ADVERTISEMENT

ಗುಳೆ ತಡೆಗೆ ಉದ್ಯೋಗ ನೀಡಿ: ಸಂಸದ ಸಂಗಣ್ಣ

ಕೊಪ್ಪಳ; ದಿಶಾ ತ್ರೈಮಾಸಿಕ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:42 IST
Last Updated 16 ಫೆಬ್ರುವರಿ 2017, 6:42 IST
ಕೊಪ್ಪಳ: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನ ಗುಳೇ ಹೋಗುವುದನ್ನು ತಡೆಗಟ್ಟಲು ಉದ್ಯೋಗ ಖಾತ್ರಿ ಅಡಿ ಅಗತ್ಯ ಪ್ರಮಾಣದ ಕೆಲಸ ಕೊಡಬೇಕು ಎಂದು ಸಂಸದ ಕರಡಿ ಸಂಗಣ್ಣ ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
 ಉದ್ಯೋಗಕ್ಕಾಗಿ ಫಾರಂ 6ನ್ನು ಭರ್ತಿ ಮಾಡಿಕೊಡುವ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗಖಾತ್ರಿ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದರು.
 
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ಕೆ.ತೊರವಿ, ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಪಂಚಾಯಿತಿ ಈಗಾಗಲೇ ಸಿದ್ಧತೆ ಕೈಗೊಂಡಿದೆ. ಉದ್ಯೋಗಖಾತ್ರಿ ಯೋಜನೆ ಅಡಿ ಪ್ರಸಕ್ತ ವರ್ಷ ₹ 97.82 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು.
 
ಆದರೆ ₹ 32.90 ಕೋಟಿ ಹೆಚ್ಚುವರಿ ಅನುದಾನ ಸೇರಿದಂತೆ ಒಟ್ಟು ₹ 130.40 ಕೋಟಿ ಅನುದಾನ ನಿಗದಿಪಡಿಸಲಾಗಿದೆ. 24. 68 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯನ್ನು ಪರಿಷ್ಕರಿಸಿ, ಹೆಚ್ಚುವರಿಯಾಗಿ 8.23 ಲಕ್ಷ ಮಾನವ ದಿನಗಳು ಸೇರಿದಂತೆ ಒಟ್ಟು 32.90 ಲಕ್ಷ ಮಾನವದಿನಗಳನ್ನು ಸೃಜಿಸುವ ಗುರಿ ಹಾಕಿಕೊಳ್ಳಲಾಗಿದೆ. ಈವರೆಗೆ 19,11,235 ಮಾನವದಿನಗಳನ್ನು ಸೃಜಿಸಲಾಗಿದ್ದು, ₹ 71.71 ಕೋಟಿ ವೆಚ್ಚ ಮಾಡಲಾಗಿದೆ. ಉದ್ಯೋಗ ಸೃಜನೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದರು.
 
ಗೋಶಾಲೆ ಸಂಬಂಧಿಸಿ ಮಾತನಾಡಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಣ್ಣ ಅವರು, ಜಿಲ್ಲೆಯಲ್ಲಿ ಸದ್ಯ ತೆರೆಯಲಾಗಿರುವ 5 ಗೋಶಾಲೆಗಳಲ್ಲಿ ಸುಮಾರು 1,300 ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ.  ನೀರಾವರಿ ಭೂಮಿ ಹೊಂದಿರುವ ರೈತರಿಗೆ ಮೇವು ಬೆಳೆಯಲು ಇಲಾಖೆಯಿಂದ ಮೇವು ಬೀಜದ ಕಿಟ್ ನೀಡಲಾಗಿದೆ. ಜಾನುವಾರುಗಳಿಗೆ ಮೇವು ಪೂರೈಸಲು 8 ಏಜೆನ್ಸಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಯಾವುದೇ ಮೇವಿನ ಕೊರತೆ ಇಲ್ಲ.  ಸದ್ಯ 9 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಮುಂದೆ ಅಗತ್ಯಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಿನ ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
 
ರಸ್ತೆ ಬದಿ ಗಿಡಗಳಿಗೆ ನೀರುಣಿಸಿ: ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿಗಳಲ್ಲಿ ನೆಡಲಾಗಿರುವ ಗಿಡಗಳಿಗೆ ಬೇಸಿಗೆ ಮುಗಿಯುವವರೆಗೂ ನಿಯಮಿತವಾಗಿ ನೀರುಣಿಸಿ ಸಂರಕ್ಷಿಸಬೇಕು. ಮುಂದಿನ ಆರ್ಥಿಕ ವರ್ಷಕ್ಕೆ ಅಗತ್ಯವಿರುವ ಸಸಿಗಳನ್ನು ಬೆಳೆಸುವ ಕಾರ್ಯವನ್ನು ಸಹ ಸಮರ್ಪಕವಾಗಿ ಅರಣ್ಯ ಇಲಾಖೆ ಕೈಗೊಳ್ಳುವಂತೆ ಸಂಸದರು ಸೂಚನೆ ನೀಡಿದರು.
 
 ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ದಿಶಾ ಸಮಿತಿಯ ಸದಸ್ಯರಾದ ಶೋಭಾ ನಗರಿ, ಶಿವನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.