ADVERTISEMENT

ಪ್ರಚಾರಕ್ಕೆ ಇಳಿದ ಎಸ್‌ಡಿಪಿಐ ಅಭ್ಯರ್ಥಿ

ಜಿ.ಬಿ.ನಾಗರಾಜ್
Published 16 ಜನವರಿ 2018, 6:41 IST
Last Updated 16 ಜನವರಿ 2018, 6:41 IST
ಕೇತ್ರದ ನಕ್ಷೆ
ಕೇತ್ರದ ನಕ್ಷೆ   

ಮೈಸೂರು: ಕಾಂಗ್ರೆಸ್‌ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ನಾಲ್ಕು ದಶಕಗಳಿಂದ ಒಂದೇ ಕುಟುಂಬದ ಹಿಡಿತದಲ್ಲಿರುವ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಲವು ಪಕ್ಷಗಳು ಹವಣಿಸುತ್ತಿವೆ. ಇದರಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮುಂಚೂಣಿಯಲ್ಲಿದೆ.

ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಕೆ.ಅಬ್ದುಲ್‌ ಮಜೀದ್‌ ಅವರೇ ಪಕ್ಷದ ಅಭ್ಯರ್ಥಿ ಎಂದು ಆರು ತಿಂಗಳ ಹಿಂದೆ ಪಕ್ಷದ ಮುಖಂಡರು ಘೋಷಣೆ ಮಾಡಿದ್ದಾರೆ. 2013ರ ಚುನಾವಣೆಯಲ್ಲಿ 29,667 ಮತ ಗಳಿಸಿ ಪರಾಭವಗೊಂಡಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮತ್ತೆ ಇದೇ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಪಾಲಿಕೆ ಸದಸ್ಯ ಸಂದೇಶಸ್ವಾಮಿ ಚುನಾವಣೆ ಪ್ರಚಾರ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಎರಡು ಬಾರಿ ಸ್ಪರ್ಧಿಸಿದ್ದ ಅವರು ಜೆಡಿಎಸ್‌ ಟಿಕೆಟ್‌ ಕೈತಪ್ಪದು ಎಂಬ ವಿಶ್ವಾಸದಲ್ಲಿದ್ದಾರೆ. ಬಿಜೆಪಿ ‘ಬಿ’ ಫಾರಂ ಪಡೆಯಲು 11 ಮಂದಿ ಸ್ಪರ್ಧೆಯಲ್ಲಿದ್ದಾರೆ.

ADVERTISEMENT

‘ಕಳೆದ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ 15 ವಾರ್ಡ್‌ಗಳಲ್ಲಿ ಅತಿ ಹೆಚ್ಚು ಮತಗಳು ಸಿಕ್ಕಿದ್ದವು. ಹೀಗಾಗಿ ಈ ವಾರ್ಡ್‌ಗಳನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತಿದ್ದೇವೆ. ಜೂನ್‌ ತಿಂಗಳಿಂದಲೇ ಪ್ರಚಾರ ಕೈಗೊಂಡಿದ್ದು, 6 ಸೇವಾ ಕೇಂದ್ರಗಳನ್ನು ತೆರೆದು ಜನರೊಂದಿಗೆ ಸಂಪರ್ಕ ಸಾಧಿಸಿದ್ದೇವೆ’ ಎಂದು ಅಬ್ದುಲ್‌ ಮಜೀದ್‌ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಾಕ್‌ ಟು ವಾರ್ಡ್‌’ ಎಂದು ಅಭಿಯಾನ ಕೂಡ ಆರಂಭವಾಗಿದೆ. ನಿತ್ಯ ಬೆಳಗಿನ ನಮಾಜ್‌ ಮುಗಿದ ಬಳಿಕ ಎಸ್‌ಡಿಪಿಐ ಕಾರ್ಯಕರ್ತರು ವಾರ್ಡ್‌ಗಳಿಗೆ ತೆರಳಿ ಸಾರ್ವಜನಿಕರ ಅಹವಾಲು ಆಲಿಸುತ್ತಾರೆ. ಕ್ಷೇತ್ರದಲ್ಲಿರುವ 22 ವಾರ್ಡ್‌ಗಳ ಪೈಕಿ ಮೂವರು ಈ ಪಕ್ಷದ ಕಾರ್ಪೊರೇಟರ್‌ಗಳಿದ್ದಾರೆ.

ಬಿಜೆಪಿಯಲ್ಲಿ 11 ಆಕಾಂಕ್ಷಿಗಳು: ಮಾಜಿ ಶಾಸಕ ಮಾರುತಿರಾವ್‌ ಪವಾರ್‌ ಸೇರಿ ಬಿಜೆಪಿ ಟಿಕೆಟ್‌ಗೆ 11 ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಕೌಟಿಲ್ಯ ರಘು ಅವರ ಹೆಸರು ಸಹ ಕೇಳಿ ಬರುತ್ತಿದೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಡೆದ ಮತಗಳನ್ನು ಆಧಾರವಾಗಿಟ್ಟುಕೊಂಡು ‘ಬಿ’ ಫಾರಂ ಕೇಳುತ್ತಿದ್ದಾರೆ. ಅಲ್ಪಸಂಖ್ಯಾತರ ಘಟಕದ ಮುಖಂಡ ಡಾ.ಅನಿಲ್‌ ಥಾಮಸ್‌, ಎಚ್‌.ಜಿ.ಗಿರಿಧರ್‌, ಟಿ.ರಮೇಶ್‌ ಸೇರಿ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಮೂರು ಬಾರಿ ಪರಾಭವಗೊಂಡಿದ್ದ ಬಿ.ಪಿ.ಮಂಜುನಾಥ್‌ ಚುನಾವಣೆಗೆ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ.

‘ಪಕ್ಷದ ಬಲ ಹೆಚ್ಚಿರುವುದರಿಂದ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ. ಪಕ್ಷ ಈಗಾಗಲೇ ಮೂರು ಬಾರಿ ಸಮೀಕ್ಷೆ ಮಾಡಿ ಸಮರ್ಥ ಅಭ್ಯರ್ಥಿಗೆ ಹುಡುಕಾಟ ನಡೆಸಿದೆ. ಈ ಆಕಾಂಕ್ಷಿಗಳ ಹೊರತಾಗಿ ಬೇರೊಬ್ಬರಿಗೆ ‘ಬಿ’ ಫಾರಂ ಸಿಕ್ಕರೂ ಅಚ್ಚರಿ ಪಡಬೇಕಾಗಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಜೆಡಿಎಸ್‌ ಪ್ರಚಾರಕ್ಕೆ ಸಿದ್ಧತೆ: 2013ರಲ್ಲಿ 29 ಸಾವಿರ ಮತ ಪಡೆದು ಪರಾಭವಗೊಂಡಿದ್ದ ಸಂದೇಶಸ್ವಾಮಿ ಅವರು ಜೆಡಿಎಸ್‌ನಿಂದ ಮತ್ತೊಮ್ಮೆ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಬೂತ್‌ ಮಟ್ಟದ ಸಮಿತಿಗಳನ್ನು ರಚಿಸಿ ಸಭೆ ನಡೆಸಿದ್ದಾರೆ. ಮುಂದಿನ ವಾರದಿಂದ ಮನೆ–ಮನೆಗೆ ತೆರಳಿ ಪ್ರಚಾರ ಕೈಗೊಳ್ಳುವ ತಯಾರಿಯಲ್ಲಿದ್ದಾರೆ. ಕಾಂಗ್ರೆಸ್‌ನ ಮಾಜಿ ಮೇಯರ್‌ ಜೆಡಿಎಸ್‌ ಅಭ್ಯರ್ಥಿ ಆಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

‘ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನನಗೆ ಟಿಕೆಟ್‌ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಮತಗಳು ಬಂದಿವೆ’ ಎಂದು ಸಂದೇಶಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಸ್ಪರ್ಧಿ ಇಲ್ಲ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರು ನರಸಿಂಹರಾಜ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಇವರ ತಂದೆ ಅಜೀಜ್‌ ಸೇಠ್‌ 25 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹೀಗಾಗಿ, ಕಾಂಗ್ರೆಸ್‌ನಲ್ಲಿ ಇವರಿಗೆ ಪ್ರತಿಸ್ಪರ್ಧಿ ಇಲ್ಲ.

ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಎಸ್‌ಡಿಪಿಐ ಕ್ಷೇತ್ರದಲ್ಲಿ ಚುರುಕಾಗಿರುವುದು ತನ್ವೀರ್‌ಗೆ ತಲೆನೋವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ವಾತಾವರಣ ಬದಲಾಗುತ್ತಿರುವುದು ಮೇಲುನೋಟಕ್ಕೆ ಕಂಡುಬರುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕುಟುಂಬ ರಾಜಕಾರಣಕ್ಕೆ ತೆರಬೀಳಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.