ADVERTISEMENT

ಯಾರ ಕೊರಳಿಗೆ ವಿಜಯದ ಮಾಲೆ?

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:10 IST
Last Updated 13 ಏಪ್ರಿಲ್ 2017, 6:10 IST

ಮೈಸೂರು: ಎಲ್ಲರ ಚಿತ್ತ ನಂಜನ ಗೂಡಿನತ್ತ ಹರಿದಿದ್ದು, ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲ ಹೆಚ್ಚಿದೆ.ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಪದವಿ ಕಾಲೇಜಿನಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ ವಾಗಲಿದ್ದು, 15 ನಿಮಿಷಗಳಿಗೊಮ್ಮೆ ಫಲಿತಾಂಶದ ಟ್ರೆಂಡ್‌ ಲಭಿಸಲಿದೆ. 17 ಸುತ್ತುಗಳ ಮತ ಎಣಿಕೆ 11 ಗಂಟೆಗೆ ಮುಗಿಯುವ ನಿರೀಕ್ಷೆ ಇದ್ದು, ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಉಪಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಲಿಗೆ ಸತ್ವಪರೀಕ್ಷೆ ಯಾಗಿದ್ದು, ತನ್ನ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾಂಗ್ರೆಸ್‌ಗೆ ಎದುರಾಗಿದೆ. ಚೊಚ್ಚಲ ಗೆಲುವಿನ ತವಕದಲ್ಲಿ ಬಿಜೆಪಿ ಇದೆ. ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಹಾಗೂ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್‌ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ.

ಉಪಚುನಾವಣೆಯನ್ನು ಪ್ರತಿಷ್ಠೆ ಯಾಗಿ ಸ್ವೀಕರಿಸಿದ್ದ ಕಾಂಗ್ರೆಸ್‌ ಹಾಗೂ ಬಿಜೆಪಿ ಭರ್ಜರಿಯಾಗಿಯೇ ಪ್ರಚಾರ ನಡೆಸಿದ್ದವು. ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಕ್ಷೇತ್ರವಿಡೀ ತಿರುಗಾಡಿ ಮತಯಾಚಿಸಿದ್ದಾರೆ. ಜಾತಿಯ ಓಲೈಕೆ ಜೊತೆಗೆ, ಹಣ ಹಂಚಿರುವ ಬಗ್ಗೆಯೂ ಆರೋಪಗಳಿವೆ.

ADVERTISEMENT

‘ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಎಣಿಕೆ ಪ್ರಕ್ರಿಯೆ ನಡೆಸಲು ವೆಬ್‌ ಕ್ಯಾಸ್ಟಿಂಗ್‌ ವ್ಯವಸ್ಥೆ ಕಲ್ಪಿಸಿದ್ದು, ಅದಕ್ಕಾಗಿ ಕೊಠಡಿಯಲ್ಲಿ ಮೂರು ದಿಕ್ಕಿನಲ್ಲಿ ಮೂರು ಕ್ಯಾಮೆರಾ ಜೋಡಿಸಲಾಗಿದೆ. ತಲಾ ಒಬ್ಬ ಎಣಿಕೆ ಸಿಬ್ಬಂದಿ, ಮೇಲ್ವಿಚಾರಕ, ಮೈಕ್ರೊ ಅಬ್ಸರ್‌ವರ್‌, ವಿಡಿಯೊಗ್ರಾಫರ್‌ ಹಾಗೂ ಗ್ರಾಮ ಲೆಕ್ಕಿಗ ಇರುತ್ತಾರೆ. ಅಲ್ಲದೆ, ಇಡೀ ಕೋಣೆಯಲ್ಲಿ ವಿಡಿಯೊ ಚಿತ್ರೀಕರಣ ಮಾಡಲು ಪ್ರತ್ಯೇಕವಾಗಿ ಒಬ್ಬರನ್ನು ನಿಯೋಜಿಸ ಲಾಗಿದೆ’ ಎಂದು ಜಿಲ್ಲಾ ಚುನಾವಣಾ ಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲು 1ರಿಂದ 14 ಮತಗಟ್ಟೆಗಳ ಮತ ಎಣಿಕೆ ಮಾಡಲಾಗುತ್ತದೆ.ಪ್ರತಿ ಟೇಬಲ್‌ಗೆ ಅಭ್ಯರ್ಥಿಯ ತಲಾ ಒಬ್ಬ ಏಜೆಂಟ್‌ಗೆ ಅವಕಾಶ ಕಲ್ಪಿಸಲಾ ಗುವುದು. ಮತ ಎಣಿಕೆ ವೇಳೆ ವೀಕ್ಷಕರು ಇರುತ್ತಾರೆ. ಪ್ರತಿ ಸುತ್ತಿನಲ್ಲಿ ಎಣಿಕೆ ಯಾಗಿರುವ ಯಾವುದೇ ಟೇಬಲ್‌ನ 2 ಯಂತ್ರಗಳನ್ನು ಮತ್ತೊಮ್ಮೆ ಪರಿಶೀಲಿಸಲಿದ್ದಾರೆ ಎಂದರು.

‘ಮತ ಎಣಿಕೆ ಕೇಂದ್ರದ ಸುತ್ತ 500 ಮೀಟರ್ ಪ್ರದೇಶದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 144ರ ರೀತ್ಯಾ ನಿಷೇಧಾಜ್ಞೆ ಜಾರಿಗೊಳಿ ಸಲಾಗಿದೆ. ಈ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಯಾವುದೇ ರೀತಿಯ ಮೆರವಣಿಗೆ ಅಥವಾ ವಿಜಯೋತ್ಸವ ನಡೆಸು ವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ’ ಎಂದು ಅವರು ಹೇಳಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಿಗಾ ವಹಿಸಲು ಮುನ್ನಚ್ಚರಿಕೆ ಕ್ರಮವಾಗಿ ವಿಶೇಷ ಸ್ಕ್ವಾಡ್‌ಗಳನ್ನು ನೇಮಕ ಮಾಡಲಾಗಿದೆ. ನಂಜನಗೂಡಿನಲ್ಲಿ ಗುರುವಾರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಮೈಸೂರು ಉಪವಿಭಾಗಾಧಿಕಾರಿ ಸಿ.ಎಲ್‌.ಆನಂದ ಅವರನ್ನು ಕಾನೂನು ಸುವ್ಯವಸ್ಥೆಯ ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

‘ಮತ ಎಣಿಕೆಗೂ ಮುನ್ನ ಕೋಣೆಯನ್ನು ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಯಾವುದೇ ಸ್ಫೋಟಕ ವಸ್ತು ಇಲ್ಲ ಎಂಬುದನ್ನು ಖಚಿತಪಡಿಸಿ ಕೊಳ್ಳುವುದು ಈ ತಪಾಸಣೆಯ ಉದ್ದೇಶ. ಈ ಕೋಣೆಗೆ ಮೊಬೈಲ್‌ ತರುವಂತಿಲ್ಲ’ ಎಂದು ರಂದೀಪ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.