ADVERTISEMENT

ಕೆರೆಗಳಿಗೆ ನೀರು ತುಂಬಿಸಲು ಬಿಜೆಪಿ ಮನವಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:26 IST
Last Updated 19 ಜನವರಿ 2017, 5:26 IST

ರಾಯಚೂರು: ಸಿಂಧನೂರು ತಾಲ್ಲೂಕಿನಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಿರುವ ಕಾರಣ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಮತ್ತು ಹಳ್ಳಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದಿಂದ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್‌. ಶಂಕ್ರಪ್ಪ  ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಟ್ಟಿರುವ ಕಾರಣ ತಾಲ್ಲೂಕಿನ ಕೆರೆಗಳನ್ನು ಭರ್ತಿ ಮಾಡಬೇಕು ಮತ್ತು ವಿಶೇಷವಾಗಿ ಪೋತ್ನಾಳ ಹಳ್ಳ ಮತ್ತು ಹಿರೇಹಳ್ಳಗಳಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದರು.

ಪೋತ್ನಾಳ ಹಳ್ಳದಲ್ಲಿ ನೀರು ಹರಿಸಿದರೆ ಸಿಂಧನೂರು ತಾಲ್ಲೂಕಿನ ಬುದ್ದಿನ್ನಿ, ಜಾಲವಾಡಗಿ, ರಾಮಾತ್ನಾಳ, ರಾಗಲಪರ್ವಿ, ಯಾಪಲಪರ್ವಿ, ಪುಲದಿನ್ನಿ, ಗೋನ್ವಾರ, ಚಿಂತಮಾನದೊಡ್ಡಿ, ಆಯನೂರು ಹಳ್ಳಿಗಳು ಎದುರಿಸುತ್ತಿರುವ ನೀರಿನ ಸಮಸ್ಯೆ ತಗ್ಗುತ್ತದೆ. ಜೊತೆಗೆ ಮಾನ್ವಿ ತಾಲ್ಲೂಕಿನ ಅನೇಕ ಹಳ್ಳಿಗಳಿಗೂ ಅನುಕೂಲವಾಗುತ್ತದೆ ಎಂದರು.

ಹಿರೇಹಳ್ಳಕ್ಕೆ ನೀರು ಹರಿಸುವುದರಿಂದ ಉದ್ಬಾಳ, ಗೋಮರ್ಸಿ, ಮಾಡಶಿರವಾರ, ಬೂದಿವಾಳ, ಕನ್ನಾರಿ, ಹರೇಟನೂರು ಗ್ರಾಮಗಳಿಗೆ ನೀರು ದೊರೆಯುತ್ತದೆ. ತಾಲ್ಲೂಕಿನಲ್ಲಿರುವ ಖಾಸಗಿ ಕೆರೆಗಳಿಗೂ ನೀರು ತುಂಬಿಸಿ ಅವುಗಳಿಂದ ಸಾರ್ವಜನಿಕರಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ  ಬಿಜೆಪಿ ಗ್ರಾಮೀಣ ವಿಭಾಗದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಕೆ.ಶೇಷಗಿರಿರಾವ್‌, ರಾಜಶೇಖರ ಪಾಟೀಲ್‌ ಪರಮೇಶ್ವರಪ್ಪ ಆದಿಮನಿ, ಟಿ.ಹನುಮೇಶ, ದೇವೇಂದ್ರಪ್ಪ ನಾಯಕ, ಜಡಿಯಪ್ಪ ಹೂಗಾರ, ದೊರೆಬಾಬು, ಮಹಬೂಬ್‌ಸಾಬ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.