ADVERTISEMENT

ಯುವ ದಸರಾಗೆ ಶಿವರಾಜ್‌ಕುಮಾರ್‌, ದರ್ಶನ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 8:27 IST
Last Updated 12 ಸೆಪ್ಟೆಂಬರ್ 2017, 8:27 IST
ಶಿವರಾಜಕುಮಾರ್‌
ಶಿವರಾಜಕುಮಾರ್‌   

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸೆ. 22ರಿಂದ 29ರ ವರೆಗೆ ‘ಯುವ ದಸರಾ’ ನಡೆಯಲಿದೆ. ಇದರಲ್ಲಿ 28ರಂದು ಚಲನಚಿತ್ರ ನಟ ಶಿವರಾಜಕುಮಾರ್‌, 29ರಂದು ದರ್ಶನ್ ಭಾಗವಹಿಸುವರು.

22ರಂದು ‘ದಿಲ್‌ ಸೆ ದಿಲ್‌ ತಕ್‌’ ಖ್ಯಾತಿಯ ಫಲಾಕ್ ಮುಚ್ಚಲ್‌ ಗಾಯನ, 23ರಂದು ಬಾಲಿವುಡ್‌ ಹಿನ್ನೆಲೆ ಗಾಯಕ, ಕನ್ನಡದ ಪ್ರತಿಭೆ ನಕಾಶ್ ಅಜೀಜ್‌ ಅವರಿಂದ ಕಾರ್ಯಕ್ರಮ, 25ರಂದು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರಿಂದ ಸಂಗೀತ ಕಾರ್ಯಕ್ರಮವಿದೆ.

ಚಲನಚಿತ್ರ ನಟಿ ಮಯೂರಿ ಕಾರ್ಯಕ್ರಮ ಪ್ರಸ್ತುತಪಡಿಸುವರು. 26ರಂದು ಬಾಲಿವುಡ್‌ ಹಿನ್ನೆಲೆ ಗಾಯಕ ನೀತಿ ಮೋಹನ್‌ ಅವರಿಂದ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದು ಎಸ್‌.ಪಿ ರವಿ ಡಿ.ಚೆನ್ನಣ್ಣನವರ ತಿಳಿಸಿದರು.

ADVERTISEMENT

27ರಂದು ಮೊದಲ ಬಾರಿಗೆ ಮುಂಬೈನ ‘ರೆಡ್‌ಬುಲ್‌’ ಟೂರ್‌ ಬಸ್‌ ಸಂಗೀತ ಕಾರ್ಯಕ್ರಮ ನೀಡಲಿದೆ. 28ರಂದು ಸ್ಯಾಂಡಲ್‌ವುಡ್ ನೈಟ್‌, 29ರಂದು ಗಂಧದಗುಡಿ ಸ್ಟಾರ್ ನೈಟ್ಸ್ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ 32 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಬೆಂಗಳೂರಿನ ಅಡ್ವಿಕ್‌ ಡಿಜಿಟಲ್ ಸೋಲುಷನ್ಸ್‌ ಕಂಪೆನಿ ಉಚಿತವಾಗಿ ಈ ಸೌಲಭ್ಯ ಕಲ್ಪಿಸಲಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಹಿಳಾ ದಸರಾ: ಸೆ. 21ರಿಂದ ಮಹಿಳಾ ಮತ್ತು ಮಕ್ಕಳ ದಸರಾವನ್ನು ಜೆ.ಕೆ.ಮೈದಾನದಲ್ಲಿ ಆಯೋಜಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ ತಿಳಿಸಿದರು.

ಚಿಣ್ಣರ ದಸರಾ, ಆದರ್ಶ ಅತ್ತೆ–ಸೊಸೆ ಕಾರ್ಯಕ್ರಮ, ಅಂಗವಿಕಲ, ರಿಯಾಲಿಟಿ ಷೋ ಮಕ್ಕಳು ಹಾಗೂ ಹಿರಿಯ ನಾಗರಿಕರಿಂದಲೂ  ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ. ಜಗನ್ಮೋಹನ ಅರಮನೆಯಲ್ಲಿ ಸೆ. 22 ಹಾಗೂ 23ರಂದು ಮಕ್ಕಳ ದಸರಾ ಏರ್ಪಡಿಸಲಾಗಿದೆ.

ವೇಷಭೂಷಣ ಸ್ಪರ್ಧೆ, ಸಾಮೂಹಿಕ ನೃತ್ಯ, ಏಕಪಾತ್ರಾಭಿನಯ, ನಾಟಕ ಸ್ಪರ್ಧೆ ಇರಲಿವೆ. ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ವಿಜ್ಞಾನ ವಸ್ತುಪ್ರದರ್ಶನವನ್ನು ಸಂಘಟಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.