ ಇದನ್ನು ಆಚರಣೆ ಮಾಡಲಾಗುವುದು. ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಮುದ್ರಿಸಲಾಗುವುದು ಹಾಗೂ ಗಣ್ಯರನ್ನೂ ಆಹ್ವಾನಿಸಲಾಗುವುದು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‌ಕುಮಾರ್ ಹಾಜರಿದ್ದರು.

ಶಾಲಾ– ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಇಲ್ಲ
ಮಡಿಕೇರಿ:  ಜಿಲ್ಲೆಯ ಶಾಲಾ– ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಇದೇ 10ರಂದು ರಜೆ ಇರುವುದಿಲ್ಲ. ಎಂದಿನಂತೆಯೇ ಕಾರ್ಯ ನಿರ್ವಹಿಸಲಿವೆ. ಎಲ್ಲವೂ ದಿನನಿತ್ಯದಂತೆ ಸುಲಲಿತವಾಗಿ ನಡೆಯಬೇಕೆಂಬುದು ಜಿಲ್ಲಾಡಳಿತದ ಉದ್ದೇಶವಾಗಿದೆ ಎಂದು ಡಿಸಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಹೇಳಿದರು.

ಜಯಂತಿಗೆ ಆಹ್ವಾನ ನೀಡಿದವರಿಗಷ್ಟೇ ಪ್ರವೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮ ನಡೆಯುವ ಕೋಟೆ      ಆವರಣದಲ್ಲಿ ಒಟ್ಟು 34 ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT