ADVERTISEMENT

ತೊಗರಿ ಖರೀದಿ ಹೆಚ್ಚಳಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:04 IST
Last Updated 3 ಫೆಬ್ರುವರಿ 2017, 6:04 IST
ತೊಗರಿ ಖರೀದಿ ಹೆಚ್ಚಳಕ್ಕೆ ಒತ್ತಾಯ
ತೊಗರಿ ಖರೀದಿ ಹೆಚ್ಚಳಕ್ಕೆ ಒತ್ತಾಯ   

ರಾಯಚೂರು: ಜಿಲ್ಲೆಯಲ್ಲಿ 9 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿ ದ್ದರೂ ಫಸಲು ಅಧಿಕವಾಗಿರುವ ಕಾರಣ ಈ ಕೇಂದ್ರಗಳಲ್ಲಿ ಖರೀದಿಯನ್ನು ಹತ್ತು ಪಟ್ಟು ಹೆಚ್ಚಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ ರೆಡ್ಡಿ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 98 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯ ಲಾಗಿದ್ದು, ಸುಮಾರು ಏಳು ಲಕ್ಷ ಕ್ವಿಂಟಲ್‌ ತೊಗರಿ ಫಸಲು ಬಂದಿದೆ. ಆದರೆ, ಕಳೆದ ತಿಂಗಳ ಅಂತ್ಯಕ್ಕೆ 70 ಸಾವಿರ ಕ್ವಿಂಟಲ್‌ ನಷ್ಟು ತೊಗರಿ ಖರೀದಿಯಾಗಿದೆ. ಇದೇ ಪ್ರಮಾಣದಲ್ಲಿ ಖರೀದಿ ಮುಂದುವ ರೆದರೆ ತೊಗರಿ ಖರೀದಿ ಮುಗಿಯಲು 9 ತಿಂಗಳು ಬೇಕಾಗುತ್ತದೆ. ಅಷ್ಟರಲ್ಲಿ ಮತ್ತೊಂದು ಹಂಗಾಮಿನ ಫಸಲು ಬಂದಿರುತ್ತದೆ ಎಂದರು.

ಖರೀದಿಸಿರುವ ತೊಗರಿಗೆ ಒಂದು ತಿಂಗಳಾದರೂ ಹಣ ಪಾವತಿ ಆಗಿಲ್ಲ ಮತ್ತು ರೈತರು ತೊಗರಿ ಮೂಟೆಗಳನ್ನು ಖರೀದಿ ಕೇಂದ್ರದ ಮುಂದೆ ಇರಿಸಿ ಕೊಂಡು 10–15 ದಿನ ಕಾಯಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ರೈತರು ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಒತ್ತಡಕ್ಕೆ ಸಿಲುಕಿ ನಷ್ಟವನ್ನೂ ಅನುಭವಿಸಬೇಕಾಗುತ್ತದೆ. ಈಗಾಗಲೇ ಅನೇಕ ರೈತರು ವರ್ತಕರಿಗೆ ಅಥವಾ ದಲ್ಲಾಳಿ ಗಳಿಗೆ ತೊಗರಿ ಮಾರಾಟ ಮಾಡು ತ್ತಿದ್ದು, ಈ ವರ್ತಕರು ಬೇನಾಮಿ ಹೆಸರಿನಲ್ಲಿ ಅದನ್ನು ತೊಗರಿ ಖರೀದಿ ಕೇಂದ್ರಕ್ಕೆ ಮರುಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅನ್ಯಾಯವನ್ನು ತಡೆಯಲು ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಮಾಣವನ್ನು ಹೆಚ್ಚಿಸಬೇಕು.  ಅದಕ್ಕೆ ತಕ್ಕಂತೆ ತೂಗುವ ಯಂತ್ರ, ಸಿಬ್ಬಂದಿ ನಿಯೋಜಿಸಬೇಕು ಒತ್ತಾಯಿಸಿದರು.

ಇನ್ನಷ್ಟು ತೊಗರಿ ಖರೀದಿ ಕೇಂದ್ರ ತೆರೆಯಲು ನೆರವು ನೀಡಲು ಸಿದ್ಧರಿರುವುದಾಗಿ ಜಿಲ್ಲಾಧಿಕಾರಿ ಮತ್ತು ಎಪಿಎಂಸಿ ಅಧಿಕಾರಿಗಳಿಗೆ ಮನವಿ ಕೊಡಲಾಗಿದೆ. ಜೊತೆಗೆ, ಈಗಿರುವ ತೊಗರಿ ಕೇಂದ್ರಗಳನ್ನು ನಿರ್ದಿಷ್ಟ ಸಮಯದ ನಂತರ ಸ್ಥಳಾಂತರ ಮಾಡುವುದರಿಂದ ರೈತರಿಗೆ ಖರೀದಿ ಕೇಂದ್ರ ಸಮೀಪವಾಗಿ ಸಾಗಣೆ ವೆಚ್ಚದ ಹೊರೆ ತಪ್ಪುತ್ತದೆ ಎಂದರು.

ತೊಗರಿ ಖರೀದಿ ಕೇಂದ್ರಗಳ ವ್ಯವಸ್ಥೆಯನ್ನು ಸುಧಾರಿಸಿ ರೈತರಿಗೆ ಅನುಕೂಲ ಮಾಡಿಕೊಡದಿದ್ದರೆ, ರೈತರ ಜೊತೆಗೂಡಿ ರಸ್ತೆ ತಡೆ ಮಾಡಬೇಕಾ ಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿ.ಪಂ ಸದಸ್ಯೆ ಶಿವಜ್ಯೋತಿ, ಮುಖಂಡರಾದ ಜೆ.ಕೃಷ್ಣ, ಶರಣಪ್ಪ ನಾಮಾಲಿ, ವಿಶ್ವನಾಥ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.