ADVERTISEMENT

ರಸಗೊಬ್ಬರ ಕೊಳ್ಳುವಾಗ ಇರಲಿ ಎಚ್ಚರ

ಕಳೆದ ವರ್ಷ ಜಿಲ್ಲೆಗೆ ಸರಬರಾಜಾದ ರಾಸಾಯನಿಕ ಗೊಬ್ಬರ ಬಹುತೇಕ ಕಳಪೆ?

ಕೆ.ಎಸ್.ಗಿರೀಶ್
Published 22 ಮೇ 2017, 6:45 IST
Last Updated 22 ಮೇ 2017, 6:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಜಿಲ್ಲೆಯಲ್ಲಿ ಕಳೆದ ವರ್ಷ ಸರಬರಾಜಾದ ರಸಗೊಬ್ಬರಗಳ ಪೈಕಿ ಶೇ 40ರಷ್ಟು ಕಳಪೆ ದರ್ಜೆಯದ್ದು ಎಂಬ ಅಂಶವನ್ನು ಕೃಷಿ ಇಲಾಖೆ ಸಾರಸಗಟಾಗಿ ತಳ್ಳಿ ಹಾಕಿದೆ. ಒಟ್ಟು 560 ರಸಗೊಬ್ಬರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ ದಾಗ ಕಳಪೆ ಎಂದು ಕಂಡು ಬಂದಿದ್ದು, ಕೇವಲ ಒಂದರಲ್ಲಿ ಮಾತ್ರ ಎಂದು ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.

ಇದಕ್ಕೂ ಹಿಂದಿನ ವರ್ಷ 400 ಮಾದರಿಗಳನ್ನು ಪರೀಕ್ಷಿಸಿದಾಗ 4 ಮಾದರಿ ಕಳಪೆ ಎಂದು ಕಂಡು ಬಂದಿದ್ದವು. ಇದರ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದ ಭೋಗಾದಿಯಲ್ಲಿನ ನಕಲಿ ರಸಗೊಬ್ಬರ ತಯಾರಿಕಾ ಘಟಕಕ್ಕೆ ಬೀಗಮುದ್ರೆ ಹಾಕಿಸಲಾಯಿತು. ನಂತರ, ಇಲ್ಲಿವರೆಗೆ ಅಂತಹ ತಯಾರಿಕಾ ಘಟಕಗಳು ಜಿಲ್ಲೆಯಲ್ಲಿರುವ ಕುರಿತು ಮಾಹಿತಿ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ಹೇಳುತ್ತಾರೆ.

ಆದರೆ, ಈಚೆಗೆ ಹುಣಸೂರಿನಲ್ಲಿ ನಡೆದ ಸಭೆಯೊಂದರಲ್ಲಿ ಸಂಸದ ಪ್ರತಾಪಸಿಂಹ ಈ ವಿಷಯ ಪ್ರಸ್ತಾಪಿಸಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೈತರೂ ಕಳೆದ ವರ್ಷ ರಸಗೊಬ್ಬರಗಳು ಕಳಪೆ ದರ್ಜೆಯದ್ದಾಗಿತ್ತು ಎಂದು ದೂರಿದ್ದರು.

ಪರೀಕ್ಷೆ ಸಾಲದು: ವಾದ, ವಿವಾದಗಳೆನೇ ಇರಲಿ, ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರಗಳನ್ನು ಪರೀಕ್ಷಿಸುವುದು ಗುಣಮಟ್ಟ ಪತ್ತೆಗೆ ಸಹಕಾರಿಯಾಗುತ್ತಿಲ್ಲ. ಇಡೀ ಜಿಲ್ಲೆಗೆ 560 ಮಾದರಿಗಳನ್ನು ಒಂದು ವರ್ಷಕ್ಕೆ ಪರೀಕ್ಷಿಸುವುದರಿಂದ ರಸಗೊಬ್ಬರದ ಸಮಗ್ರ ಚಿತ್ರಣ ದೊರಕುವುದಿಲ್ಲ. ಈ ರೀತಿ ಪರೀಕ್ಷಿಸುವುದಕ್ಕೆ ಜಿಲ್ಲೆಯಲ್ಲಿ ಇರುವ ಪರಿವೀಕ್ಷಕರ ಸಂಖ್ಯೆ ಕೇವಲ 65.

ಪರೀಕ್ಷೆಗೆ ಇಲ್ಲಿ ಪ್ರಯೋಗಾಲಯವಿಲ್ಲ: ರಸಗೊಬ್ಬರಗಳ ಗುಣಮಟ್ಟ ಪರೀಕ್ಷೆಗೆ ಜಿಲ್ಲೆಯಲ್ಲಿ ಯಾವುದೇ ಪ್ರಯೋಗಾಲಯ ಇಲ್ಲ. ಎಲ್ಲ ಮಾದರಿಗಳನ್ನು ಮಂಡ್ಯದಲ್ಲಿರುವ ಪ್ರಯೋಗಾಲಯ ಗಳಿಗೆ ಕಳುಹಿಸಬೇಕು. ಅಲ್ಲಿ ಮಂಡ್ಯ ಜಿಲ್ಲೆಯ ಜತೆಗೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರಗಳ ಗುಣಮಟ್ಟದ ಪರೀಕ್ಷೆಯೂ ನಡೆಯುತ್ತದೆ. ಇದರಿಂದ ಸಹಜವಾಗಿಯೇ ಫಲಿತಾಂಶ ಬರುವುದು ತಡವಾಗುತ್ತದೆ. ತಡವಾದಷ್ಟೂ ರಸಗೊಬ್ಬರಗಳು ಬಿಸಿದೋಸೆಯಂತೆ ಖರ್ಚಾಗಿರುತ್ತವೆ. ಕೊಂಡ ರೈತರು ಮಾತ್ರ ಕೊನೆಗೆ ಪರಿತಪಿಸುತ್ತಾರೆ.

ರೈತರೇ ಪರೀಕ್ಷಿಸಬಹುದು
*ಹರಳು ರೂಪದ ರಸಗೊಬ್ಬರಗಳು ಒಂದೇ ಬಣ್ಣ, ಆಕಾರ, ಗಾತ್ರದಿಂದ ಕೂಡಿದ್ದು ಕಣ್ಣಿಗೆ ಕಾಣುವಂತಹ ಇತರೆ ಪದಾರ್ಥಗಳು ಅದರಲ್ಲಿ ಇರಬಾರದು.
*ಯೂರಿಯ, ಅಮೋನಿಯಂ ಸಲ್ಫೇಟ್, ಅಮೋನಿಯಂ ಕ್ಲೋರೈಡ್, ಮ್ಯೂರಿಯೇಟ್ ಆಫ್ ಪೊಟ್ಯಾಷ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ನೀರಿನಲ್ಲಿ ಸಂಪೂರ್ಣ ಕರಗಬೇಕು. ಕೆಲ ಪದಾರ್ಥ ಹಾಗೆಯೇ ಉಳಿದರೆ ಅದು ಕಲಬೆರಕೆ.
*ಯೂರಿಯ, ಅಮೋನಿಯಂ ಕ್ಲೋರೈಡ್, ಎಂಒಪಿ, ಸಿಎಎನ್, ನೈಟ್ರೊ ಫಾಸ್ಫೇಟ್ 20:20, 15:15:15, 19:19:19 ಇತ್ಯಾದಿ ರಸಗೊಬ್ಬರಗಳನ್ನು ನೀರಿನಲ್ಲಿ ಹಾಕಿದಾಗ ತಣ್ಣನೆಯ ಅನುಭವ ನೀಡಬೇಕು
*ಯೂರಿಯ ಬಿಸಿ ಮಾಡಿದಾಗ ಸಂಪೂರ್ಣವಾಗಿ ಕರಗುತ್ತದೆ. ಕರಗದೇ ಇರುವ ವಸ್ತುಗಳು ಉಳಿದರೆ ಕಲಬೆರಕೆಯಾಗಿದೆ ಎಂದು ತಿಳಿಯಬೇಕು. ಡಿಎಪಿಯನ್ನು ಒಂದು ತಗಡಿನ ಮೇಲೆ ಬಿಸಿ ಮಾಡಿದಾಗ ಹರಳುಗಳು ಸುಣ್ಣದಂತೆ ಅರಳುತ್ತವೆ ಮತ್ತು ತಳಕ್ಕೆ ಅಂಟಿಕೊಳ್ಳುತ್ತವೆ.

ವಹಿಸಬೇಕಾದ ಎಚ್ಚರಿಕೆ
ಮೈಸೂರು:
ರಸಗೊಬ್ಬರ ಚೀಲವು ಹೊಲಿದಿರಬೇಕು. ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು ಮತ್ತು ಕೊಂಡಿದ್ದಕ್ಕೆ ನಮೂನೆ ‘ಎಂ’ನಲ್ಲಿ ರಸೀತಿ ಪಡೆಯಬೇಕು. ಇದರಲ್ಲಿ ಮಾರಾಟಗಾರರ ಸಹಿ ಇರಬೇಕು. ಚೀಲದ ಮೇಲೆ ‘ರಸಗೊಬ್ಬರದ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ಬ್ರಾಂಡ್, ಪೋಷಕಾಂಶಗಳ ವಿವರ, ಗರಿಷ್ಠ ಮಾರಾಟ ಬೆಲೆ, ಗರಿಷ್ಠ ಮತ್ತು ನಿವ್ವಳ ತೂಕ, ಬ್ಯಾಚ್ ಸಂಖ್ಯೆ ಮತ್ತು ರಿಜಿಸ್ಟ್ರೇಷನ್ ಸಂಖ್ಯೆ’ ಇರುವುದನ್ನು ಗಮನಿಸಬೇಕು.

ಪ್ರಾಥಮಿಕ ಹಂತದಲ್ಲಿಯೇ ಈ ವಿವರ ಪರೀಕ್ಷಿಸಿ ಅಧಿಕೃತ ಮಾರಾಟಗಾರರಿಂದ ಮಾತ್ರ ಕೊಂಡರೆ ನಕಲಿ ಹಾಗೂ ಕಲಬೆರಕೆ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.