ADVERTISEMENT

ಶಾಂತಿ ಕದಡಲು ಬಿಜೆಪಿ ಯತ್ನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 7:29 IST
Last Updated 5 ಸೆಪ್ಟೆಂಬರ್ 2017, 7:29 IST

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹತಾಶೆಗೆ ಒಳಗಾಗಿರುವ ಬಿಜೆಪಿಯು ‘ಮಂಗಳೂರು ಚಲೋ’ದ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕದಡಲು ಮುಂದಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್‌ ಆರೋಪಿಸಿದರು.

‘ಸಾಂವಿಧಾನಿಕ ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ. ಆಡಳಿತಾರೂಢ ಸರ್ಕಾರ ಸ್ಪಂದಿಸದೆ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕಿದೆ. ಅವಕಾಶ ನಿರಾಕರಿಸಿದ ಬಳಿಕವೂ ಚಲೋ ಹೊರಡಲು ಬಿಜೆಪಿ ಮುಂದಾಗಿರುವುದು ಸಂವಿಧಾನಬಾಹಿರ. ಶಾಂತಿ ಕದಡುವ ಉದ್ದೇಶದಿಂದ ಹೊರ ಜಿಲ್ಲೆಗಳಿಂದ ಸಾವಿರಾರು ಜನರನ್ನು ದಕ್ಷಿಣ ಕನ್ನಡಕ್ಕೆ ಕೊರೆದೊಯುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಅವರನ್ನು ಮುಟ್ಟಿದರೆ ರಾಜ್ಯಕ್ಕೆ ಬೆಂಕಿ ಬೀಳುತ್ತದೆ ಎಂದು ಬಂಟ್ವಾಳದ ಗಲಭೆಯ ಸಂದರ್ಭದಲ್ಲಿ ಆಡಿದ್ದ ಮಾತನ್ನು ಬಿಜೆಪಿ ಸಾಬೀತುಪಡಿಸಲು ಮುಂದಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೊಂದರ ಮುಖಂಡರು ನಡೆದುಕೊಳ್ಳುವ ರೀತಿ ರಾಜ್ಯಕ್ಕೆ ಅಪಾಯಕಾರಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ತಮ್ಮ ಪಕ್ಷದ ಮುಖಂಡರಿಗೆ ಬುದ್ಧಿವಾದ ಹೇಳಲಿ’ ಎಂದರು.

ADVERTISEMENT

‘ಚುನಾವಣೆ ಸಮೀಪಿಸುತ್ತಿದ್ದಂತೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಗಲಭೆಗಳನ್ನು ಸೃಷ್ಟಿಸಲು ಬಿಜೆಪಿ ಹವಣಿಸುತ್ತಿದೆ. ಕಲ್ಲಡ್ಕ ಪ್ರಭಾಕರ ಭಟ್ಟ, ಸಂಸದರಾದ ನಳಿನಕುಮಾರ್‌ ಕಟೀಲು ಹಾಗೂ ಅನಂತಕುಮಾರ್‌ ಹೆಗಡೆ ಅವರು ಪ್ರಚೋದನಕಾರಿ ಹೇಳಿಕೆ ನೀಡುತ್ತ ಬೆಂಕಿ ಹಚ್ಚುವ ಕೆಲಸ ಮಾಡಲಿದ್ದಾರೆ. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಪ್ರಕಾಶ್‌ ಜಾವಡೇಕರ್‌ ಅವರು ಕಾಂಗ್ರೆಸ್‌ ಅನ್ನು ಕಸದ ಬುಟ್ಟಿಗೆ ಹಾಕುವುದಾಗಿ ಕೀಳುಮಟ್ಟದ ಮಾತುಗಳನ್ನು ಆಡಿದ್ದಾರೆ. ಮಾನವ ಸಂಪನ್ಮೂಲ ಖಾತೆ ನಿರ್ವಹಿಸುವ ಸಚಿವರೊಬ್ಬರು ಆಡುವ ಮಾತು ಇದಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕೇಂದ್ರದ ಜಾರಿ ನಿರ್ದೇಶನಾಲಯ ಬಳಸಿಕೊಂಡು ಕಾಂಗ್ರೆಸ್‌ ಮುಖಂಡರ ಮೇಲೆ ದಾಳಿ ನಡೆಸಲು ಸಹಾಯ ಮಾಡುವುದಾಗಿ ರಾಜ್ಯ ಬಿಜೆಪಿಯ ನಿಯೋಗಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಭರವಸೆ ನೀಡುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾಂಗ್ರೆಸ್‌ ಪ್ರಮುಖ ನಾಯಕರ ಕುರಿತು ಮಾಹಿತಿ ಕೊಡುವಂತೆಯೂ ಅವರು ಕೇಳಿದ್ದಾರೆ. ಇದು ಅತ್ಯಂತ ಲಜ್ಜೆಗೇಡಿ ರಾಜಕಾರಣ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಷಾ ಅವರು ದ್ವೇಷದ ರಾಜಕಾರಣ ಮಾಡಲು ಮುಂದಾಗಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.