ADVERTISEMENT

ಕೋಟೆ ನಾಡಿನಲ್ಲಿ ಟಿಕೆಟ್‌ಗೆ ಭಾರಿ ಪೈಪೋಟಿ

ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರ: ಚಿಕ್ಕಮಾದು ಪುತ್ರ ಅನಿಲ್‌ಗೆ ಕಾಂಗ್ರೆಸ್‌ ಗಾಳ?

ಕೆ.ಓಂಕಾರ ಮೂರ್ತಿ
Published 18 ಜನವರಿ 2018, 6:17 IST
Last Updated 18 ಜನವರಿ 2018, 6:17 IST
ಕೋಟೆ ನಾಡಿನಲ್ಲಿ ಟಿಕೆಟ್‌ಗೆ ಭಾರಿ ಪೈಪೋಟಿ
ಕೋಟೆ ನಾಡಿನಲ್ಲಿ ಟಿಕೆಟ್‌ಗೆ ಭಾರಿ ಪೈಪೋಟಿ   

ಮೈಸೂರು: ಹಾಲಿ ಶಾಸಕರಿಲ್ಲದೆ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಎಚ್‌.ಡಿ.ಕೋಟೆ ಕ್ಷೇತ್ರದತ್ತ ಸಹಜವಾಗಿಯೇ ಎಲ್ಲರ ಚಿತ್ತ ನೆಟ್ಟಿದೆ. ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ಗಾಗಿ ಎಲ್ಲಾ ಪಕ್ಷಗಳಲ್ಲೂ ಪೈಪೋಟಿ ಏರ್ಪಟ್ಟಿದೆ.

ಜೆಡಿಎಸ್‌ನಿಂದ ಎಸ್‌.ಚಿಕ್ಕಮಾದು ಪುತ್ರ ಅನಿಲ್‌, ಬಿಜೆಪಿ ತೊರೆದಿರುವ ಚಿಕ್ಕಣ್ಣ, ಕಾಂಗ್ರೆಸ್‌ನಿಂದ ಕೃಷ್ಣ ನಾಯಕ, ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ, ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ, ಬಿಜೆಪಿಯಿಂದ ಕೃಷ್ಣಸ್ವಾಮಿ, ಸಿದ್ದರಾಜು, ಸ್ಥಳೀಯರಾದ ಸಿದ್ದನಾಯಕ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಚಿಕ್ಕಮಾದು ನಿಧನದಿಂದಾಗಿ ಎರಡೂವರೆ ತಿಂಗಳಿನಿಂದ ಕೋಟೆಯಲ್ಲಿ ಶಾಸಕರು ಇಲ್ಲ. ಏಪ್ರಿಲ್‌ನೊಳಗೆ ಇಲ್ಲಿ ಉಪಚುನಾವಣೆ ನಡೆಯಬೇಕಿತ್ತು. ಆದರೆ, ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ ಇರುವ ಕಾರಣ ಉಪಚುನಾವಣೆ ನಡೆಯುತ್ತಿಲ್ಲ.

ADVERTISEMENT

ಅನಿಲ್‌ ಪರ ಒಲವು: ಜಿ.ಪಂ ಸದಸ್ಯರೂ ಆಗಿರುವ ಅನಿಲ್‌ ಅವರಿಗೇ ಜೆಡಿಎಸ್‌ ಟಿಕೆಟ್‌ ನೀಡಬೇಕೆಂದು ಈಗಾಗಲೇ ಅವರ ಬೆಂಬಲಿಗರು ‍ಪಕ್ಷದ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದಾರೆ. ಅನುಕಂಪದ ಅಲೆಯಲ್ಲಿ ಸುಲಭವಾಗಿ ಗೆಲ್ಲಬಹುದು ಎಂಬುದು ಅವರ ಲೆಕ್ಕಾಚಾರ. ಅದಕ್ಕೆ ಜಿಲ್ಲೆಯ ಮುಖಂಡರಾದ ಸಾ.ರಾ.ಮಹೇಶ್‌, ಎಚ್‌.ವಿಶ್ವನಾಥ್‌ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

‘ಒಳ್ಳೆಯ ದಿನ ನೋಡಿ ಪ್ರಚಾರ ನಡೆಸುವಂತೆ ಕುಮಾರಣ್ಣ ಹೇಳಿದ್ದಾರೆ. ಟಿಕೆಟ್‌ ನೀಡುವ ಭರವಸೆಯನ್ನೂ ನೀಡಿದ್ದಾರೆ. ಬೇರೆಯವರ ವಿಚಾರ ನನಗೆ ಗೊತ್ತಿಲ್ಲ. ಅವರ ಪ್ರಯತ್ನ ಅವರು ನಡೆಸಲಿ’ ಎಂದು ಅನಿಲ್‌ ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದರು.

ಈ ಮಧ್ಯೆ, ಬಿಜೆಪಿ ತೊರೆದಿರುವ ಕ್ಷೇತ್ರದ ಮಾಜಿ ಶಾಸಕ ಚಿಕ್ಕಣ್ಣ ಕೂಡ ಜೆಡಿಎಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವುದು ತುಸು ಗೊಂದಲ ಉಂಟು ಮಾಡಿದೆ. ಅವರು ಕೂಡ ಎಚ್‌.ಡಿ.ಕುಮಾರಸ್ವಾಮಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ, ಅವರ ಸ್ಪರ್ಧೆಗೆ ಪಕ್ಷದ ಜಿಲ್ಲೆಯ ಮುಖಂಡರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

ಬಿಜೆಪಿಗೆ ರಾಜೀನಾಮೆ ನೀಡಿದ ನಂತರ ಚಿಕ್ಕಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪರ್ಕದಲ್ಲಿದ್ದರು. ಆದರೆ, ಟಿಕೆಟ್ ಲಭಿಸುವ ಯಾವುದೇ ಭರವಸೆ ನೀಡಿರಲಿಲ್ಲ. ಸಂಸದರೊಬ್ಬರು ಅದಕ್ಕೆ ಹಸಿರು ನಿಶಾನೆ ನೀಡಲಿಲ್ಲ ಎನ್ನಲಾಗಿದೆ. ಹೀಗಾಗಿ, ಅವರು ಜೆಡಿಎಸ್‌ನತ್ತ ಮುಖ ಮಾಡಿದರು. ಜ. 22ರಂದು ಎಚ್‌.ಡಿ.ಕೋಟೆಯಲ್ಲಿರುವ ಜೆಡಿಎಸ್‌ ಕಚೇರಿಯನ್ನು ಅಧಿಕೃತವಾಗಿ ಪ್ರವೇಶಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ.

ಇತ್ತ ಕಾಂಗ್ರೆಸ್‌ ಪಕ್ಷ ‘ಸಾಧನೆ ಸಂಭ್ರಮ’ ನೆಪದಲ್ಲಿ ಈ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿದೆ. ಯಾರನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿದರೂ ಕಾಂಗ್ರೆಸ್‌ ಬೆಂಬಲಿಸುವಂತೆ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿಯೇ ಮತಯಾಚಿಸಿದ್ದಾರೆ. ಅಷ್ಟೇ ಅಲ್ಲ; ಚಿಕ್ಕಮಾದು ಅವರ ಕಾರ್ಯವೈಖರಿಯನ್ನೂ ಕೊಂಡಾಡಿದ್ದು ಕ್ಷೇತ್ರದ ಜನರ ಮನಸ್ಸಿನಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಸರಗೂರು ತಾಲ್ಲೂಕು ರಚನೆ ಹಾಗೂ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಅವರು ಸಮಾವೇಶದ ವೇಳೆ ಪದೇ ಪದೇ ಪ್ರಸ್ತಾಪಿಸಿದರು.

ಮೂಲಗಳ ಪ್ರಕಾರ ಅನಿಲ್‌ ಅವರನ್ನು ಸೆಳೆದು ಟಿಕೆಟ್‌ ನೀಡುವ ಪ್ರಯತ್ನ ಕಾಂಗ್ರೆಸ್‌ನಿಂದ ನಡೆದಿದೆ. ಈ ಸಂಬಂಧ ಚಾಮರಾಜನಗರ ಸಂಸದ ಆರ್‌.ಧ್ರುವನಾರಾಯಣ ಕೂಡ ಪ್ರಯತ್ನ ನಡೆಸಿದ್ದಾರೆ. ಅದು ಸಾಧ್ಯವಾಗದಿದ್ದರೆ ತಮ್ಮ ಬೆಂಬಲಿಗ ರಾಮಚಂದ್ರ ಅವರಿಗೆ ಟಿಕೆಟ್‌ ನೀಡಲು ಒಲವು ಹೊಂದಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳ ವೇಳೆ ಇವರಿಬ್ಬರು ಕ್ಷೇತ್ರದಲ್ಲಿ ಓಡಾಡುತ್ತಿರುವುದು ಅದಕ್ಕೆ ಇಂಬು ನೀಡಿದೆ. ಕೃಷ್ಣ ನಾಯಕ ಕೂಡ ಪ್ರಯತ್ನ ಮುಂದುವರಿಸಿದ್ದಾರೆ.

ಈಚೆಗೆ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಮತ್ತೊಂದು ಹೆಸರು ವಿ.ಎಸ್‌.ಉಗ್ರಪ್ಪ. ಸರಗೂರಿನಲ್ಲಿ ನಡೆದ ‘ಸಾಧನೆ ಸಂಭ್ರಮ’ದಲ್ಲಿ ಅವರು ಭಾಗಿಯಾಗಿದ್ದರು. ಅವರ ಹೆಸರನ್ನು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಶ್ಲಾಘನೆ ವ್ಯಕ್ತಪಡಿಸಿರುವುದು ಕೆಲ ಸುಳಿವುಗಳನ್ನು ನೀಡಿದೆ. ಅಲ್ಲದೆ, ಉಗ್ರಪ್ಪ ಅವರು ಪದೇ ಪದೇ ಕ್ಷೇತ್ರಕ್ಕೆ ಭೇಟಿ ನೀಡಿರುವುದು ಅದಕ್ಕೆ ಪುಷ್ಟಿ ನೀಡಿದೆ.

ಚಿಕ್ಕಣ್ಣ ಪಕ್ಷ ತೊರೆದಿರುವುದು ಬಿಜೆಪಿಗೆ ಆರಂಭದಲ್ಲೇ ದೊಡ್ಡ ಪೆಟ್ಟು ನೀಡಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಸಿದ್ದರಾಜು ಹಾಗೂ ಕೃಷ್ಣಸ್ವಾಮಿ ನಡುವೆ ಪೈಪೋಟಿ ಏರ್ಪಟ್ಟಿದೆ. ಸಿದ್ದರಾಜು ಅವರಿಗೆ ‘ಬಿ’ ಫಾರಂ ನೀಡಲು ರಾಜ್ಯಮಟ್ಟದ ಮುಖಂಡರೊಬ್ಬರು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಕೃಷ್ಣಸ್ವಾಮಿ ಅವರು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತದಾರರನ್ನು ಸೆಳೆಯಲು ಪ್ರುಯತ್ನಿಸುತ್ತಿದ್ದಾರೆ. ಯುವ ಮುಖಂಡ ಸಿದ್ದನಾಯಕ ಕೂಡ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆಯೊಡ್ಡಿದ್ದಾರೆ.
**
ಕಾಂಗ್ರೆಸ್‌ ಪಕ್ಷದವರು ನನ್ನನ್ನು ಸಂಪರ್ಕಿಸಿ ಆಹ್ವಾನ ನೀಡಿದ್ದು ನಿಜ. ಆದರೆ, ಜೆಡಿಎಸ್‌ ಪಕ್ಷಕ್ಕಾಗಿ ತಂದೆ ದುಡಿದಿದ್ದಾರೆ. ನಾನು ಕೂಡ ಇಲ್ಲೇ ಇದ್ದು ದುಡಿಯುತ್ತೇನೆ.
ಅನಿಲ್‌, ಚಿಕ್ಕಮಾದು ಪುತ್ರ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.