ADVERTISEMENT

ಸೆರೆಸಿಕ್ಕ ಹುಲಿಗೆ ಕೂರ್ಗಳ್ಳಿಯಲ್ಲಿ ಚಿಕಿತ್ಸೆ

ನಾಡಿಗೆ ಬಂದ ನಿಶ್ಯಕ್ತ ವ್ಯಾಘ್ರ; ಅರಿವಳಿಕೆ ನೀಡಿಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 11:23 IST
Last Updated 27 ಮಾರ್ಚ್ 2015, 11:23 IST

ಎಚ್.ಡಿ. ಕೋಟೆ: ಬೇಟೆಯಾಡುವ ಶಕ್ತಿ ಕಳೆದುಕೊಂಡು ಕಾಡಿನಿಂದ ಹೊರಬಂದ ಗಂಡು ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆಹಿಡಿದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದ ಘಟನೆ ಗುರುವಾರ ನಡೆದಿದೆ.

ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಸವನಗಿರಿ ಹಾಡಿ ‘ಬಿ’ ಕಾಲೊನಿ ಹೆಬ್ಬಾಳ್ಳ ತೊರೆಯ ನೀರಿನಲ್ಲಿ ವಿಶ್ರಮಿಸುತ್ತಿದ್ದ ಆರು ವರ್ಷದ ಗಂಡು ಹುಲಿಯನ್ನು ಸೆರೆಹಿಡಿಯಲಾಗಿದೆ.

ಘಟನೆಯ ವಿವರ: ಬಸವನಗಿರಿ ಹಾಡಿ ‘ಬಿ’ ಕಾಲೊನಿ ಹಾಡಿಯ ನಿವಾಸಿ ಬೊಮ್ಮ ಎಂಬುವವರು ಹೆಬ್ಬಾಳ್ಳ ತೊರೆಯ ಬಳಿ ಇದ್ದ ಹುಲಿಯನ್ನು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿದ ಎಚ್.ಡಿ. ಕೋಟೆ ಪ್ರಾದೇಶಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹುಲಿ ಸೆರೆಹಿಡಿಯಲು ಕಾರ್ಯಪ್ರವೃತ್ತರಾದರು.

ಹುಣಸೂರು ವನ್ಯ ಜೀವಿ ವಿಭಾಗದ ಡಾ.ಉಮಾಶಂಕರ್ ಸ್ಥಳಕ್ಕೆ ಬಂದು ಬಂದೂಕಿನ ಮೂಲಕ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಅರಿವಳಿಕೆ ಸಿರಂಜ್ ಹುಲಿ ದೇಹ ಹೊಕ್ಕ ನಂತರ ಅದು ಬಳಲಿದಂತೆ ಕಂಡುಬಂದಿತು. ಆಗ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಸೆರೆಹಿಡಿಯಲು ಸಮೀಪ ತೆರಳಿದಾಗ ಅವರ ಮೇಲೆ ಜಿಗಿದು ಆತಂಕ ಸೃಷ್ಟಿಸಿತು.

ರಾಮ ಮತ್ತು ಮಹದೇವ ಎನ್ನುವ ಸಿಬ್ಬಂದಿ ಸ್ವಲ್ಪದರಲ್ಲಿ ಹುಲಿ ದಾಳಿಯಿಂದ ಪಾರಾದರು. ನಂತರ ಸ್ವಲ್ಪ ಹೊತ್ತು ತೂರಾಡಿದ ಹುಲಿ ಅನತಿ ದೂರ ಚಲಿಸಿ ಪ್ರಜ್ಞೆತಪ್ಪಿ ಬಿದ್ದಿತು. ನಂತರ ಹುಲಿಯನ್ನು ಬಲೆಗೆ ಹಾಕಿ ಸೆರೆಹಿಡಿದು ಬೋನಿಗೆ ಸೇರಿಸಲಾಯಿತು.

ಹುಲಿಯನ್ನು ಮೇಟಿಕುಪ್ಪೆ ವನ್ಯಜೀವಿ ವಲಯಕ್ಕೆ ತೆಗೆದುಕೊಂಡು ಹೋಗಿ, ಅದರ ಆರೋಗ್ಯ ಪರಿಶೀಲಿಸಿ ಮೈಸೂರು ಸಮೀಪದ ಕೂರ್ಗಳ್ಳಿ ಹುಲಿ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ಸಾಗಿಸಲಾಯಿತು.
*
ಹಿರಿಯ ಅಧಿಕಾರಿಗಳು ಮತ್ತು ವೈದ್ಯರಿಗೆ ಮಾಹಿತಿ ನೀಡಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಹುಲಿಯನ್ನು ಸೆರೆಹಿಡಿದಿದ್ದೇವೆ. ಹುಲಿಯಿಂದ ಯಾರಿಗೂ ತೊಂದರೆಯಾಗಿಲ್ಲ.
- ಪುಟ್ಟಸ್ವಾಮಿ,
ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.