ADVERTISEMENT

ಮಾಗಳಿ ರವಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 8:56 IST
Last Updated 5 ನವೆಂಬರ್ 2017, 8:56 IST
ಪಿರಿಯಾಪಟ್ಟಣ ಬಿಜೆಪಿ ಮುಖಂಡ ಮಾಗಳಿ ರವಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್‌ಗೆ ಶನಿವಾರ ಮನವಿ ಸಲ್ಲಿಸಿದರು
ಪಿರಿಯಾಪಟ್ಟಣ ಬಿಜೆಪಿ ಮುಖಂಡ ಮಾಗಳಿ ರವಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್‌ಗೆ ಶನಿವಾರ ಮನವಿ ಸಲ್ಲಿಸಿದರು   

ಪಿರಿಯಾಪಟ್ಟಣ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿದ್ದ ತಾಲ್ಲೂಕಿನ ಮಾಗಳಿ ರವಿ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ವರ್ಗಾಯಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಟಿ.ಲಕ್ಷ್ಮಿನಾರಾಯಣ ಒತ್ತಾಯಿಸಿದರು. ತಾಲ್ಲೂಕಿನ ಮಾಗಳಿ ಗ್ರಾಮದಲ್ಲಿ ನಡೆದ ಮಾಗಳಿ ರವಿ ಪುಣ್ಯಸ್ಮರಣೆ ಸಭೆಯಲ್ಲಿ ಅವರು ಮಾತನಾಡಿದರು.

ರವಿ 2016ರ ನ.4ರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಟಿಪ್ಪು ಜಯಂತಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಜಯಂತಿಗೆ ವಿರೋಧ ವ್ಯಕ್ತಪಡಿಸಿ ಮಾಗಳಿಗೆ ಹಿಂತಿರುಗುವಾಗ ಗ್ರಾಮದ ಸಮೀಪ ಶವವಾಗಿ ಪತ್ತೆಯಾಗಿದ್ದರು. ತನಿಖೆ ಕೈಗೊಂಡ ಪೊಲೀಸರು ತನಿಖೆ ಅಂತಿಮ ಹಂತದಲ್ಲಿದೆ ಎಂದೇ ಒಂದು ವರ್ಷ ಕಳೆದಿದ್ದಾರೆ. ಈ ಬಗ್ಗೆ ಯಾವುದೇ ಪ್ರಗತಿ ವರದಿ ನೀಡಿಲ್ಲ ಎಂದು ದೂರಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಜೆ.ರವಿ ಮಾತನಾಡಿ, ರಾಜ್ಯ ಸರ್ಕಾರ ಹಿಂದೂಗಳ ಕೊಲೆ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಹಾಗೂ ಕಾಣದ ಕೈಗಳ ಒತ್ತಡ ಕಾಣುತ್ತಿದೆ ಎಂದು ಆರೋಪಿಸಿದರು.

ADVERTISEMENT

ರಾಜ್ಯ ಸರ್ಕಾರದಿಂದ ರವಿ ಸಾವಿಗೆ ನ್ಯಾಯ ದೊರಕುವುದು ಅನುಮಾನವಾಗುತ್ತಿದೆ. ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸದೆ ಕಾಲಹರಣ ಮಾಡಿರುವುದರಿಂದ ಇದು ಕೊಲೆಯೇ ಎಂಬ ಅನುಮಾನ ಪುಷ್ಠಿಕರಿಸುತ್ತದೆ ಎಂದರು.

ಒಂದು ತಿಂಗಳ ಒಳಗೆ ರವಿ ಹತ್ಯೆಯ ಸಮಗ್ರ ವರದಿ ನೀಡದಿದ್ದಲ್ಲಿ ಕುಟುಂ ಬದವರೊಂದಿಗೆ ಪೊಲೀಸ್ ಠಾಣೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಗಳಿ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಸಿಬಿಐಗೆ ಪ್ರಕರಣ ವರ್ಗಾಯಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕಿರಣ್‌ ಜಯರಾಂಗೌಡ, ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಪ್ರಕಾಶ್‌ ಬಾಬುರಾವ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಂಕರ್, ವಕೀಲ ಎಸ್‌.ಟಿ.ಕೃಷ್ಣಪ್ರಸಾದ್, ರಾಜೇಅರಸ್, ಶಿವರಾಮ್, ಗ್ರಾಮಸ್ಥರಾದ ರವಿ, ಮಣಿ, ರಾಜು, ಮಾಗಳಿ ಸ್ವಾಮಿ, ಕುಂದನಹಳ್ಳಿ ನಾಗೇಶ್, ಸುನಿಲ್, ಅನೂಪ್, ಮೈಲಾರಿ, ಮಲ್ಲೇಶ್, ಮುತ್ತರಾಜ್, ಮಾಗಳಿ ರವಿ ಕುಟುಂಬಸ್ಥರು, ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.