ADVERTISEMENT

ಅಕ್ರಮ ಮದ್ಯ ಸಾಗಣೆ: ಗಡಿಯಲ್ಲಿ ನಿಗಾ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 10:31 IST
Last Updated 17 ಏಪ್ರಿಲ್ 2018, 10:31 IST

ಶಕ್ತಿನಗರ: ಅಂತರರಾಜ್ಯಗಳು ಗಡಿ ಭಾಗದಲ್ಲಿನ ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯ ಮಾಡಿಕೊಂಡರೆ ಕಾನೂನು ಸುವ್ಯವಸ್ಥೆ ಪಾಲನೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ಹೇಳಿದರು.

ಶಕ್ತಿನಗರದಲ್ಲಿ ಸೋಮವಾರ ನಡೆದ ಅಂತರರಾಜ್ಯ ಗಡಿ ಪೊಲೀಸ್ ಅಧಿಕಾರಿಗಳ ಅಪರಾಧ ವಿಮರ್ಶಾ ಮತ್ತು ಮಾಹಿತಿ ವಿನಿಮಯ ಸಭೆಯಲ್ಲಿ ಮಾತನಾಡಿದ ಅವರು, ‘ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಸುರಕ್ಷತೆ ಕಾಪಾಡಿಕೊಳ್ಳಿ. ವಾಹನಗಳ ತಡೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು’ ಎಂದರು.

‘ಏ.17ರಂದು ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಲಿದೆ. ಅಪರಾಧ ಪ್ರಕರಣವನ್ನು ತಡೆಗಟ್ಟು ವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಗುರಿಯಾಗಿದೆ. ಮೂರು ರಾಜ್ಯಗಳು ಪಡೆಯುವ ಗುಪ್ತ ಮಾಹಿತಿ ಮತ್ತು ಅಪರಾಧ ಹಿನ್ನೆಲೆಯುಳ್ಳವರ ಮಾಹಿತಿಗಳನ್ನು ಹಂಚಿಕೊಂಡರೆ ಅಪರಾಧಿಗಳನ್ನು ಮತ್ತು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬಹುದು’ ಎಂದು ಅವರು ಹೇಳಿದರು.

ADVERTISEMENT

’ಅಕ್ರಮಗಳಿಗೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಜಿಲ್ಲೆಯ 30 ಕಡೆ ಹಾಗೂ ಗಡಿಭಾಗದಲ್ಲಿ 7 ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಬೀಡುಬಿಟ್ಟಿರುವ ಪೊಲೀಸರು ಜಿಲ್ಲೆ ಪ್ರವೇಶಿಸುವ ಹಾಗೂ ಹೊರಹೋಗುವ ವಾಹನಗಳ ಮೇಲೆ ತೀವ್ರ ನಿಗಾ ಇಡಬೇಕು’ ಎಂದರು.

’ಗದ್ವಾಲ್‌, ಮೆಹಬೂಬ್‌ ನಗರಗಳಿಂದ ಜಿಲ್ಲೆಯ ಗ್ರಾಮೀಣ ಮತ್ತು ನಗರಪ್ರದೇಶಗಳಲ್ಲಿ ಅಕ್ರಮವಾಗಿ ಸೇಂದಿ, ಸಿ.ಎಚ್‌.ಫೌಡರ್‌, ಮದ್ಯ ದಾಸ್ತಾನು ಮಾಡಿದ್ದಲ್ಲಿ ದಾಳಿ ನಡೆಸಿ ವಶಕ್ಕೆ ತೆಗೆದುಕೊಳ್ಳಬೇಕು. ಮದ್ಯ ಮಾರಾಟಗಾರರು ಎತ್ತುವಳಿ ಮಾಡುವ ಮದ್ಯ ಮತ್ತು ಮಾರಾಟಗಾರ ಮೇಲೆ ನಿಗಾ ವಹಿಸಬೇಕು’ ಎಂದುದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಕುಮಾರ, ಎನ್.ರಮೇಶ ಸೇರಿ ಲಿಂಗಸೂಗೂರು, ಸಿಂಧನೂರು, ಮಸ್ಕಿ, ಸಿರಗುಪ್ಪ, ಸೈದಾಪುರ, ಮಾನ್ವಿ, ದೇವದುರ್ಗ, ಯಾದಗಿರಿ, ಕೊಪ್ಪಳ, ಮುದ್ದೇಬಿಹಾಳ, ಕರ್ನೂಲ್, ಮಾದವರಂ, ಮಖ್ತಲ್, ತೆಲಂಗಾಣ, ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.