ADVERTISEMENT

ಮೈಸೂರು ವಿ.ವಿ.ಗೆ ಹೂವಿನ ಮೆರುಗು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 9:11 IST
Last Updated 14 ಸೆಪ್ಟೆಂಬರ್ 2017, 9:11 IST
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಫಲಪುಷ್ಪ ಪ್ರದರ್ಶನಕ್ಕಾಗಿ ಸಿದ್ಧತೆ ನಡೆಸುತ್ತಿರುವುದು
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಫಲಪುಷ್ಪ ಪ್ರದರ್ಶನಕ್ಕಾಗಿ ಸಿದ್ಧತೆ ನಡೆಸುತ್ತಿರುವುದು   

ಮೈಸೂರು: ನಾಡಹಬ್ಬ ದಸರೆಗೆ ಮೈಸೂರು ವಿಶ್ವವಿದ್ಯಾನಿಲಯ ಸಿಂಗಾರ ಗೊಳ್ಳುತ್ತಿದೆ. ಸಾವಿರಾರು ಹೂವಿನ ಗಿಡಗಳು ಮಾನಸ ಗಂಗೋತ್ರಿಯಲ್ಲಿ ಅರಳಿ ನಿಂತಿವೆ.
ಈ ವರ್ಷವೂ ದಸರೆಗಾಗಿ ವಿ.ವಿ ಫಲಪುಷ್ಪ ಪ್ರದರ್ಶನ ನೀಡಲಿದೆ. ಕೇವಲ ಕುಕ್ಕರಹಳ್ಳಿ ಕೆರೆ, ಕ್ರಾಫರ್ಡ್ ಭವನಕ್ಕೆ ಮಾತ್ರ ಸೀಮಿತಗೊಳ್ಳದೆ, ಇಡೀ ಮಾನಸ ಗಂಗೋತ್ರಿಯನ್ನು ಹೂವಿನಿಂದ ಅಲಂಕೃತಗೊಳಿಸುತ್ತಿರುವುದು ವಿಶೇಷ. ಇದಕ್ಕಾಗಿ ಹೈಬ್ರಿಡ್‌ ಹೂವಿನ ಗಿಡಗಳನ್ನು ಇದಕ್ಕೆಂದೇ ಹಲವು ತಿಂಗಳಿಂದ ಬೆಳೆಸಿ ಸಿದ್ಧತೆ ನಡೆಸಲಾಗಿದೆ. ಪ್ರದರ್ಶನವು ಸೆ. 21ರಿಂದ ಅ. 2ರ ವರೆಗೆ 12 ದಿನಗಳ ಕಾಲ ನಡೆಯಲಿದೆ.

20 ಸಾವಿರ ಹೆಚ್ಚು ಗಿಡ: ಮೈಸೂರು ವಿ.ವಿ ತೋಟಗಾರಿಕಾ ವಿಭಾಗವು ಈ ವರ್ಷ 20 ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಪ್ರದರ್ಶಿಸು ತ್ತಿದೆ. ಕುಕ್ಕರಹಳ್ಳಿ ಕೆರೆಯನ್ನು ಕೇಂದ್ರೀ ಕರಿಸಿ, ಮಾನಸ ಗಂಗೋತ್ರಿಯ ಹಲವು ಭಾಗಗಳಲ್ಲಿ ಹೂವಿನ ಗಿಡಗಳನ್ನು ಅಲಂಕರಿಸಲಾಗುತ್ತಿದೆ. ಕುಕ್ಕರಹಳ್ಳಿ ಕೆರೆಯಲ್ಲೇ 8 ಸಾವಿರ ಹೂವಿನ ಗಿಡಗಳನ್ನು ಇಡಲಾಗುತ್ತಿದೆ. ಕ್ರಾಫರ್ಡ್ ಭವನ ಸೇರಿದಂತೆ ಹಲವು ಮುಖ್ಯ ಸ್ಥಳಗಳಲ್ಲಿ 12 ಸಾವಿರ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಹೈಬ್ರಿಡ್‌ ಗಿಡಗಳನ್ನು ಇಡುತ್ತಿರು ವುದು ಈ ಬಾರಿಯ ವಿಶೇಷ. ವಿವಿಧ ಪ್ರಭೇದದ ಗಿಡಗಳ ಬೀಜಗಳನ್ನು ಹೊರರಾಜ್ಯಗಳಿಂದ ತರಿಸಲಾಗಿದೆ. ನಂತರ, ಅವನ್ನು ತೋಟಗಾರಿಕಾ ಇಲಾಖೆಯಲ್ಲಿ ಬೆಳೆಸಿ, ಪೋಷಿಸಲಾಗಿದೆ. ಮೇರಿ ಗೋಲ್ಡ್‌ (ಚೆಂಡು ಹೂವು), ಸಾಲ್ವಿಯಾ, ಸೆಲೊಸಿಯಾ, ಸೇವಂತಿಗೆ, ಜಿನಿಯಾ ಹೂವುಗಳನ್ನು ಕಸಿ ಮಾಡಿ ಬೆಳೆಸಲಾಗಿದೆ.

ADVERTISEMENT

15 ಸ್ಥಳ:ಮಾನಸ ಗಂಗೋತ್ರಿಯ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಹೂವಿನ ಪ್ರದರ್ಶನ ಇರಲಿದೆ. ಕುಕ್ಕರಹಳ್ಳಿ ಕೆರೆ, ಕ್ರಾಫರ್ಡ್ ಭವನ, ಅತಿಥಿಗೃಹಗಳು, ರಾಧಾಕೃಷ್ಣ ಭವನ, ಗಾಂಧಿ ಭವನ, ಪಾರಂಪರಿಕ ವೃಕ್ಷ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಕ್ಕಳ ಉದ್ಯಾನ, ರಸಾಯನವಿಜ್ಞಾನ, ಭೌತವಿಜ್ಞಾನ, ಅನ್ವಯಿಕ ಸಸ್ಯಶಾಸ್ತ್ರ, ಕುಲಪತಿಗಳ ನಿವಾಸ, ಮಹಾರಾಜ ಕಾಲೇಜು ಹಾಗೂ ಯುವರಾಜ ಕಾಲೇಜುಗಳನ್ನು ಹೂವು ಹಾಗೂ ಆಲಂಕಾರಿಕ ಸಸಿಗಳಿಂದ ಮೆರುಗೊಳಿಸಲಾಗುತ್ತಿದೆ ಎಂದು ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಎಸ್‌.ಕೆ.ಮುಜಾವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದಸರೆ ಅಂಗವಾಗಿ ತೋಟಗಾರಿಕಾ ಇಲಾಖೆ ನಡೆಸುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರು ವಿ.ವಿ ಸ್ಪರ್ಧಿ ಸುತ್ತಿದೆ. ಇದಕ್ಕಾಗಿ ವಿಶೇಷ ಆಲಂಕಾರಿಕ ಹೂವಿನ ಗಿಡಗಳನ್ನು ಹೆಚ್ಚುವರಿ ಗಮನ ನೀಡಿ ಬೆಳೆಸಲಾಗಿದೆ. ಕಳೆದ ವರ್ಷವೂ ವಿ.ವಿಗೆ ಇಲಾಖೆಯಿಂದ ಬಹುಮಾನ ದೊರೆತಿತ್ತು, ಈ ವರ್ಷವೂ ಬಹಮಾನ ಸಿಗುವ ಭರವಸೆ ಇದೆ. ಇದಕ್ಕಾಗಿ ವಿ.ವಿ ಹಲವು ವಿಭಾಗಗಳು ಸಹಕಾರ ನೀಡಿವೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.