ADVERTISEMENT

ಮನೆ ಬಾಗಿಲಲ್ಲೇ ಖಾತೆಗೆ ಹಣ ಜಮೆ

ಡಿಜಿ– ಧನ್ ಮೇಳ; ಡಿಜಿಟಲ್‌ ವಹಿವಾಟು ಜಾಗೃತಿ; ಇಂಟರ್‌ನೆಟ್‌ ಬ್ಯಾಂಕಿಂಗ್ ಕುರಿತು ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 9:01 IST
Last Updated 11 ಫೆಬ್ರುವರಿ 2017, 9:01 IST
ಮೈಸೂರಿನ ಜೆ.ಕೆ.ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಡಿಜಿ–ಧನ್‌ ಮೇಳದಲ್ಲಿ ನಗದುರಹಿತ ವಹಿವಾಟು ಅಂಗವಾಗಿ ಪ್ರದರ್ಶನಕ್ಕೆ ಇಡಲಾಗಿದ್ದ ಸ್ವೈಪಿಂಗ್‌ ಯಂತ್ರವನ್ನು ಕೇಂದ್ರ ಸಾಂಖ್ಯಿಕ ಸಚಿವ ಸದಾನಂದಗೌಡ ಪರಿಶೀಲಿಸಿದರು. ಸಂಸದ ಪ್ರತಾಪಸಿಂಹ, ಕೇಂದ್ರ ಹಣಕಾಸು ಹಾಗೂ ಔದ್ಯಮಿಕ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್‌ ಮೇಘ್ವಾಲ್‌ ಇದ್ದಾರೆ
ಮೈಸೂರಿನ ಜೆ.ಕೆ.ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಡಿಜಿ–ಧನ್‌ ಮೇಳದಲ್ಲಿ ನಗದುರಹಿತ ವಹಿವಾಟು ಅಂಗವಾಗಿ ಪ್ರದರ್ಶನಕ್ಕೆ ಇಡಲಾಗಿದ್ದ ಸ್ವೈಪಿಂಗ್‌ ಯಂತ್ರವನ್ನು ಕೇಂದ್ರ ಸಾಂಖ್ಯಿಕ ಸಚಿವ ಸದಾನಂದಗೌಡ ಪರಿಶೀಲಿಸಿದರು. ಸಂಸದ ಪ್ರತಾಪಸಿಂಹ, ಕೇಂದ್ರ ಹಣಕಾಸು ಹಾಗೂ ಔದ್ಯಮಿಕ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್‌ ಮೇಘ್ವಾಲ್‌ ಇದ್ದಾರೆ   

ಮೈಸೂರು: ಕೆಲಸದಲ್ಲಿ ನಿರತರಾಗಿರುವ ನಿಮಗೆ ಬ್ಯಾಂಕಿಗೆ ತೆರಳಿ ಹಣ ಪಾವತಿ ಸಲು ಸಮಯವಿಲ್ಲವೇ? ಅಗತ್ಯವಿರುವ ಹಣ ಪಡೆಯಲು ಎಟಿಎಂಗೂ ಭೇಟಿ ನೀಡಲು ಸಾಧ್ಯವಿಲ್ಲವೇ? ಹಾಗಾದರೆ ನಿಮ್ಮ ಮನೆಬಾಗಿಲಿಗೆ ಬರಲಿದೆ ಕೆನರಾ ಬ್ಯಾಂಕಿನ ‘ಮೈಕ್ರೊ ಎಟಿಎಂ’.

‘ಹ್ಯಾಂಡ್‌ ಹೆಲ್ಡ್‌ ಯಂತ್ರ’ ಹಿಡಿದು ಬರುವ ಬ್ಯಾಂಕ್‌ ಸಿಬ್ಬಂದಿಯಿಂದ ಖಾತೆ ದಾರರು ಹಣ ಪಡೆಯಲು ಅವಕಾಶ ವಿದೆ. ಮನೆಯಲ್ಲಿರುವ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಲು ಸಾಧ್ಯವಿದೆ. ಯಂತ್ರದ ಮೇಲೆ ಬೆರಳಚ್ಚು ಮೂಡಿದ ಕ್ಷಣಾರ್ಧದಲ್ಲಿ ಆಧಾರ್‌ ಜತೆ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ತೆರೆದುಕೊಳ್ಳಲಿದೆ. ನಿತ್ಯ ₹ 5 ಸಾವಿರದ ವರೆಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಸಾಲ ವಸೂಲಿಗೆ ಬಳಸುತ್ತಿದ್ದ ವ್ಯವಸ್ಥೆ ಕೆಲ ತಿಂಗಳಿಂದ ನಗರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ತರಕಾರಿ ಮಾರುಕಟ್ಟೆ, ರಸ್ತೆಬದಿ ವ್ಯಾಪಾರಿಗಳು ಇದರ ಸದುಪ ಯೋಗ ಪಡೆದುಕೊಳ್ಳುತ್ತಿರುವ ಬಗೆ ಕುರಿತು ‘ಡಿಜಿ–ಧನ್‌ ಮೇಳ’ದಲ್ಲಿ ಜನರಿಗೆ ಮಾಹಿತಿ ನೀಡಲಾಯಿತು.

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರ ಜ್ಞಾನ ಸಚಿವಾಲಯ, ನೀತಿ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಜೆ.ಕೆ.ಮೈದಾನದಲ್ಲಿ ಶುಕ್ರವಾರ ನಡೆದ ಡಿಜಿ– ಧನ್‌ ಮೇಳದಲ್ಲಿ ನಗದು ರಹಿತ ವಹಿವಾಟು ಕುರಿತು ಸಾರ್ವಜನಿ ಕರಿಗೆ ಅರಿವು ಮೂಡಿಸಲಾಯಿತು. ಕೆನರಾ, ಸಿಂಡಿಕೇಟ್‌, ಎಸ್‌ಬಿಎಂ, ಎಸ್‌ಬಿಐ, ವಿಜಯ, ಕರ್ಣಾಟಕ ಬ್ಯಾಂಕ್‌, ಬಿಎಸ್‌ಎನ್‌ಎಲ್‌, ಏರ್‌ಟೆಲ್‌,  ಇ–ಆಡಳಿತ ಸೇರಿ 30ಕ್ಕೂ ಅಧಿಕ ಮಳಿಗೆಗಳು ಇಲ್ಲಿದ್ದವು.

ಇ–ವ್ಯಾಲೇಟ್‌, ಪೇಟಿಎಂ ವಹಿ ವಾಟು ಕುರಿತು ಮಾಹಿತಿ ನೀಡಲಾ ಯಿತು. ‘ಸ್ವೈಪಿಂಗ್‌’ ಯಂತ್ರಗಳಿಗೆ ಕೆಲ ವ್ಯಾಪಾರಿಗಳು ಅರ್ಜಿ ಸಲ್ಲಿಸಿದರು. ‘ಇ–ಆಡಳಿತ’ ಇಲಾಖೆಯ ಮಳಿಗೆಯಲ್ಲಿ ಸೆಸ್ಕ್‌ ಬಿಲ್‌, ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೂ ಅನುವು ಮಾಡಿ ಕೊಡಲಾಗಿತ್ತು. ‘ರೂಪೇ, ಯುಪಿಐ, ಮೊಬೈಲ್‌ ಹಾಗೂ ಇಂಟರ್‌ನೆಟ್‌ ಬ್ಯಾಂಕಿಂಗ್ ಕುರಿತು ವಿವರಿಸಲಾಯಿತು.

ನಗದುರಹಿತ ವಹಿವಾಟು ಚಳವಳಿ: ಕೇಂದ್ರ ಹಣಕಾಸು ಹಾಗೂ ಔದ್ಯಮಿಕ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್‌ ಮೇಘ್ವಾಲ್‌ ಮಾತನಾಡಿ, ‘ನಗದುರಹಿತ ವಹಿವಾಟು ಹೊಸ ದೇನೂ ಅಲ್ಲ. ಆದರೆ, ಗರಿಷ್ಠ ಮುಖಬೆಲೆಯ ನೋಟು ಚಲಾವಣೆ ರದ್ದುಪಡಿಸಿದ ಬಳಿಕ ದೇಶದಲ್ಲಿ ಇದೊಂದು ಚಳವಳಿ ಸ್ವರೂಪ ಪಡೆದಿದೆ. ಇದರಿಂದ ನಗದು ವ್ಯವಸ್ಥೆ ಸಂಪೂರ್ಣವಾಗಿ ತೆರೆ ಮರೆಗೆ ಸರಿಯು ತ್ತದೆ ಎಂಬುದು ತಪ್ಪು ಕಲ್ಪನೆ’ ಎಂದರು.

‘ತೆರಿಗೆ ಪಾವತಿಸುವುದು ಎಲ್ಲರ ಕರ್ತವ್ಯ. ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ತೆರಿಗೆ ಆದಾಯ ಅತ್ಯಗತ್ಯ. ಆದರೆ, ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ವಿರಳ. ಡಿಜಿಟಲ್‌ ವಹಿವಾಟಿನಲ್ಲಿ ತೆರಿಗೆ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಯುವ ಸಮೂಹ ನಗದುರಹಿತ ವಹಿವಾಟಿಗೆ ಉತ್ಸುಕತೆ ತೋರುತ್ತಿದೆ. ಶೇ 60ರಷ್ಟು ಮಂದಿ ಪೆಟ್ರೋಲ್‌ ಬಂಕ್‌ಗಳಲ್ಲಿ ಡಿಜಿಟಲ್‌ ಪಾವತಿ ಮಾಡುತ್ತಿದ್ದಾರೆ’ ಎಂದರು.

ಭಯೋತ್ಪಾದನೆ ನಿಗ್ರಹ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೇಂದ್ರ ಸಾಂಖ್ಯಿಕ ಸಚಿವ ಸದಾನಂದಗೌಡ ಮಾತನಾಡಿ, ‘ಗರಿಷ್ಠ ಮುಖಬೆಲೆಯ ನೋಟು ರದ್ದತಿ ಬಳಿಕ ಭಯೋತ್ಪಾದಕ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ. ಕಾಶ್ಮೀರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ನಕ್ಸಲೀಯರ ಉಪಟಳವೂ ಕಡಿಮೆಯಾಗಿದೆ. ಖೋಟಾ ನೋಟು ಸೇರಿ ಕಾನೂನು ಬಾಹಿರ ಚಟುವಟಿಕೆಗಳು ತಹಬಂದಿಗೆ ಬಂದಿವೆ’ ಎಂದರು.

ಸಂಸದ ಪ್ರತಾಪಸಿಂಹ, ಜಿಲ್ಲಾಧಿಕಾರಿ ಡಿ.ರಂದೀಪ್‌, ವಿಜ್ಞಾನಿ ಆರ್‌.ಪಿಚ್ಚಯ್ಯ, ಡಾ.ಸುನಿಲ್‌ ಪನ್ವಾರ್‌ ಇದ್ದರು.

ಸಾರ್ವಜನಿಕರ ಕೊರತೆ
ಮೈಸೂರು: ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳನ್ನು ಡಿಜಿ–ಧನ್ ಮೇಳಕ್ಕೆ ಕರೆತಂದು ಅರಿವು ಮೂಡಿಸಲಾಯಿತು. ಸ್ವಯಂಪ್ರೇರಣೆಯಿಂದ ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿದ್ದು ವಿರಳ. ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದ್ದ ಉದ್ಘಾಟನೆ ಕಾರ್ಯಕ್ರಮ ನಡೆದಾಗ ಮಧ್ಯಾಹ್ನ 3 ಗಂಟೆ ಕಳೆದಿತ್ತು.

* ಡಿಜಿಟಲ್‌ ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಜನರಲ್ಲಿ ಜಾಗೃತಿಗೆ ಒತ್ತು ನೀಡಲಾಗಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಈಗಾಗಲೇ ಈ ಮೇಳ ನಡೆದಿದೆ
ಡಾ.ಯೋಗೇಶ್‌ ಸೂರಿ, ನೀತಿ ಆಯೋಗದ ಸಲಹೆಗಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.