ADVERTISEMENT

ಜಾತಿ, ಹಣದ ಆಮಿಷ ವಿರುದ್ಧ ಹೋರಾಟ

ಜನಾಂದೋಲನಗಳ ಮಹಾಮೈತ್ರಿ ಜಿಲ್ಲಾ ಮಟ್ಟದ ಸಂಘಟನಾ ಸಮಾವೇಶದಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 10:36 IST
Last Updated 4 ಮಾರ್ಚ್ 2017, 10:36 IST
ರಾಯಚೂರಿನಲ್ಲಿ ಶುಕ್ರವಾರ ನಡೆದ ಜನಾಂದೋಲನಗಳ  ಮಹಾಮೈತ್ರಿಯ ಜಿಲ್ಲಾ ಮಟ್ಟದ ಸಂಘಟನಾ ಸಮಾವೇಶದಲ್ಲಿ ಭ್ರಷ್ಟಾಚಾರ ನಿರ್ಮೂಲ ಹೋರಾಟ ಸಮಿತಿ ಮುಖಂಡ ರವಿ ಕೃಷ್ಣಾರೆಡ್ಡಿ ಮಾತನಾಡಿದರು
ರಾಯಚೂರಿನಲ್ಲಿ ಶುಕ್ರವಾರ ನಡೆದ ಜನಾಂದೋಲನಗಳ ಮಹಾಮೈತ್ರಿಯ ಜಿಲ್ಲಾ ಮಟ್ಟದ ಸಂಘಟನಾ ಸಮಾವೇಶದಲ್ಲಿ ಭ್ರಷ್ಟಾಚಾರ ನಿರ್ಮೂಲ ಹೋರಾಟ ಸಮಿತಿ ಮುಖಂಡ ರವಿ ಕೃಷ್ಣಾರೆಡ್ಡಿ ಮಾತನಾಡಿದರು   

ರಾಯಚೂರು: ಮದ್ಯಪಾನ ನಿಷೇಧ ವಿರುದ್ಧದ ಹೋರಾಟದಂತೆಯೇ ಚುನಾವಣಾ ಸಂದರ್ಭದಲ್ಲಿ ಜಾತಿ, ಹಣ ಆಮಿಷಕ್ಕೆ ಬಲಿಯಾಗಬಾರದ ಎಂಬ ಹೋರಾಟವನ್ನು ಮಹಿಳೆಯರು ನಡೆಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ. ಇಲ್ಲದಿದ್ದರೆ ಮದ್ಯಪಾನದ ವಿರುದ್ಧದ ಹೋರಾಟವೂ ವ್ಯರ್ಥವಾಗುತ್ತದೆ ಎಂದು ಭ್ರಷ್ಟಾಚಾರ ನಿರ್ಮೂಲನಾ ಹೋರಾಟ ಸಮಿತಿ ಮುಖಂಡ ರವಿಕೃಷ್ಣಾ ರೆಡ್ಡಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಜನತಂತ್ರಕ್ಕಾಗಿ ಜನಾಂದೋಲನಗಳ ಮಹಾಮೈತ್ರಿಯ ಜಿಲ್ಲಾ ಮಟ್ಟದ ಸಂಘಟನಾ ಸಮಾವೇಶದಲ್ಲಿ ಮಾತನಾಡಿದರು.

ಚುನಾವಣೆಗಳ ಸಂದರ್ಭದಲ್ಲಿ ಒಡ್ಡುವ ಹಣದ ಆಮಿಷಕ್ಕೆ ಬಲಿಯಾಗಿ ಮತ  ಮಾರಿಕೊಳ್ಳಲಾಗುತ್ತಿದೆ ಅಥವಾ ಜಾತಿಯ ಅಭಿಮಾನದಲ್ಲಿ ಅನರ್ಹರಿಗೆ ಮತ ಹಾಕಲಾಗುತ್ತಿದೆ. ಇದು ಜಾಗೃತ ಸಮಾಜಕ್ಕೆ ಮಾರಕ ಬೆಳವಣಿಗೆಯಾಗಿದೆ ಎಂದು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ₹ 50 ಲಕ್ಷದಿಂದ ₹1 ಕೋಟಿ ಅನುದಾನ ದೊರೆಯುತ್ತದೆ. ಆದರೆ, ಗ್ರಾಮಗಳು ಮಾತ್ರ ಅಭಿವೃದ್ಧಿ ಆಗಿಲ್ಲ. ಈ ಹಣ ಭ್ರಷ್ಟರ ಪಾಲಾಗುತ್ತಿದೆ. ಗಾಂಧೀಜಿ ಕಂಡ ಗ್ರಾಮದ ಅಭ್ಯುದಯಕ್ಕೆ ನರೇಗಾ ಅತ್ಯುತ್ತಮ ಯೋಜನೆ. ಆದರೆ, ಇದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಷಾದಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಅನೇಕ ಸಮಸ್ಯೆಗಳ ಕುರಿತು ವಿವಿಧ ಸಂಘಟನೆಗಳು ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಂಘಟನೆಗಳು ಮಾಡುವ ಜನಪರ ಹೋರಾಟಗಳಿಗೆ ಆಳುವ ಸರ್ಕಾರಗಳು ಗೌರವಿಸದಂತಹ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.

ಎಲ್ಲ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಒಂದಾಗುತ್ತವೆ. ಅದೇ ರೀತಿಯಲ್ಲಿ ಸಮಾಜದ ಬದಲಾವಣೆಗೆ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಜನಸಂಗ್ರಾಮ ಪರಿಷತ್‌ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಬಹುರಾಷ್ಟ್ರೀಯ ಕಂಪೆನಿಗಳ ಸಾಲ ಮನ್ನಾ ಮಾಡುವ  ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಲಾಗುವುದು ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ ಎಂದು ಟೀಕಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ಜನಶಕ್ತಿ ಸಂಚಾಲಕಿ ಸಿರಿಮನೆ ಮಲ್ಲಿಗೆ ಮಾತನಾಡಿ, ಜಾಗತೀಕರಣದಿಂದ ಬಡದೇಶಗಳ ಬಲಿಷ್ಠ ದೇಶಗಳ ಹಿಡಿತಕ್ಕೆ ಸಿಲುಕಿವೆ. ಆದೇ ರೀತಿ ವಿಕೇಂದ್ರೀಕರಣ ವ್ಯವಸ್ಥೆ ಹೋಗಿ ಎಲ್ಲವೂ ಕೇಂದ್ರೀಕೃತವಾಗುತ್ತಿವೆ. ಇದರಿಂದ ಸಮಸ್ಯೆಗಳು ಹೆಚ್ಚಾಗಿವೆ. ಜನರನ್ನು ಇಂತಹ ಸಮಸ್ಯೆಗಳಿಂದ ಮುಕ್ತಗೊಳಿಸಲು ಸಂಘಟನೆಗಳು ಒಗ್ಗೂಡಿ ಹೋರಾಟಕ್ಕೆ ಮುಂದಾಗಬೇಕು ಎಂದರು.

ಭೂಮಿ ವಸತಿ ವಂಚಿತ ಹೋರಾಟ ಸಮಿತಿಯ ಅಧ್ಯಕ್ಷ ನೂರ್ ಶ್ರೀಧರ, ಎಐಎಂಎಸ್ಎಸ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಬಿ.ಆರ್‌.ಅಪರ್ಣಾ, ಎಂಆರ್‌ಎಚ್ಎಸ್‌ನ ಮುಖಂಡ ಜೆ.ಬಿ ರಾಜು, ನರಸಿಂಹಮೂರ್ತಿ ಮಾತನಾಡಿದರು.

ಜನಾಂದೋಲನಾ ಮಹಾಮೈತ್ರಿಯ ಮುಖಂಡರಾದ  ಡಾ.ವಿ.ಎ ಮಾಲಿಪಾಟೀಲ್, ಜಾನ್ ವೆಸ್ಲಿ, ಲಕ್ಷ್ಮಣದೊಡ್ಡಿ ಕಡಗಂದೊಡ್ಡಿ, ಅಮರಣ್ಣ ಗುಡಿಹಾಳ, ಬಿ.ಬಸವರಾಜ, ಎಂ.ಆರ್ ಭೇರಿ, ಮೋಕ್ಷಮ್ಮ, ಜಯಪ್ರಕಾಶಗೌಡ, ಶರಣಪ್ಪ ಉದ್ಭಾಳ, ಜನಾರ್ದನ ಹಳ್ಳಿಬೆಂಚಿ, ವೀರೇಶ ಭಾಗವಹಿಸಿದ್ದರು.

*
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭ್ರಷ್ಟಾಚಾರ ತಡೆಯಲು ರೈತರು ಮುಂದಾಗಬೇಕು. ಭ್ರಷ್ಟಚಾರ ನಡೆಸುವ  ಅಧಿಕಾರಿ ಮತ್ತು ಸದಸ್ಯರ ವಿರುದ್ಧ ಹೋರಾಟ ನಡೆಸಬೇಕು.
-ರವಿಕೃಷ್ಣಾ ರೆಡ್ಡಿ,  ಭ್ರಷ್ಟಾಚಾರ ನಿರ್ಮೂಲನಾ ಹೋರಾಟ ಸಮಿತಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT