ADVERTISEMENT

‘ಕಾನೂನು ಸುವ್ಯವಸ್ಥೆ: ರಾಜ್ಯ ಸರ್ಕಾರ ವಿಫಲ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 9:47 IST
Last Updated 10 ಜುಲೈ 2017, 9:47 IST

ಲಿಂಗಸುಗೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ, ಕೊಲೆ, ಅತ್ಯಾಚಾರದಂತ ಹಲವು ಪ್ರಕರಣಗಳು ನಡೆಯುತ್ತಿದ್ದ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಸಂಸದ ಶ್ರೀರಾಮುಲು ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದ ಕೆಲವೆಡೆ ಬಿಜೆಪಿ, ಆರ್‌ಎಸ್‌ಎಸ್‌, ಹಿಂದೂ ಸಂಘಟನೆಗಳ ಮುಖಂಡರ ಕೊಲೆಗಳು ನಡೆಯುತ್ತಿವೆ. ಐಎಎಸ್‌ ಅಧಿಕಾರಿಗಳ ಸರಣಿ ಆತ್ಮಹತ್ಯೆ, ಪೊಲೀಸ್‌ ಅಧಿಕಾರಿಗಳ ಶೂಟೌಟ್‌ ಪ್ರಕರಣಗಳು ರಾಜ್ಯ ಸರ್ಕಾರದ ವೈಫಲ್ಯವನ್ನು ಸಾಕ್ಷಿಕರಿಸುತ್ತದೆ’ ಎಂದರು.

‘ಕರಾವಳಿ ಪ್ರದೇಶದಲ್ಲಿ ಕೋಮು ಸೌಹಾರ್ದತೆ ಕದಡಿದ್ದು, ಗೃಹ ಸಚಿವ ಜಿ. ಪರಮೇಶ್ವರ, ಸಚಿವರಾದ ಯು.ಟಿ. ಖಾದರ್‌, ರಮಾನಾಥ ರೈ ಅವರು ಕೂಡಲೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬೆಳೆನಷ್ಟ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ನಡೆಸಿದೆ. ಫಸಲ್‌ ಬಿಮಾ ಯೋಜನೆ ರೈತರಿಗೆ ಸಮರ್ಪಕವಾಗಿ ತಲುಪಿಸಬೇಕು. ರಾಜ್ಯ ಸರ್ಕಾರ ಮೀನಮೇಷ ನಡೆಸುತ್ತಿದೆ’ ಎಂದರು.

‘ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬಹುದಾಗಿತ್ತು. ಆದರೆ, ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ’ ಎಂದು ದೂರಿದರು. ರೈತರ ಸಲ ಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

ಬಿಜೆಪಿ ಮುಖಂಡರಾದ ಶಂಕರಗೌಡ ಅಮರಾವತಿ, ಸಿದ್ದು ವೈ ಬಂಡಿ, ಶ್ವೇತಾ ಮೇಟಿ, ವೆಂಕಟರಾವ್‌ ಜಹಗೀರದಾರ, ಸಿದ್ದಯ್ಯ ಮೇಗಳಪೇಟೆ, ಸಿದ್ದು ಬಡಿಗೇರ, ವಿಶ್ವನಾಥ ಆನ್ವರಿ, ನಾಗಭೂಷಣ ಹಿರೇಮಠ, ವೀರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.