ADVERTISEMENT

ರಾಜ್ಯದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:58 IST
Last Updated 23 ಏಪ್ರಿಲ್ 2017, 10:58 IST

ಸಾಲಿಗ್ರಾಮ: ರಾಜ್ಯದಲ್ಲಿ ವ್ಯಾಸಂಗ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದರೂ ವಿದ್ಯಾವಂತರ ಸರಾಸರಿ ಲೆಕ್ಕಾಚಾರದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇರುವುದು ಕಂಡು ಬರುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಸುಮಾರು 227 ಕಾಲೇಜು ಗಳಿವೆ. ಇವುಗಳಿಗೆ ಪ್ರತಿವರ್ಷ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಇದನ್ನು ನೋಡಿದರೆ ಗ್ರಾಮೀಣ ಪ್ರದೇಶ ದಲ್ಲಿ ಹೆಣ್ಣು ಮಕ್ಕಳು ವ್ಯಾಸಂಗದತ್ತ ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು.ಖಾಸಗಿ ಕಾಲೇಜಿನ ಮುಂದೆ ಸರ್ಕಾರಿ ಕಾಲೇಜು ಪೈಪೋಟಿ ನೀಡಿ ಯಶಸ್ವಿಯಾಗುವುದು ಕಷ್ಟ. ಆದರೂ, ಗ್ರಾಮೀಣ ಪ್ರದೇಶದ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಸಂತಸದ ವಿಚಾರ. ಇದಕ್ಕೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯ ಶ್ರಮ ಶ್ಲಾಘನೀಯ ಎಂದರು.

ಗ್ರಾಮೀಣ ವಿದ್ಯಾರ್ಥಿಗಳು ಬೆಳೆಯು ತ್ತಿರುವ ವಿಜ್ಞಾನದ ಜತೆ ಹೊಂದಾಣಿಕೆ ಮಾಡಿಕೊಂಡು ವ್ಯಾಸಂಗ ಮಾಡಲು ಮುಂದಾಗಬೇಕು. ಆಗ ಜೀವನದಲ್ಲಿ ಎಲ್ಲರಿಗಿಂತ ಮುಂದೆ ಬರಲು ಸಾಧ್ಯವಾಗುತ್ತದೆ. ವಿಪರ್ಯಾಸ ಎಂದರೆ ಹೆಣ್ಣುಮಕ್ಕಳಲ್ಲಿ ಶಿಸ್ತು ಹೆಚ್ಚು. ಆದರೆ, ಗಂಡು ಮಕ್ಕಳಲ್ಲಿ ಶಿಸ್ತು ಕಡಿಮೆಯಾಗು ತ್ತಿದೆ. ಇದು ಅಪಾಯಕಾರಿ ಎಂದು ಎಚ್ಚರಿಸಿದರು.

ADVERTISEMENT

ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತ ನಾಡಿ, ಮಹಿಳೆ ಎಲ್ಲ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡುತ್ತಿದ್ದರೂ ದೌರ್ಜನ್ಯದಿಂದ ಮಾತ್ರ ಮುಕ್ತಿ ಪಡೆದುಕೊಂಡಿಲ್ಲ. ಇದು ದುರದೃಷ್ಟಕರ ಸಂಗತಿ. ಗ್ರಾಮೀಣ ಪ್ರದೇಶದಲ್ಲಿನ ಬಾಲ್ಯವಿವಾಹಗಳಿಗೆ ಕಡಿವಾಣ ಹಾಕಬೇಕಿದೆ. ಹೆಣ್ಣು ಮಕ್ಕಳ ಮಾರಾಟದಲ್ಲಿ ಭಾರತ ಮೂರನೇ ಸ್ಥಾನದಲ್ಲಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಶಾಸಕ ಸಾ.ರಾ.ಮಹೇಶ್‌, ಜಿ.ಪಂ ಸದಸ್ಯ ಡಿ.ರವಿಶಂಕರ್ ಮಾತನಾಡಿ ದರು. ತಾ.ಪಂ ಸದಸ್ಯ ಚಂದ್ರಶೇಖರ್, ಪ್ರಾಂಶುಪಾಲ ಡಾ.ಈ.ಮಂಜುನಾಥ್, ಗ್ರಾ.ಪಂ ಅಧ್ಯಕ್ಷ ಗೇಟಿ ಪ್ರಕಾಶ್, ಎಸ್.ಆರ್. ರಾಮೇಗೌಡ, ಎಸ್.ಕೆ. ಮಧುಚಂದ್ರ, ಎಸ್.ಬಿ.ಚಂದ್ರೇಗೌಡ, ಎಸ್.ಎಂ.ಶ್ರೀನಿವಾಸ್‌ಗೌಡ, ಕುಸುಮಾ, ಜ್ಯೋತಿ, ಎಸ್.ಡಿ.ರಾಮೇಗೌಡ, ಕೆ.ಎಲ್.ರಮೇಶ್‌, ಪ್ರಾಧ್ಯಾಪಕರಾದ ಬಸವಂತಪ್ಪ ಗುದಗತ್ತಿ, ಎಚ್.ಎಸ್. ಶ್ರೀನಿವಾಸ್, ಡಾ.ಸತೀಶ್‌ ಚಂದ್ರ, ಸಿ.ಕುಮಾರ್, ಮಿರ್ಲೆ ಮೃತ್ಯುಂಜಯ, ಪ್ರಕಾಶ್, ಧರ್ಮ ಕುಮಾರ್, ಚಂದ್ರಪ್ಪ, ಹಸೀನಾ ಬಾನು ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.