ADVERTISEMENT

ಹೈಕೋರ್ಟ್ ಆದೇಶ ರವಾನಿಸಿದ ಕೆಎಸ್‌ಒಯು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 4:33 IST
Last Updated 18 ಡಿಸೆಂಬರ್ 2017, 4:33 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ (ಕೆಎಸ್‌ಒಯು) 2017–18ನೇ ಶೈಕ್ಷಣಿಕ ಸಾಲಿಗೆ 2 ವಾರಗಳಲ್ಲಿ ಮಾನ್ಯತೆ ನೀಡುವಂತೆ ಹೈಕೋರ್ಟ್‌ ಆದೇಶಿಸಿರುವ ಪತ್ರವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ರವಾನಿಸಲಾಗಿದೆ.

2017–18ನೇ ಸಾಲಿಗೆ ಮಾನ್ಯತೆ ದೊರಕಿಸಿಕೊಡುವಂತೆ ಹೈಕೋರ್ಟ್‌ಗೆ ಕೆಎಸ್‌ಒಯು ರಿಟ್‌ ಅರ್ಜಿ ಸಲ್ಲಿಸಿತ್ತು. ಡಿ.12ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತಾಂತ್ರಿಕೇತರ ಕೋರ್ಸ್‌ಗಳಿಗೆ ಮಾನ್ಯತೆ ನೀಡುವಂತೆ ಆದೇಶಿಸಿತ್ತು. ಈ ಆದೇಶಪತ್ರವನ್ನು ಮುಕ್ತ ವಿ.ವಿಯು ರವಾನಿಸಿದ್ದು, ಯುಜಿಸಿ ಪ್ರತಿಕ್ರಿಯೆಗಾಗಿ ಕಾಯುತ್ತಿದೆ.

‘ಮೊದಲ ಹಂತದ ಜಯ ದೊರಕಿದ್ದು, ಮಾನ್ಯತೆ ಲಭಿಸುವ ವಿಶ್ವಾಸವಿದೆ. 2013–14 ಹಾಗೂ 2014–15ನೇ ಸಾಲಿಗೂ ಮಾನ್ಯತೆ ದೊರಕಿಸಲು ಕಾನೂನು ಹೋರಾಟ ನಡೆಸಲಾಗುವುದು’ ಎಂದು ವಿ.ವಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

2015–16 ಹಾಗೂ 2016–17ರಲ್ಲಿ ವಿದ್ಯಾರ್ಥಿಗಳ ನೋಂದಣಿಯೇ ಆಗಿಲ್ಲ. ಹೀಗಾಗಿ, ಈ ಶೈಕ್ಷಣಿಕ ಅವಧಿಗೆ ಮಾನ್ಯತೆಯೇ ಬೇಕಿಲ್ಲ. ಬಾಕಿ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ವಿವಿಧ ಪರೀಕ್ಷೆ ಬರೆದಿದ್ದು, ಫಲಿತಾಂಶಗಳಿಗೆ ಮಾನ್ಯತೆ ಇಲ್ಲದಂತಾಗಿದೆ. ಈ ವಿದ್ಯಾರ್ಥಿಗಳಿಗೂ ನ್ಯಾಯ ದೊರಕಿಸಿಕೊಡುವಂತೆ ಮುತುವರ್ಜಿ ವಹಿಸಲಾಗುವುದು ಎಂದು ಮೂಲಗಳು ಹೇಳಿವೆ.

ತಾಂತ್ರಿಕ ಮಿತಿಗಳಿಲ್ಲ: ಮಾನ್ಯತೆ ಪಡೆಯುವುದಕ್ಕೆ ಪೂರಕವಾಗಿ ಯುಜಿಸಿಯ ಹೊಸ ನಿಯಮಗಳ ಪ್ರಕಾರ ಎಲ್ಲ ಮಾನದಂಡಗಳನ್ನು ಮುಕ್ತ ವಿ.ವಿ ಪೂರೈಸಿದೆ. ಪ್ರವೇಶಪತ್ರಿಕೆ ಶುಲ್ಕ, ನೋಂದಣಿ, ಪರೀಕ್ಷೆ, ಪ್ರಮಾಣಪತ್ರ ಸೇರಿದಂತೆ ವಿವಿಧ ಶುಲ್ಕ ಸ್ವೀಕಾರಕ್ಕೆ ಸಂಬಂಧಿಸಿದಂತೆ ಈವರೆಗೆ ನಿಯಮಾವಳಿಗಳು ಇರಲಿಲ್ಲ.

ವಿ.ವಿಯ 35 ವಿವಿಧ ಕೋರ್ಸ್‌ಗಳಿಗೆ ‘ಯೋಜನಾ ಪ್ರಸ್ತಾವ ವರದಿ’ಗಳಿಗೆ (ಪಿಪಿಆರ್‌) ಅನುಮೋದನೆ ಪಡೆಯಲಾಗಿದೆ. ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಈ ವರದಿ ಸಿದ್ಧಪಡಿಸಿ ಯುಜಿಸಿಗೆ ಸಲ್ಲಿಸುವುದು ಕಡ್ಡಾಯವಾಗಿರುವ ಕಾರಣ ಈ ಕ್ರಮ ವಹಿಸಲಾಗಿದೆ. ಅಂತೆಯೇ, ಯುಜಿಸಿ ಹೊಸ ನಿಯಮಾವಳಿಗಳ ಪ್ರಕಾರ ಸಂದರ್ಶಕ ಪ್ರಾಧ್ಯಾಪಕರ ನೇಮಕ ಆಗಬೇಕಿದ್ದು, ಇದಕ್ಕಾಗಿಯೂ ತೀರ್ಮಾನಗಳನ್ನು ವಿ.ವಿ ಕೈಗೊಂಡಿದೆ. ಹೀಗಾಗಿ, ಮಾನ್ಯತೆ ಪಡೆಯುವ ವಿಚಾರವಾಗಿ ಯಾವುದೇ ತಾಂತ್ರಿಕ ಮಿತಿಗಳು ಈಗ ಇಲ್ಲವಾಗಿವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.