ADVERTISEMENT

ಹೈದರಾಬಾದ್‌ನಿಂದ ಮೈಸೂರಿಗೆ ವಿಮಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 8:25 IST
Last Updated 12 ಸೆಪ್ಟೆಂಬರ್ 2017, 8:25 IST

ಮೈಸೂರು: ‘ಉಡಾನ್‌’ ಯೋಜನೆಯಡಿ ಹೈದರಾಬಾದ್‌ನಿಂದ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸೆ. 20ರಂದು ವಿಮಾನಯಾನ ಸಂಪರ್ಕ ಆರಂಭವಾಗಲಿದೆ. ಹೈದರಾಬಾದ್‌ ಮೂಲದ ಟ್ರೂಜೆಟ್‌ ವಿಮಾನಯಾನ ಕಂಪೆನಿಯು ಕಡಿಮೆ ದರದಲ್ಲಿ ಈ ಸೇವೆ ಒದಗಿಸಲು ಮುಂದಾಗಿದೆ. ಇದೇ ಕಂಪೆನಿಯು ಈ ಮೊದಲು ಚೆನ್ನೈ–ಮೈಸೂರು ನಡುವೆ ಸಂಪರ್ಕ ಕಲ್ಪಿಸಲು ಮುಂದಾಗಿತ್ತು. ಆದರೀಗ ಅದನ್ನು ಹೈದರಾಬಾದ್‌ವರೆಗೆ ವಿಸ್ತರಿಸಿದೆ.

72 ಆಸನಗಳ ವಿಮಾನವು ಮಧ್ಯಾಹ್ನ 3.30ಕ್ಕೆ ಹೈದರಾಬಾದ್‌ನಿಂದ ಹೊರಟು ಚೆನ್ನೈ ಮಾರ್ಗವಾಗಿ ಸಂಜೆ 6.40ಕ್ಕೆ ಮೈಸೂರಿಗೆ ಬಂದಿಳಿಯಲಿದೆ. ಚೆನ್ನೈನಲ್ಲಿ 25 ನಿಮಿಷ ನಿಲುಗಡೆಯಾಗಲಿದೆ. ರಾತ್ರಿ 7.05ಕ್ಕೆ ಮೈಸೂರಿನಿಂದ ಹೊರಡುವ ವಿಮಾನವು ಚೆನ್ನೈ ಮೂಲಕ 10.15ಕ್ಕೆ ಹೈದರಾಬಾದ್‌ ತಲುಪಲಿದೆ.‌

ಇದರೊಂದಿಗೆ ಎರಡು ನಗರಗಳೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ವಾಯುಯಾನ ಸಂಪರ್ಕ ಏರ್ಪಡಲಿದೆ. ಹೈದರಾಬಾದ್‌ನಿಂದ ಮೈಸೂರಿಗೆ ₹ 3,838 ದರ ನಿಗದಿ ಮಾಡಲಾಗಿದೆ. ಮೈಸೂರಿನಿಂದ ಹೈದರಾಬಾದ್‌ಗೆ ₹ 3,816 ಇರಲಿದೆ.

ADVERTISEMENT

ವಿಶೇಷವೆಂದರೆ ಚೆನ್ನೈನಿಂದ ಮೈಸೂರಿಗೆ ಬರುವ ಪ್ರಯಾಣಿಕರಿಗೆ ಕೇವಲ ₹ 999 ದರ ನಿಗದಿಪಡಿಸಲಾಗಿದೆ. ಮೈಸೂರಿನಿಂದ ಚೆನ್ನೈಗೆ ₹ 1,425 ಇರಲಿದೆ.
ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾ ನಯಾನ ಸಚಿವಾಲಯ ಮುಂದಾಗಿದೆ.

ವಿಮಾನ ನಿಲ್ದಾಣ ಸಲಹಾ ಸಮಿತಿಯು ಈ ಸಂಬಂಧ ಸೋಮವಾರ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಭೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿತು. ಸಂಸದ ಪ‍್ರತಾಪಸಿಂಹ, ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಡಿ.ರಂದೀಪ್‌, ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್‌ ಕುಮಾರ್‌, ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಎಂ.ರಾಜೇಂದ್ರ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಸಭೆಯಲ್ಲಿ ಇದ್ದರು.

ಸೆ. 15ರಂದು ವಿಮಾನಯಾನ ಸಂಪರ್ಕ ಆರಂಭವಾಗಬೇಕಿತ್ತು. ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಉದ್ಘಾಟನೆ ನೆರವೇರಿಸಲಿದ್ದು, ಸೆ. 20ಕ್ಕೆ ನಿಗದಿಪಡಿಸಲಾಗಿದೆ.

ಅಲ್ಲದೆ, ವಿಮಾನ ನಿಲ್ದಾಣದ ಭದ್ರತೆ, ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ದಸರಾ ಮಹೋತ್ಸವ ಸಮಯದಲ್ಲಿ ಕಲ್ಪಿಸುವ ವಿಶೇಷ ವಿಮಾನ ಸೇವೆ ಬಗ್ಗೆ ಪ್ರಸ್ತಾಪವಾಯಿತು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ. ನವೆಂಬರ್‌ ವೇಳೆಗೆ ಇಂಡಿಗೊ ಸಂಸ್ಥೆಯು ಪುಣೆ–ಮೈಸೂರು ನಡುವೆ ವಿಮಾನಯಾನ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೆ. ಆದರೆ, ಅದಿನ್ನೂ ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.