ADVERTISEMENT

₹ 200 ಕೋಟಿ ಅನುದಾನಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2017, 8:53 IST
Last Updated 23 ಜೂನ್ 2017, 8:53 IST

ಮೈಸೂರು: ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು ₹ 200 ಕೋಟಿ ಅನುದಾನ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್‌ ಬೇಡಿಕೆ ಇಟ್ಟಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಅವರ ನೇತೃತ್ವದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮನವಿ ಮಾಡಿದರು.

‘15 ಯೋಜನೆಗಳು ಪ್ರಗತಿಯ ಲ್ಲಿದ್ದು, 2 ಯೋಜನೆಗಳು ಪ್ರಗತಿ ಹಂತದ ಲ್ಲಿವೆ. ಇದಕ್ಕೆ ಒಟ್ಟು ₹ 287 ಕೋಟಿ ಅನುದಾನ ಅಗತ್ಯವಿದೆ. ಈ ವರ್ಷ ₹ 200 ಕೋಟಿ ಬೇಕು. ಅನುದಾನ ಲಭಿಸಿದರೆ 15 ಯೋಜನೆಗಳನ್ನು ಮುಗಿಸಬಹುದು’ ಎಂದರು.

ADVERTISEMENT

ಇದಕ್ಕೆ ಸ್ಪಂದಿಸಿದ ನಂಜಯ್ಯನಮಠ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜೊತೆ ಮಾತನಾಡಿ ಹಂತ ಹಂತವಾಗಿ ಅನುದಾನ ಕೊಡಿಸುವ ಭರವಸೆ ನೀಡಿದರು. ಜಿ.ಪಂ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌ ಅವರು ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

‘ಆರು ತಿಂಗಳಿನಿಂದ ಏಕೆ ಎರಡು ಯೋಜನೆಗಳು ಟೆಂಡರ್‌ ಹಂತದಲ್ಲಿವೆ, ಶುರು ಮಾಡಲು ಏಕೆ ಆಸಕ್ತಿ ತೋರುತ್ತಿಲ್ಲ’ ಎಂದು ನಂಜಯ್ಯನಮಠ ಪ್ರಶ್ನಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ವಿಳಂಬಕ್ಕೂ ಅಸಮಾಧಾನ ವ್ಯಕ್ತಪಡಿಸಿದರು.

‘ಸಹಕಾರ ಸಂಘ–ಸಂಸ್ಥೆಗಳ ವತಿಯಿಂದ ಘಟಕಗಳ ಅನುಷ್ಠಾನ ವಿಳಂಬವಾಗುತ್ತಿದೆ. ಅನುಮೋದನೆಯಾಗಿರುವ 50 ಘಟಕಗಳಲ್ಲಿ ಕೇವಲ 5 ಅಳವಡಿಕೆ ಯಾಗಿವೆ, 5 ಕಮಿಷನ್ಡ್‌ ಆಗಿವೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರು ಜಿಲ್ಲೆಯದ್ದು ಕಳಪೆ ಸಾಧನೆ. ಜುಲೈ ನೊಳಗೆ ಅನುಷ್ಠಾನ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಅನುದಾನ ವಾಪಸ್‌ ಪಡೆಯಿರಿ’ ಎಂದು ಸಿಇಒಗೆ ತಾಕೀತು ಮಾಡಿದರು.

ಸಮಿತಿ ಸದಸ್ಯೆ ಸುಧಾಮಣಿ ಮಾತನಾಡಿ, ‘ತಿ.ನರಸೀಪುರದ ಹೊರಳಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಜನರು ಹಲ್ಲು, ಗಂಟಲು, ಮಂಡಿನೋವಿನಿಂದ ಬಳಲುತ್ತಿದ್ದಾರೆ. ತಕ್ಷಣವೇ ಅಲ್ಲಿಗೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿ’ ಎಂದರು.

ಹುಣಸೂರು ಶೇ 92 ಸಾಧನೆ: ಈ ತಿಂಗಳ ಅಂತ್ಯಕ್ಕೆ ಹುಣಸೂರು ತಾಲ್ಲೂಕು ಬಯಲು ಶೌಚಮುಕ್ತವಾಗಲಿದೆ ಎಂದು ಸಿಇಒ ಶಿವಶಂಕರ್‌ ಮಾಹಿತಿ ನೀಡಿದರು. ‘ಶೌಚಾಲಯ ನಿರ್ಮಾಣದಲ್ಲಿ ಹುಣಸೂರು ತಾಲ್ಲೂಕಿನಲ್ಲಿ ಶೇ 92ರಷ್ಟು ಪ್ರಗತಿ ಸಾಧಿಸಲಾಗಿದೆ.

ಹಾಗೆಯೇ ಅಕ್ಟೋಬರ್‌ 2ರೊಳಗೆ ಪಿರಿಯಾಪಟ್ಟಣ, ಮೈಸೂರು, ತಿ.ನರಸೀಪುರ ಕೂಡ ಬಯಲು ಶೌಚಮುಕ್ತ ತಾಲ್ಲೂಕು ಗಳನ್ನಾಗಿ ಘೋಷಿಸಲಾಗುವುದು. ಜಿಲ್ಲೆಯಲ್ಲಿ ಶೇ 75 ಪ್ರಗತಿ ಸಾಧಿಸಲಾಗಿದ್ದು, 1,00,927 ಶೌಚಾಲಯ ನಿರ್ಮಿಸಬೇಕಿದೆ. 7,589 ಶೌಚಾಲಯ ನಿರ್ಮಾಣಕ್ಕೆ ಕಾರ್ಯಾ ದೇಶವಾಗಿದೆ’ ಎಂದು ಹೇಳಿದರು.

ನರೇಗಾ ಯೋಜನೆಯಡಿ ಈ ಸಾಲಿನಲ್ಲಿ ₹ 131 ಕೋಟಿ ಅನುದಾನ ಲಭಿಸಿದ್ದು, 3.48 ಲಕ್ಷ ಮಾನವ ದಿನಗಳ ಸಾಧನೆ ಮಾಡಿದ್ದೇವೆ. ಸದ್ಯದ ನಮ್ಮ ಸಾಧನೆ ಶೇ 10.78ರಷ್ಟಿದೆ.

ಅಲ್ಲದೆ, ಮುಖ್ಯಮಂತ್ರಿಯವರ 21 ಅಂಶಗಳ ಕಾರ್ಯಕ್ರಮದಡಿ 9,810 ಕುರಿ/ದನಗಳ ಕೊಟ್ಟಿಗೆ, 241 ಕಣ, 2,660 ಕೃಷಿ ಹೊಂಡ, 150 ಅಂಗನವಾಡಿ ಕಟ್ಟಡ ನಿರ್ಮಾಣ, 337 ಆಟದ ಮೈದಾನ, 141 ಸ್ಮಶಾನ, 317 ಕೆರೆ ಅಭಿವೃದ್ಧಿ ಮಾಡಲು ಹಾಗೂ 769 ಕೊಳವೆ ಬಾವಿಗಳ ಮರುಪೂರಣ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಮಳೆ ಕೊರತೆ: ಈ ತಿಂಗಳು ಶೇ 49.5ರಷ್ಟು ಮಳೆ ಕೊರತೆ ಉಂಟಾಗಿದೆ. ಜೂನ್‌ ತಿಂಗಳ ವಾಡಿಕೆ ಮಳೆ 51.9 ಮಿ.ಮೀ. ಆಗಿದ್ದು, ಇದುವರೆಗೆ 25.7 ಮಿ.ಮೀ. ಮಾತ್ರ ಮಳೆಯಾಗಿದೆ ಎಂದು ಶಿವಶಂಕರ್‌ ಹೇಳಿದರು. ಸಮಿತಿ ಸದಸ್ಯ ತಿಪ್ಪೇಸ್ವಾಮಿ ಹಾಗೂ ತಾ ಪಂ ಇಒಗಳು ಇದ್ದರು.

ನೀರು ವ್ಯರ್ಥ
ಮೈಸೂರು: ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ₹ 2 ನಾಣ್ಯ ಹಾಕಿದರೆ 20 ಲೀಟರ್‌ ನೀರು ಬರುತ್ತದೆ. ಆದರೆ, ₹ 2 ನಾಣ್ಯ ಹಾಕಿ ಕೇವಲ 2 ಲೀಟರ್‌ ನೀರು ಹಿಡಿದುಕೊಂಡು ಹೋಗುವವರೂ ಇದ್ದಾರೆ.

ಇಂಥ ಸಮಯದಲ್ಲಿ ಉಳಿದ 18 ಲೀಟರ್‌ ಸುಖಾಸುಮ್ಮನೇ ಹರಿದು ಹೋಗುತ್ತದೆ. ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ತಂತ್ರಜ್ಞಾನ ರೂಪಿಸಿ. ಎಷ್ಟು ಬೇಕು ಅಷ್ಟು ಲೀಟರ್‌ಗೆ ನಿಲ್ಲುವಂತಿರಬೇಕು ಎಂದು ಸಮಿತಿ ಸದಸ್ಯೆ ಸುಧಾಮಣಿ ಸಲಹೆ ನೀಡಿದರು.

* * 

ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಸರ್ಕಾರ ಹಣ ಕೊಟ್ಟರೂ ಜನ ಮುಂದೆ ಬರುತ್ತಿಲ್ಲ. ಬಯಲು ಶೌಚ ಮುಕ್ತ ರಾಜ್ಯ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ
ಎಸ್‌.ಜಿ.ನಂಜಯ್ಯನಮಠ ಅಧ್ಯಕ್ಷ, ಗ್ರಾಮೀಣ  ಕುಡಿಯುವ ನೀರು ಪರಿಶೀಲನಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.