ADVERTISEMENT

ಕೃಷಿ ಕ್ಷೇತ್ರದಿಂದಲೇ ಪೌಷ್ಟಿಕ ಆಹಾರಕ್ರಾಂತಿ ಆಗಲಿ

ರಾಯಚೂರು ಕೃಷಿ ವಿವಿ 5ನೇ ಘಟಿಕೋತ್ಸವದಲ್ಲಿ ಡಾ. ಆರ್‌.ಎಸ್‌. ಪರೋಡಾ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 6:18 IST
Last Updated 5 ಮಾರ್ಚ್ 2015, 6:18 IST

ರಾಯಚೂರು: ದೇಶದಲ್ಲಿನ ಹಸಿವು ಮತ್ತು ಅಪೌಷ್ಟಿಕತೆ ನಿವಾರಣೆಗೆ ಕೃಷಿ ಕ್ಷೇತ್ರದಿಂದಲೇ ‘ಪೌಷ್ಟಿಕ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಕ್ರಾಂತಿ’ ಆಗಬೇಕು ಎಂದು ದೆಹಲಿಯ ಮುಂದು­ವರಿದ ಕೃಷಿ ವಿಜ್ಞಾನ ಟ್ರಸ್ಟ್ ಅಧ್ಯಕ್ಷ   ಡಾ.ಆರ್.ಎಸ್.ಪರೋಡಾ ಹೇಳಿದರು.

ಬುಧವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ 5ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದರು.

ದೇಶದಲ್ಲಿ 264.7 ಮೆಟ್ರಿಕ್ ಟನ್‌ ನಷ್ಟು ಆಹಾರ ಉತ್ಪಾದನೆ ಆಗಿದೆ. 50 ಮೆಟ್ರಿಕ್ ಟನ್‌ಗಳಷ್ಟು ಹೆಚ್ಚುವರಿ ಆಹಾರ ಉತ್ಪಾದನೆ ಸಂಗ್ರಹಾಗಾರಗಳಲ್ಲಿದೆ. ಎಷ್ಟೋ ಕಡುಬಡ ಕುಟುಂಬಗಳಿಗೆ ಆಹಾರ ಖರೀದಿ ಶಕ್ತಿ ಇಲ್ಲ. ಬೇಕು ಮತ್ತು ಬೇಡಗಳ ನಡುವೆ ಸೇತುವೆ ನಿರ್ಮಿಸುವುದೇ ದೊಡ್ಡ ಸವಾಲಾಗಿದೆ.  ಆಹಾರ ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ ಅಪೌಷ್ಟಿಕತೆ ಸಮಸ್ಯೆ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದರು.

ಹವಾಮಾನ ವೈಪರೀತ್ಯ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಕೃಷಿ ಖರ್ಚು, ಮಾರುಕಟ್ಟೆಯಲ್ಲಿ ಬೆಳೆಗೆ ತಕ್ಕಂತೆ ಬೆಲೆ ದೊರಕದೇ ಇರುವುದು, ಉತ್ತಮ ಬೀಜಗಳ ಕೊರತೆ ಮುಂತಾದ ಸಮಸ್ಯೆಗಳ ನಡುವೆಯೂ ರೈತ ದೈನಂದಿನ ಬದುಕಿಗಾಗಿ ಕೃಷಿಯಲ್ಲಿ ಹೋರಾಟ ನಡೆಸುತ್ತಿದ್ದಾನೆ.

ಜಾಗತೀಕರಣ ನಮ್ಮ ರೈತರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ. ಜಾಗತಿಕ ಮಟ್ಟದ ಮಾನದಂಡಕ್ಕೆ ತಕ್ಕಂತೆ ಗುಣಮಟ್ಟದ ಕೃಷಿ ಉತ್ಪನ್ನ ಉತ್ಪಾದನೆ ಮಾಡಬೇಕು. ಮಾರುಕಟ್ಟೆ ಜ್ಞಾನ, ವ್ಯವಹಾರ ಜ್ಞಾನ, ಆಹಾರ ಸಂಸ್ಕರಣೆ, ಆಹಾರ ಭದ್ರತೆ ಮುಂತಾದ ವಿಷಯಗಳ ಬಗ್ಗೆ ಕೃಷಿ ವಿವಿಗಳು ಜ್ಞಾನ ಕಲ್ಪಿಸಬೇಕು ಎಂದು ತಿಳಿಸಿದರು.

ಜೈವಿಕ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಕೊಯ್ಲೋತ್ತರ ತಂತ್ರಜ್ಞಾನ, ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಮಾರುಕಟ್ಟೆ ಅರ್ಥವ್ಯವಸ್ಥೆ ಸೇರಿದಂತೆ ಅನೇಕ ಅಂಶಗಳು ಕೃಷಿ ಕ್ಷೇತ್ರದ ಉನ್ನತಿಗೆ ಬಹುಮಟ್ಟಿಗೆ ಸಹಕಾರಿ­ಯಾಗಿವೆ ಎಂದು ಹೇಳಿದರು.

ಸಮಗ್ರ ಕೃಷಿ ಪದ್ಧತಿ, ಪೋಷಕಾಂಶಯುಕ್ತ ಕೃಷಿ ಉತ್ಪನ್ನಗಳನ್ನು ಹೆಚ್ಚು ಬೆಳೆಯುವುದು, ಸಣ್ಣ ರೈತರಿಗೆ ಯಾಂತ್ರೀಕೃತ ಕೃಷಿ ಅಳವಡಿಕೆ, ನೀರು ನಿರ್ವಹಣೆ, ಸುಧಾರಿತ ಬೀಜೋತ್ಪಾದನೆ, ಮಣ್ಣಿನ ಫಲವತ್ತತೆ ಸಂರಕ್ಷಣೆಯಂಥ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನುಡಿದರು.

ಜಗತ್ತು ಶರವೇಗದಲ್ಲಿ ಬದಲಾ­ಗುತ್ತಿದೆ. ಆ ಬದಲಾವಣೆ ಜೊತೆಗೆ ನಾವು ವಿಭಿನ್ನರಾಗಿ ಹೊರಹೊಮ್ಮ­ಬೇಕು ಎಂದು ಕೃಷಿ ಪದವೀಧರರಿಗೆ, ಕೃಷಿ ತಜ್ಞರಿಗೆ ಕಿವಿಮಾತು ಹೇಳಿದರು. 5ನೇ ಘಟಿಕೋತ್ಸವದಲ್ಲಿ 171 ಸ್ನಾತಕ, 10 ಡಾಕ್ಟರೇಟ್, ಪದವಿ ಸೇರಿದಂತೆ 106 ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.

ರಾಜ್ಯಪಾಲರಾದ ವಜುಭಾಯಿ ವಾಲಾ ಘಟಿಕೋತ್ಸವ ನಡೆಸಿಕೊಟ್ಟರು. ಕೃಷಿ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆವಹಿಸಿದ್ದರು. ಕೃಷಿ ವಿವಿ ಕುಲಪತಿ ಡಾ.ಪಿ.ಎಂ.ಸಾಲಿಮಠ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.