ADVERTISEMENT

14ರಂದು ಮೃಗಾಲಯ ವೀಕ್ಷಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 9:24 IST
Last Updated 10 ನವೆಂಬರ್ 2017, 9:24 IST

ಮೈಸೂರು: ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಉದ್ಯಾನವನ್ನು ನ. 14ರಂದು (ಮಂಗಳವಾರ) ತೆರೆದಿರಲಾಗುತ್ತದೆ. ಪ್ರತಿ ಮಂಗಳವಾರ ಮೃಗಾಲಯ ಹಾಗೂ ಕಾರಂಜಿ ಉದ್ಯಾನ ಮುಚ್ಚಿರುತ್ತವೆ.

‘ಅಂದು 12 ವರ್ಷದೊಳಗಿನ ಮಕ್ಕಳಿಗೆ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದೆ’ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್ ತಿಳಿಸಿದರು.

ಮತ್ತೆ ಮೃಗಾಲಯಕ್ಕೆ ಚಿರತೆ: ಎರಡು ದಿನಗಳ ಹಿಂದೆ ಚಿರತೆಯೊಂದು ಮತ್ತೆ ಮೃಗಾಲಯ ಪ್ರವೇಶಿಸಿದೆ. ಆದರೆ, ಯಾವುದೇ ಅಪಾಯ ಸಂಭವಿಸಿಲ್ಲ. ‘ಮಂಗಳವಾರ ರಾತ್ರಿ ಚಿರತೆ ಬಂದಿರುವ ಸಾಧ್ಯತೆ ಇದೆ. ಮರವೇರಿ ಒಳಗೆ ಜಿಗಿದಿರುವುದು ಹೆಜ್ಜೆ ಗುರುತುಗಳಿಂದ ಗೊತ್ತಾಗಿದೆ’ ಎಂದು ರವಿಶಂಕರ್‌ ಹೇಳಿದರು.

ADVERTISEMENT

‘ಸರ್ಕಸ್‌ ನಡೆಯುವ ಸ್ಥಳದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಈ ನಾಯಿಗಳನ್ನು ತಿನ್ನಲು ಚಿರತೆ ಬಂದಿರಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಬೋನು ಇಟ್ಟಿದ್ದೇವೆ. ಅಲ್ಲದೆ, ರಾತ್ರಿ ಗಸ್ತು ಹೆಚ್ಚಿಸಿದ್ದು 25 ಸಿಬ್ಬಂದಿ ನಿಯೋಜಿಸಿದ್ದೇವೆ. ಬೆಳಿಗ್ಗೆ ಮತ್ತೊಮ್ಮೆ ಗಸ್ತು ತಿರುಗಲಿದ್ದಾರೆ. ಆ ಬಳಿಕವಷ್ಟೇ ಮೃಗಾಲಯದೊಳಗೆ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗುವುದು‌’ ಎಂದು ತಿಳಿಸಿದರು.

ಹೊರಗಿನಿಂದ ಬಂದು ಮೃಗಾಲಯದೊಳಗೆ ನುಗ್ಗಿದ್ದ ಚಿರತೆಯನ್ನು ಈಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಅದರ ಬೆನ್ನಲ್ಲೇ ಮತ್ತೆ ಚಿರತೆ ಪ್ರವೇಶಿಸಿರುವುದು ಪ್ರವಾಸಿಗರಲ್ಲಿ ಆತಂಕ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.