ADVERTISEMENT

ಸೌರಶಕ್ತಿಯಿಂದ ನೀರಿನ ಹೊಂಡಗಳ ಪುನಶ್ಚೇತನ

ಮೈಸೂರು ವಿ.ವಿ ಸಾಕ್ಷ್ಯಚಿತ್ರಕ್ಕೆ ಎನ್‌ಸಿಇಆರ್‌ಟಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 12:27 IST
Last Updated 22 ಮಾರ್ಚ್ 2018, 12:27 IST
ಬಂಡಿಪುರ ಅರಣ್ಯದಲ್ಲಿನ ನೀರಿನ ಹೊಂಡ
ಬಂಡಿಪುರ ಅರಣ್ಯದಲ್ಲಿನ ನೀರಿನ ಹೊಂಡ   

ಮೈಸೂರು: ವನ್ಯಜೀವಿಗಳ ಬಾಯಾರಿಕೆ ತಣಿಸಲು ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ ಅಳವಡಿಸಿ ನೀರಿನ ಹೊಂಡಗಳನ್ನು ಪುನಶ್ಚೇತನಗೊಳಿಸುತ್ತಿರುವ ಕುರಿತು ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋ ಧನಾ ಕೇಂದ್ರದ ಸಿಬ್ಬಂದಿ ಎಸ್‌.ಎಂ. ಕೀರ್ತಿಕುಮಾರ್‌ ಮತ್ತು ಕೆ.ಗೋಪಿನಾಥ್‌ ಅವರು ‘ಸೌರಶಕ್ತಿಯಿಂದ ನೀರಿನ ಹೊಂಡಗಳ ಪುನಶ್ಚೇತನ’ ಹೆಸರಿನ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಭೋಪಾಲ್‍ನಲ್ಲಿ ಈಚೆಗೆ ಎನ್‌ಸಿಇಆರ್‌ಟಿ ಆಯೋಜಿಸಿದ್ದ ಶೈಕ್ಷಣಿಕ ಸಿನಿಮಾ ಮೇಳದಲ್ಲಿ ಇವರಿಬ್ಬರು ಈ ಪ್ರಶಸ್ತಿ ಪಡೆದಿದ್ದಾರೆ.

ಕಳೆದ ವರ್ಷ ಬಂಡಿಪುರ ರಾಷ್ಟ್ರೀಯ ಉದ್ಯಾನದ ಬಹುತೇಕ ಕೆರೆಗಳು ಬತ್ತಿ ಹೋಗಿದ್ದರಿಂದ ವನ್ಯಜೀವಿಗಳು ನೀರಿಗೆ ಪರಿತಪಿಸುವಂತಾಗಿತ್ತು. ನೀರಿನ ಹೊಂಡಗಳಿಗೆ ಈ ಮೊದಲು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತಿತ್ತು. ಬಳಿಕ ಹ್ಯಾಂಡ್‌ ಪಂಪ್‌ಗಳನ್ನು ಅಳವಡಿಸಿ ನೀರು ಹರಿಸಲಾಗುತಿತ್ತು. ಆದರೆ, ಆನೆಗಳು ಈ ಹ್ಯಾಂಡ್‌ ಪಂಪ್‌ಗಳನ್ನು ಧ್ವಂಸಗೊಳಿಸುತ್ತಿದ್ದವು. ಅರಣ್ಯದಲ್ಲಿ ವಿದ್ಯುತ್‌ ಅಳವಡಿಕೆ ಅಪಾಯದ ಕೆಲಸ. ಈ ಕಾರಣ ಅರಣ್ಯ ಇಲಾಖೆಯು ಸೌರಶಕ್ತಿ ಮೊರೆ ಹೋಗಿದ್ದು, ಇದರಿಂದ ನೀರಿನ ಹೊಂಡಗಳ ಪುನಶ್ಚೇತನ ಸುಲಭವಾಗಿದೆ. ಸೌರಶಕ್ತಿ ಫಲಕಗಳಿಗೆ ಹಾನಿಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ADVERTISEMENT

‘ಕಾಡಿನಲ್ಲಿ ನೀರಿನ ಬವಣೆ ತಪ್ಪಿಸಲು ಅರಣ್ಯ ಇಲಾಖೆ ಕಂಡುಕೊಂಡ ಮಾರ್ಗಗಳ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ವಿವರಿಸಿದ್ದೇವೆ. ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್‌ ಅವರ ಸಂದರ್ಶನವೂ ಇದೆ. ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಪರಿಸರ ತಜ್ಞೆ ಡಿ.ಎಚ್‌.ತನುಜಾ ನೆರವು ನೀಡಿದ್ದಾರೆ. ವನ್ಯಜೀವಿಗಳ ದಾಹ ನೀಗಿಸಲು ಅರಣ್ಯಾಧಿಕಾರಿಗಳು ಕಂಡುಕೊಂಡ ಈ ಯೋಜನೆಗೆ ಸಿನಿಮಾ ಮೇಳದಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಬೇರೆ ಬೇರೆ ವಿಭಾಗಗಳಿಂದ ಬಂದಿದ್ದ 72 ಸಾಕ್ಷ್ಯಚಿತ್ರಗಳು ಸ್ಪರ್ಧೆಯಲ್ಲಿದ್ದವು’ ಎಂದು ಕೀರ್ತಿಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸುಮಾರು 30 ನೀರಿನ ಹೊಂಡಗಳಿಗೆ ಈ ವ್ಯವಸ್ಥೆ ಇದೆ. ಇದರಿಂದ ಸುತ್ತಲಿನ ಪ್ರದೇಶ ಹಸಿರಿನಿಂದ ಕೂಡಿದೆ. ಹಿಂದೆ ಪ್ರಾಣಿಗಳು ನೀರು ಹುಡುಕಿಕೊಂಡು ಕಾಡಾಚೆ ಹೋಗುತ್ತಿದ್ದವು. ಈಗ ಅದು ತಗ್ಗಿದ್ದು ಮಾನವ ಹಾಗೂ ಪ್ರಾಣಿ ಸಂಘರ್ಷವೂ ಕಡಿಮೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.