ADVERTISEMENT

ಏಮ್ಸ್ ಸ್ಥಾಪನೆಗೆ ಕೇಂದ್ರಕ್ಕೆ ಒತ್ತಡ: ಸಚಿವ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 8:13 IST
Last Updated 18 ಸೆಪ್ಟೆಂಬರ್ 2017, 8:13 IST

ರಾಯಚೂರು: ಜಿಲ್ಲೆಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪಿಸುವ ದಿಸೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವೊಂದನ್ನು ಕೊಂಡೊಯ್ದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಟ್‌ ಹೇಳಿದರು.

ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಭಾನುವಾರ ನಡೆದ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಲಬುರ್ಗಿ ಜಿಲ್ಲಿಯಲ್ಲಿ ಏಮ್ಸ್ ಸ್ಥಾಪನೆಗಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಪ್ರಸ್ತಾವನೆ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಆದರೆ, ಈ ಜಿಲ್ಲೆಗೆ ಉಸ್ತುವಾರಿಯಾಗಿದ್ದ ವೇಳೆ ರಾಯಚೂರಿಗೆ ಏಮ್ಸ್ ನೀಡುವ ಭರವಸೆ ನೀಡಿದ್ದರ ಬಗ್ಗೆ ಪರಿಶೀಲಿಸಲಾಗುವುದು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಹೇಳಿದರು.

ADVERTISEMENT

ಐಐಟಿಯಂತಹ ಸಂಸ್ಥೆ ಸೇರಿದಂತೆ ಜಿಲ್ಲೆಗೆ ಸಾಕಷ್ಟು ವಿಚಾರಗಳಲ್ಲಿ ಅನ್ಯಾಯವಾಗಿದೆ. ಇದಕ್ಕೆ ಬಿಜೆಪಿ ಸರ್ಕಾರದ ಧೋರಣೆ ಕಾರಣ. ಏಮ್ಸ್ ವಿಚಾರವಾಗಿ ವೈದ್ಯಕೀಯ ಸಚಿವರೊಂದಿಗೂ ಸಮಾಲೋಚಿಸುತ್ತೇನೆ. ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾದರೂ ರಾಯಚೂರನ್ನೆ ಪರಿಗಣಿಸುವಂತೆ ಮನವಿ ಮಾಡಲಾಗುವುದು ಎಂದರು. ಪ್ರತಿ ಜಿಲ್ಲೆಗೂ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.