ADVERTISEMENT

ಮುಖ್ಯಮಂತ್ರಿ ಬಂದರೆ ತೆರೆಯುವ ಶೌಚಾಲಯ

ನೇಸರ ಕಾಡನಕುಪ್ಪೆ
Published 23 ಏಪ್ರಿಲ್ 2017, 11:08 IST
Last Updated 23 ಏಪ್ರಿಲ್ 2017, 11:08 IST

ಮೈಸೂರು: ನಗರದ ಟಿ.ಕೆ. ಲೇಔಟ್‌ನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ಮಹಾನಗರಪಾಲಿಕೆ ವತಿಯಿಂದ ನಿರ್ಮಿಸಿರುವ ಶೌಚಾಲ ಯವು ಸದಾಕಾಲ ಮುಚ್ಚೇ ಇರುತ್ತದೆ. ಅಂದ ಹಾಗೆ, ಇದು ತೆರೆಯುವುದು ಯಾವಾಗ ಗೊತ್ತೆ? ಸಿದ್ದರಾಮಯ್ಯ ತಮ್ಮ ಮನೆಗೆ ಭೇಟಿ ಕೊಟ್ಟಾಗ!

–ಹೀಗೆಂದು ಹೇಳುವುದು ನಗರಪಾಲಿಕೆಯ ಅಧಿಕಾರಿಗಳು. ವಾಸ್ತವದಲ್ಲಿ ಈ ಶೌಚಾಲಯ ಬಹುತೇಕ ತೆರೆಯುವುದೇ ಇಲ್ಲ. ಇದಕ್ಕೆ ಸಾಕ್ಷಿಯಾಗಿ ಶೌಚಾಲಯದ ಒಳಗೆಲ್ಲ ಕಸ ಕಡ್ಡಿಯ ರಾಶಿ ತುಂಬಿದ್ದು, ನಿರ್ವಹಣೆ ಇಲ್ಲದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ನಿರ್ಮಿಸಿದ್ದು ಏಕೆ?: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ವಿಶ್ರಾಂತಿಗೆಂದು ಮನೆಗೆ ಬರುವ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಮನೆಯ ಬಳಿ ಸೇರುತ್ತಿದ್ದರು. ಇದು ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡತೊಡಗಿತು. ಭೇಟಿಗೆಂದು ಬರುತ್ತಿದ್ದವರು ರಸ್ತೆ ಮಗ್ಗಲಿನಲ್ಲೇ ಮೂತ್ರ ವಿಸರ್ಜಿಸಿ ದುರ್ನಾತ ಬೀರಲು ಆರಂಭಿಸಿತ್ತು.

ADVERTISEMENT

ಇದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಮನೆ ಅಕ್ಕಪಕ್ಕದ ನಿವಾಸಿಗಳು ಪ್ರತಿಭಟನೆ ನಡೆಸಿ, ಶೌಚಾಲಯ ನಿರ್ಮಿಸುವಂತೆ ನಗರಪಾಲಿಕೆಗೆ ಮನವಿ ಸಲ್ಲಿಸಿದ್ದರು. ಅದರಂತೆ ಪಾಲಿಕೆಯು ಶೌಚಾಲಯ ನಿರ್ಮಿಸಿಕೊಟ್ಟಿತ್ತು. ಆರಂಭದ ಸ್ವಲ್ಪದಿನ ಶೌಚಾಲಯಕ್ಕೆ ಬಾಗಿಲೇ ಇಲ್ಲ ಎಂಬ ದೂರು ಬಂದಿತ್ತು. ಅನಂತರ ಮಹಿಳೆಯರು ಹಾಗೂ ಪುರುಷರ ಶೌಚಾಲಯಗಳೆರಡಕ್ಕೂ ಬಾಗಿಲು ಬಂತು. ಆದರೆ, ಈಗಿನ ಸಮಸ್ಯೆ ಏನೆಂದರೆ, ಈ ಬಾಗಿಲಿಗೆ ಸದಾ ಬೀಗ ಹಾಕಿರುವುದು.

ಏನು ಕಾರಣ?: ಟಿ.ಕೆ.ಬಡಾವಣೆ, ಶಾರದಾದೇವಿನಗರಕ್ಕೆ ಹೊಂದಿ ಕೊಂಡಂತೆ ಇರುವ ಚದುರಂಗ ರಸ್ತೆಯಲ್ಲಿ ಸಿದ್ದರಾಮಯ್ಯ ಅವರ ಮನೆಗೆ ಕೊಂಚ ದೂರದಲ್ಲಿ ಈ ಶೌಚಾಲಯವಿದೆ. ಇಲ್ಲಿ ಯಾವುದೇ ಮನೆಗಳಿಲ್ಲ; ಜನರ ಬಳಕೆಯೂ ಕಡಿಮೆ. ಈ ಕಾರಣಕ್ಕೆ ನಗರಪಾಲಿಕೆಯು ಈ ಶೌಚಾಲಯದ ನಿರ್ವಹಣೆಗಾಗಿ ಗುತ್ತಿಗೆ ಆಹ್ವಾನಿಸಿದರೆ ಯಾರೂ ತೆಗೆದು ಕೊಳ್ಳುತ್ತಿಲ್ಲ. ಹಾಗಾಗಿ, ನಗರ ಪಾಲಿಕೆಯೇ ಈ ಶೌಚಾಲಯ ನಿರ್ವಹಣೆ ಮಾಡುತ್ತಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಕ್ಕೆ ಭೇಟಿ ನೀಡುವ ಪ್ರವಾಸ ಕಾರ್ಯಕ್ರಮದ ಪಟ್ಟಿ ಕೈಗೆ ಸಿಕ್ಕ ಕೂಡಲೇ ನಗರಪಾಲಿಕೆ ವತಿಯಿಂದ ಶೌಚಾಲಯದ ಬಾಗಿಲು ತೆರೆಯುತ್ತೇವೆ. ನಗರ ಪಾಲಿಕೆಯ ಪೌರಕಾರ್ಮಿಕರೇ ಶುಚಿಗೊಳಿಸುತ್ತಾರೆ. ಸಿದ್ದರಾಮಯ್ಯ ನಿರ್ಗಮಿಸಿದ ಕೂಡಲೇ ಬಾಗಿಲು ಹಾಕಿಬಿಡುತ್ತೇವೆ’ ಎಂದು ನಗರಪಾಲಿಕೆ ಆಯುಕ್ತ ಜಿ.ಜಗದೀಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಅವರು ಆಗಿಂದಾಗ್ಗೆ ನಗರಕ್ಕೆ ಆಗಮಿಸುತ್ತಲೇ ಇರುತ್ತಾರೆ. ನಮ್ಮ ಮನೆಗಳ ಬಳಿ ಅವರ ಅಭಿಮಾನಿಗಳು ಸೇರಿ ಗಲೀಜು ಮಾಡುವುದು ಇನ್ನೂ ನಿಂತಿಲ್ಲ. ಶೌಚಾಲಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅದು ದೂರ ಇರುವ ಕಾರಣಕ್ಕೆ ನಮಗೆ ಉಪಯೋಗವೇನೂ ಆಗಿಲ್ಲ’ ಎಂದು ಸ್ಥಳೀಯರೊಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.