ADVERTISEMENT

ವಿ.ವಿ ಹಗರಣ; ಸಿಬಿಐ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:02 IST
Last Updated 7 ನವೆಂಬರ್ 2017, 9:02 IST

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಲ್ಲಿ (ಕೆಎಸ್‌ಒಯು) ನಡೆದ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಕೇಂದ್ರ ಉನ್ನತ ಶಿಕ್ಷಣ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಬಿಜೆಪಿ ಮುಖಂಡ ಗೋ.ಮಧುಸೂದನ ಪತ್ರ ಬರೆದಿದ್ದಾರೆ.

ಎರಡೂ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿಗಳಾದ ಕೆ.ಎಸ್‌.ರಂಗಪ್ಪ, ವಿ.ಎಸ್‌.ಕೃಷ್ಣನ್‌ ಅವರು ಹಲವು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಎರಡೂ ವಿ.ವಿಗಳ ಹಣವನ್ನು ಜತನವಾಗಿ ಉಳಿಯಬೇಕು. ವಿದ್ಯಾರ್ಥಿಗಳ ಭವಿಷ್ಯ ಮಸುಕಾಗಬಾರದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಯುಜಿಸಿ, ಎಐಸಿಟಿಇ, ಎಂಐಸಿ, ಅರೆವೈದ್ಯಕೀಯ ಮೊದಲಾದ ಸಂಸ್ಥೆಗಳಿಂದ ಅನುಮತಿ ಪಡೆಯದೆ ಪದವಿ ಶಿಕ್ಷಣ ಆರಂಭಿಸಿದ ಅಂದಿನ ಕೆಎಸ್‌ಒಯು ಅಧಿಕಾರಿಗಳ ವಿರುದ್ಧ ತನಿಖೆ ನಡೆಯಬೇಕು. 2011ರಲ್ಲಿ ಯುಜಿಸಿ ನೋಟಿಸ್ ನೀಡಿದರೂ ಬೆಲೆ ನೀಡದ ಅಂದಿನ ಕುಲಪತಿ, ಕುಲಸಚಿವರ ವಿರುದ್ಧ ತನಿಖೆ ನಡೆಯಬೇಕು.

ADVERTISEMENT

ಅಲ್ಲದೆ, ಕಾರಣ ಕೇಳಿದ ನೋಟಿಸನ್ನೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಯಾವುದೇ ತಡೆಯಾಜ್ಞೆ ಪಡೆಯದೆ ಎಲ್ಲ ತಾಂತ್ರಿಕ ಪದವಿಗಳನ್ನು ಮುಂದುವರಿಸಿಕೊಂಡು ಬಂದಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಪ್ರೊ.ಕೆ.ಎಸ್‌.ರಂಗಪ್ಪ ಎಚ್‌.ಡಿ.ದೇವೇಗೌಡರ ಸಂಬಂಧಿ. ಜತೆಗೆ, ದೇವೇಗೌಡ– ಸಿದ್ದರಾಮಯ್ಯ ಅವರದು ಪಾರ್ಟನರ್‌ ಶಿಪ್ ರಾಜಕಾರಣ. ಹೀಗಾಗಿ ಮುಖ್ಯಮಂತ್ರಿ ಸುಮ್ಮನಿದ್ದಾರೆ. ಜತೆಗೆ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರೂ ಅಸಹಾಯಕರಾಗಿದ್ದಾರೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.