ADVERTISEMENT

ಸಾಹಿತ್ಯಕ್ಕೆ ತಕ್ಕಂತೆ ಸಿನಿಮಾ ಬೆಳೆದಿಲ್ಲ

‘ಮನಿಷೆ’ ಕಿರುಚಿತ್ರ ಪ್ರದರ್ಶನದಲ್ಲಿ ಸಾಹಿತಿ ವಸುಧೇಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2014, 9:25 IST
Last Updated 25 ಆಗಸ್ಟ್ 2014, 9:25 IST

ಮೈಸೂರು: ಕನ್ನಡದಲ್ಲಿ ಅದ್ಭುತ ಸಾಹಿತ್ಯವಿದೆ. ಆದರೆ, ಅದಕ್ಕೆ ತಕ್ಕಂತೆ ರಾಜ್ಯದ ಸಿನಿಮಾ ಕ್ಷೇತ್ರ ಬೆಳೆದಿಲ್ಲ ಎಂದು ಸಾಹಿತಿ ವಸುಧೇಂದ್ರ ಬೇಸರ ವ್ಯಕ್ತಪಡಿಸಿದರು.

ನಗರದ ಮಾನಸಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ‘ಎಂ’ ಸ್ಟೂಡಿಯೋಸ್‌ ಭಾನುವಾರ ಏರ್ಪಡಿಸಿದ್ದ ‘ಮನಿಷೆ’ ಕಿರುಚಿತ್ರ ಪ್ರದರ್ಶನದ ಬಳಿಕ ಅವರು ಮಾತನಾಡಿದರು.

ಕನ್ನಡ ಬರಹವನ್ನು ಬಳಸಿಕೊಂಡು ಸಿನಿಮಾ ನಿರ್ಮಿಸಿರುವುದು ವಿರಳ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಸಿನಿಮಾ ಕ್ಷೇತ್ರದ ಬಗೆಗಿನ ಅನ್ಯ ತಿಳಿವಳಿಕೆ ಅನೇಕರನ್ನು ಕೇವಲ ಸಾಹಿತ್ಯಕ್ಕೆ ಸಿಮಿತಗೊಳಿಸಿರುವ ಸಾಧ್ಯತೆ ಇದೆ. ಆದರೆ, ಅದು ಎಷ್ಟು ಸತ್ಯ ಎಂಬುದು ಜಿಜ್ಞಾಸೆಗೆ ಬಿಟ್ಟಿದ್ದು. ಇತ್ತೀಚಿಗೆ ಹೊಸ ಮನೋಧರ್ಮದ ಚಿತ್ರಗಳು ಬಿಡುಗಡೆಯಾಗುತ್ತಿವೆ. ‘ಲೂಸಿಯಾ’, ‘ಉಳಿದವರು ಕಂಡಂತೆ’ ಚಿತ್ರ ಆಶಾ ಭಾವನೆ ಹುಟ್ಟುಹಾಕಿವೆ. ಆದರೂ, ಕನ್ನಡ ಸಿನಿಮಾ ಕ್ಷೇತ್ರ ಶಕ್ತಿ ಪಡೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಡಿಜಿಟಲ್‌, ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಪರಿಣಾಮ ಜಗತ್ತಿನ ಉತ್ತಮ ಚಲನಚಿತ್ರಗಳನ್ನು ವೀಕ್ಷಿಸುವ ಸೌಭಾಗ್ಯ ಯುವ ಸಮೂಹಕ್ಕೆ ಸಿಕ್ಕಿದೆ. ಅಲ್ಲದೆ, ಹಳ್ಳಿಯ ಹುಡುಗನಿಗೂ ಕ್ಯಾಮೆರಾ ಕೈಗೆಟಕುತ್ತಿದೆ. ಹೀಗಾಗಿ, ಸಿನಿಮಾ ಜಗತ್ತಿನ ಕಡೆಗೆ ಕಿರಿಯರು ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಹಳೆಯ ತಲೆಮಾರಿಗೆ ಈ ಅವಕಾಶ ಸಿಕ್ಕಿರಲಿಲ್ಲ. ಅವರ ಸಿನಿಮಾ ಜಗತ್ತು ಬಾಲಿವುಡ್‌ ಆಚೆಗೆ ದಾಟಲಿಲ್ಲ ಎಂದರು.

ಕಥೆಯೊಂದು ಕಾಲಘಟ್ಟವನ್ನೂ ಮೀರಿ ಆಸಕ್ತಿ ಉಳಿಸಿಕೊಳ್ಳುವುದು ಕಷ್ಟ. ನನ್ನ ಮೊದಲ ಕಥೆ (ಮನಿಷೆ) ರಚನೆಯಾಗಿದ್ದು 1996ರಲ್ಲಿ. ಕಥೆಯಲ್ಲಿನ ಸೂಕ್ಷ್ಮ ಎಳೆಯನ್ನು ಸಿನಿಮಾ ಮಾಡುವಲ್ಲಿ ನಿರ್ದೇಶಕ ಎಂ.ಆರ್‌. ಮನಿಷ್‌ ಯಶಸ್ವಿಯಾಗಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ ಮಾಡುವ ಮೂಲ ಕಥೆಯಲ್ಲಿನ ಪ್ರಸಂಗವನ್ನು ಬದಲಿಸಿ ಸೃಜನಶೀಲತೆ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯೋನ್ಮುಖ ಲೇಖಕರನ್ನು ಓದುವ– ಒಡನಾಡುವ ಸ್ವಭಾವ ಹಿರಿಯ ಸಾಹಿತಿಗಳಲ್ಲಿ ಕಡಿಮೆ. ಆದರೆ, ಡಾ.ಯು.ಆರ್‌. ಅನಂತಮೂರ್ತಿ ಕೊನೆಯವರೆಗೂ ಕಿರಿಯರ ಕುರಿತು ಆಸಕ್ತಿ ಹೊಂದಿದ್ದರು. ಸಾಹಿತ್ಯದ ಬಗೆಗಿನ ಈ ಚೈತನ್ಯವೇ ಅವರನ್ನು ಇಷ್ಟು ದಿನ ಉಳಿಸಿತ್ತು.

ಮೊದಲ ಕಥಾ ಸಂಕಲನವನ್ನು ಕುತೂಹಲದಿಂದ ಅವರಿಗೆ ಕಳುಹಿಸಿದ್ದೆ. ಎರಡೇ ದಿನ ಗಳಲ್ಲಿ ಅದನ್ನು ಓದಿ ಬಹುವಾಗಿ ಮೆಚ್ಚಿ ಕೊಂಡಿದ್ದರು ಎಂದು ಸ್ಮರಿಸಿಕೊಂಡರು. ಪ್ರಾಧ್ಯಾಪಕ ಡಾ.ಕೃಷ್ಣೇಗೌಡ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಸಾಹಿತಿ ಸುಜಾತಾ ಬದನಿದಿ, ಪತ್ರಕರ್ತ ನಿರಂಜನ್‌ ನಿಕ್ಕಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.