ADVERTISEMENT

ಹೆಬ್ಬಾಳು ಕೆರೆ ಒತ್ತರಿಸಿ ಡಾಬಾ, ಕಾರ್ಖಾನೆ ಕಟ್ಟಿದರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 7:45 IST
Last Updated 22 ಆಗಸ್ಟ್ 2017, 7:45 IST
ಹೆಬ್ಬಾಳು ಕೆರೆ ಒತ್ತರಿಸಿ ಡಾಬಾ, ಕಾರ್ಖಾನೆ ಕಟ್ಟಿದರು
ಹೆಬ್ಬಾಳು ಕೆರೆ ಒತ್ತರಿಸಿ ಡಾಬಾ, ಕಾರ್ಖಾನೆ ಕಟ್ಟಿದರು   

ಮೈಸೂರು: ಮೈಸೂರಿನ ದೊಡ್ಡ ಕೆರೆಗಳಲ್ಲಿ ಹೆಬ್ಬಾಳು ಕೆರೆ ಸಹ ಒಂದು. ಈ ಕೆರೆಯ ಏರಿ ಹಾಗೂ ಕೆರೆಯ ಭಾಗ ಸೇರಿದಂತೆ ಸುಮಾರು 4 ಎಕರೆಯಷ್ಟು ಒತ್ತುವರಿ ಮಾಡಿಕೊಂಡು ಡಾಬಾ ಹಾಗೂ ಇಟ್ಟಿಗೆ ಕಾರ್ಖಾನೆ ನಿರ್ಮಿಸಲಾಗಿದೆ.

ಹೆಬ್ಬಾಳು ಕೆರೆಯ ಭಾಗವೇ ಆಗಿರುವ ಸರ್ವೆ ನಂಬರ್‌ 104ರಲ್ಲಿ ಒಟ್ಟು 8.2 ಎಕರೆ ಜಾಗದಲ್ಲಿ 4.2 ಎಕರೆ ಪ್ರದೇಶವನ್ನು ಸರ್ಕಾರಿ ಜಾಗವೆಂದು ಗುರುತಿಸಲಾಗಿದೆ. ಆದರೆ, 4.2 ಎಕರೆ ಸರ್ಕಾರಿ ಜಾಗವನ್ನು ಸರ್ಕಾರದ ಕಣ್ತಪ್ಪಿಸಿ ಖಾಸಗಿ ವ್ಯಕ್ತಿಗಳು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ. ಇದೇ ಜಾಗದಲ್ಲಿ ಡಾಬಾ ನಿರ್ಮಿಸಲಾಗಿದೆ. ಅಲ್ಲದೇ, ಇದರ ಪಕ್ಕವೇ ಸಿಮೆಂಟ್‌ ಇಟ್ಟಿಗೆ ಕಾರ್ಖಾನೆಯನ್ನೂ ನಿರ್ಮಿಸಿಕೊಂಡು ಎಗ್ಗಿಲ್ಲದೇ ಉದ್ಯಮ ನಡೆಸಲಾಗುತ್ತಿದೆ.

ಏರಿಯನ್ನು ಒತ್ತರಿಸಿಕೊಂಡರು:
ಹೆಬ್ಬಾಳು ಕೆರೆಯಿಂದ 4 ಎಕೆರೆ ಪಕ್ಕಕ್ಕೆ ಏರಿ ಈಗಲೂ ಇದೆ. ಈ ಏರಿ ದಿನೇ ದಿನೇ ಒತ್ತುವರಿಯಾಗುತ್ತ ಕಣ್ಮರೆಯಾಗುವತ್ತ ಸಾಗುತ್ತಿದೆ. ಏರಿಯನ್ನು ಟ್ರ್ಯಾಕ್ಟರ್‌ ಸಹಾಯದಿಂದ ಉಳಿಮೆ ಮಾಡಿಸಿ ನೆಲಸಮ ಮಾಡಲಾಗಿದೆ. ಏರಿಯನ್ನೂ ಸೇರಿಸಿಕೊಂಡು ಬೇಲಿ ಹಾಕಿಕೊಳ್ಳಲಾಗಿದ್ದು, ದಿನದಿಂದ ದಿನಕ್ಕೆ ಏರಿ ಕಿರಿದಾಗುತ್ತಿದೆ.

ಏರಿಯ ಪಕ್ಕವೇ ರಸ್ತೆ ನಿರ್ಮಾಣವಾಗಬೇಕು ಎಂದು ಜಾಗವನ್ನು ಗುರುತಿಸಲಾಗಿತ್ತು. ಜಿಲ್ಲಾಡಳಿತದ ವತಿಯಿಂದ ಜಾಗವನ್ನು ಗುರುತು ಮಾಡಿಸಿ ಅಳತೆ ಮಾಡುವ ಕೆಲಸವೂ ಆಗಿತ್ತು. ಆದರೆ, ಜಿಲ್ಲಾಡಳಿತ ಅಳೆದಿರುವ ಜಾಗವೂ ಈಗ ಒತ್ತುವರಿಯಾಗಿದೆ. ಕೆರೆಯ ಒಳಗೇ ಈಗ ಸಾಕಷ್ಟು ತೆಂಗಿನ ಮರಗಳನ್ನೂ ಬೆಳೆಸಲಾಗಿದೆ. ಅಲ್ಲಿ ಕೃಷಿ ಚಟುವಟಿಕೆಯೂ ನಿರಾತಂಕವಾಗಿ ಸಾಗಿದೆ.

ADVERTISEMENT

ಇನ್ಫೊಸಿಸ್‌ನಿಂದ ಅಭಿವೃದ್ಧಿ:
ಸರ್ಕಾರ ಗುರುತಿಸಿರುವ 104 ಸರ್ವೆ ನಂಬರ್ ಜಾಗದಲ್ಲಿ ಕೆರೆಯ ಅಭಿವೃದ್ಧಿ ಕಾರ್ಯ ನಡೆಸುವ ಹೊಣೆಯನ್ನು ಇನ್ಫೊಸಿಸ್‌ಗೆ ಜಿಲ್ಲಾಡಳಿತ ನೀಡಿದೆ. ಸಾಮಾಜಿಕ ಕಾರ್ಪೊರೇಟ್‌ ಹೊಣೆಗಾರಿಕೆ ಯೋಜನೆಯ ಅಡಿಯಲ್ಲಿ ಉಸ್ತುವಾರಿಯನ್ನೂ ವಹಿಸಿದೆ. ಇನ್ಫೊಸಿಸ್‌ ಬೇಲಿ ನಿರ್ಮಿಸಿದ್ದು, ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ.

ಅಲ್ಲದೇ, ಈ ಕೆರೆಗೆ ಬರುತ್ತಿದ್ದ ಕಾಲುವೆ ಹೇಳ ಹೆಸರಿಲ್ಲದೆ ಕಣ್ಮರೆಯಾಗಿದೆ. ಹೆಬ್ಬಾಳು ಕೆರೆಗೆ ಮಳೆ ನೀರು ಹರಿದುಬರಲಿ ಎಂಬ ಉದ್ದೇಶದಿಂದ ನಿರ್ಮಿಸಲಾಗಿದ್ದ ಕಾಲುವೆಗಳು ಈಗ ಇಲ್ಲವೇ ಇಲ್ಲ. ಕೆರೆಯ ಅಂಚಿನಲ್ಲಿ ಒಂದು ಕಾಲುವೆ ಹರಿದುಹೋಗುತ್ತದೆ. ಆದರೆ, ಆ ಕಾಲುವೆಗೂ ಕೆರೆಗೂ ಸಂಬಂಧವಿಲ್ಲ. ನೀರು ಪೂರೈಕೆ ಮಾಡುತ್ತಿದ್ದ ಕಾಲುವೆಗಳು ಮುಚ್ಚಿಹೋಗಿ ವರ್ಷಗಳೇ ಕಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.