ADVERTISEMENT

ಅಂಬಾದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಡಿ.ಎಚ್.ಕಂಬಳಿ
Published 27 ಡಿಸೆಂಬರ್ 2017, 5:52 IST
Last Updated 27 ಡಿಸೆಂಬರ್ 2017, 5:52 IST
ಸಿಂಧನೂರು ತಾಲ್ಲೂಕಿನ ಸೋಮಲಾಪುರ ಸಿದ್ಧಪರ್ವತ ಅಂಬಾದೇವಿ ದೇವಸ್ಥಾನದ ಹೊರನೋಟ
ಸಿಂಧನೂರು ತಾಲ್ಲೂಕಿನ ಸೋಮಲಾಪುರ ಸಿದ್ಧಪರ್ವತ ಅಂಬಾದೇವಿ ದೇವಸ್ಥಾನದ ಹೊರನೋಟ   

ಸಿಂಧನೂರು: ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ಸೋಮಲಾಪುರ ಸಿದ್ಧಪರ್ವತ ಅಂಬಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವು ಜನವರಿ 2ರಿಂದ ಆರಂಭವಾಗಲಿದೆ. ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ತಹಶೀಲ್ದಾರ್ ವೆಂಕನಗೌಡ ಆರ್. ಪಾಟೀಲ ನೇತೃತ್ವದಲ್ಲಿ ಸಿದ್ಧತೆ ಭರದಿಂದ ನಡೆದಿವೆ.

ಎರಡು–ಮೂರು ದಿನಗಳಿಂದ ದೇವಸ್ಥಾನ, ಗೋಪುರ, ರಥೋತ್ಸವಕ್ಕೆ ಬಣ್ಣ ಹಚ್ಚುವ ಕಾರ್ಯ ಭರದಿಂದ ನಡೆದಿದೆ. ಸಿಹಿ ತಿನಿಸು, ಹೋಟೆಲ್, ಸ್ಟೇಶನರಿ, ವಿವಿಧ ಆಟದ ಸಾಮಗ್ರಿ ಮತ್ತು ಇತರ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಜೋಕಾಲಿ, ಸರ್ಕಸ್ ಅಂತಹ ಮನೋರಂಜನಾ ಚಟುವಟಿಕೆಗಳ ಸಿದ್ಧತಾ ಕಾರ್ಯಗಳೂ ನಡೆದಿವೆ. ಎರಡು ನಾಟಕ ಕಂಪನಿಗಳು ಸಹ ಬಂದಿವೆ.

‘ಜ.2ರಂದು ರಥೋತ್ಸವ ಮತ್ತು ಜ.5ರಂದು ಕುಂಭೋತ್ಸವ ಜರುಗಲಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ, ಬೆಳಗಾವಿ, ತುಮಕೂರ, ಕಲಬುರ್ಗಿ ಸೇರಿದಂತೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುವರು. ಎರಡೂ ಕಾರ್ಯಕ್ರಮಗಳು ದೇವಿಯ ವಾರವಾದ ಮಂಗಳವಾರ ಮತ್ತು ಶುಕ್ರವಾರ ಬಂದಿರುವುದು ಅಪರೂಪ’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಗೊಬ್ಬರಕಲ್ ಮತ್ತು ನಿರ್ದೇಶಕ ಬಾಳಪ್ಪ ಚಿತ್ರಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜ.1ರಿಂದ ಆರಂಭವಾಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜ.5ರಂದು ನಡೆಯುವ ಕಳಸ ವಿಸರ್ಜನೆಯವರೆಗೆ ನಡೆಯಲಿವೆ. ಒಂದು ತಿಂಗಳ ಕಾಲ ಜಾತ್ರೆ ನಡೆಯಲಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಳ್ಳಾರಿ, ರಾಯಚೂರು, ಕೊಪ್ಪಳ, ಗಂಗಾವತಿ ತಾಲ್ಲೂಕುಗಳಿಂದ ವಿಶೇಷ ಬಸ್ ಸೌಕರ್ಯ ಇರುತ್ತದೆ. ಶುದ್ಧ ಕುಡಿಯುವ ನೀರು, ತಾತ್ಕಾಲಿಕ ಸುಲಭ ಶೌಚಾಲಯ, ಸ್ನಾನಗೃಹ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ಭಕ್ತರಿಗೆ ಕೂರಲು ಬಿದಿರು ಚಪ್ಪರ ಮತ್ತು ದೇವಿಯ ದರ್ಶನಕ್ಕೆ ಸರದಿಯಲ್ಲಿ ತೆರಳಲು ಸ್ಟೀಲ್ ಸರಳು ಹಾಕಲಾಗಿದೆ. ಮರಂ ಹಾಕಿ ಜಾತ್ರಾ ಪ್ರದೇಶವನ್ನು ಸಮತಟ್ಟು ಮಾಡುವ ಕಾರ್ಯ ನಡೆದಿದೆ. ಸುಮಾರು 50 ಎಕರೆ ಜಮೀನಿನಲ್ಲಿ ವಾಹನ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯಕೀಯ ಸೇವೆಗಾಗಿ ಔಷಧಿ ಖರೀದಿಸಲಾಗಿದೆ. ಜಾತ್ರೆ ವೇಳೆ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಈರಪ್ಪ, ಆದೋನಿ ಈರಣ್ಣ ಸೇರಿದಂತೆ ಇತರ ದಾನಿಗಳು ಸಾರ್ವಜನಿಕರಿಗೆ ಉಚಿತ ಪ್ರಸಾದ ನೀಡುವರು.

‘ಗೋವಧೆ, ಪಶುವಧೆ, ಮದ್ಯ, ಮಾಂಸ ಮಾರಾಟ ಮಾಡದಂತೆ ಪ್ರಕಟಣೆ ಹೊರಡಿಸಲಾಗಿದೆ. ಮನರಂಜನೆ ನೆಪದಲ್ಲಿ ಯಾವುದೇ ತರಹದ ಅಶ್ಲೀಲತೆ ಪ್ರದರ್ಶಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಹಶೀಲ್ದಾರ್ ವೆಂಕನಗೌಡ ಆರ್.ಪಾಟೀಲ ತಿಳಿಸಿದರು.

‘ಜಾತ್ರೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಯಾಗದಂತೆ ನಿಯಂತ್ರಿಸಲು 2 ಪೊಲೀಸ್ ಉಪವಿಭಾಗಾಧಿಕಾರಿಗಳು, 5 ಸರ್ಕಲ್ ಇನ್ಸ್‌ಪೆಕ್ಟರ್, 15 ಸಬ್ಇನ್ಸ್‌ಪೆಕ್ಟರ್, 200 ಕಾನ್‌ಸ್ಟೆಬಲ್, 150 ಗೃಹರಕ್ಷಕ ಸಿಬ್ಬಂದಿ ಕಾರ್ಯನಿರ್ವಹಿಸುವರು’ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ ಕಮ್ಮಾರ ಮಾಹಿತಿ ನೀಡಿದರು.

* * 

ಪ್ರತಿ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ವಾಹನಗಳ ನಿಲುಗಡೆಗೆಂದೇ 50 ಎಕರೆ ಜಮೀನು ಜಾಗ ಗುರುತಿಸಲಾಗಿದೆ. ಜಾತ್ರೆಯಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ.
ವೆಂಕನಗೌಡ ಆರ್.ಪಾಟೀಲ ತಹಶೀಲ್ದಾರ್, ಸಿಂಧನೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.