ADVERTISEMENT

ಅಕ್ರಮ ಪ್ರಮಾಣಪತ್ರ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:07 IST
Last Updated 22 ಮಾರ್ಚ್ 2017, 9:07 IST

ರಾಯಚೂರು: ಬೀದರ್‌, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಮತ್ತು ರಾಜಗೊಂಡ ಹೆಸರಿನಲ್ಲಿ ಅನರ್ಹರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆದುಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಎಸ್‌.ಟಿ. ಫೋರಂ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯಕ್ಕೆ ವಲಸೆ ಬಂದಿದ್ದ ಗೊಂಡ ಮತ್ತು ರಾಜಗೊಂಡ ಜನಾಂಗದವರು ಈಗಾಗಲೇ ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದಾರೆ. ಆದರೆ, ಕುರುಬ ಜನಾಂಗದವರು ಗೊಂಡ ಮತ್ತು ರಾಜಗೊಂಡ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಕುರುಬ ಜನಾಂಗದವರಿಗೆ ಅಕ್ರಮವಾಗಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಬೇಕು. ಅನರ್ಹರಿಗೆ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಹಾಗೂ ಪೂರಕ ವರದಿ ನೀಡಿದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು.

ಉದ್ಯೋಗ ಹಾಗೂ ಇತರೆ ಸೌಲಭ್ಯ ಪಡೆದಿರುವ ಅನರ್ಹರನ್ನು ನೇಮಕಾತಿ ರದ್ದುಪಡಿಸಬೇಕು. ಅವೈಜ್ಞಾನಿಕವಾಗಿರುವ ಮೀಸಲಾತಿ ಪ್ರಮಾಣವನ್ನು ಶೇ 3ರಿಂದ 7.5ಕ್ಕೆ ಏರಿಸಬೇಕು. ಬಡ್ತಿ ಮೀಸಲಾತಿಯನ್ನು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಗುರುಸ್ವಾಮಿ ಗಾಣಧಾಳ, ಪ್ರಧಾನ ಕಾರ್ಯದರ್ಶಿ ಗೋವಿಂದನಾಯಕ ಉಡುಮಗಲ್‌ ಖಾನಾಪುರ, ರವೀಂದ್ರ ನಾಯಕ ಗುಂಜಳ್ಳಿ, ರಾಮಪ್ಪ ನಾಯಕ ಮಲಿಯಾಬಾದ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.