ADVERTISEMENT

ನಾಲೆಯ ನೀರು ಅಕ್ರಮ ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 8:56 IST
Last Updated 30 ಜುಲೈ 2014, 8:56 IST

ಗಂಗಾವತಿ: ತುಂಗಭದ್ರಾ ಎಡದಂಡೆ 25ನೇ ವಿತರಣಾ ಕಾಲುವೆ ಮೇಲ್ಭಾಗದಲ್ಲಿ ನೀರಾವರಿ ಅಧಿಕಾರಿಗಳ ಕುಮ್ಮಕ್ಕಿನಿಂದ ಕೆಲ ರೈತರು ಅಕ್ರಮವಾಗಿ ಕೃಷಿ ಚಟುವಟಿಕೆ ನೀರು ಬಳಕೆ ಮಾಡುತಿದ್ದಾರೆ ಎಂದು ಕುಂಟೋಜಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ರೈತ ಸುಬ್ಬಾರಾವ್ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲಾಖೆ ಬೇಜವಾಬ್ದಾರಿಯಿಂದ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ. ಕಾಲುವೆಯಲ್ಲಿ ಬೆಡ್ ಮತ್ತು ಟೂಬ್ ಲೇವಲ್ ಬಗ್ಗೆ ಮಾಹಿತಿ ನೀಡುತ್ತಿಲ್ಲ.

ಸ್ಥಳದಲ್ಲಿದ್ದು ಕಾಮಗಾರಿ ಬಗ್ಗೆ ಗಮನ ಹರಿಸಬೇಕಿದ್ದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಳ ಭಾಗದ ರೈತರಿಗೆ ನೀರು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮೇಲ್ಭಾಗದಲ್ಲಿ ಕಾಲುವೆಗೆ ಅಕ್ರಮವಾಗಿ ಪೈಪ್‌ಲೈನ್‌ ಅಳವಡಿಸುವ ಕಾರ್ಯ ನಡೆದಿದೆ. ಕಾಲುವೆ ಬದುವಿನಲ್ಲಿ ರಂಧ್ರ ಕೊರೆದು ಪಕ್ಕದಲ್ಲಿ ದೊಡ್ಡ ಕೆರೆ ನಿರ್ಮಿಸಿಕೊಂಡು ಅಲ್ಲಿಂದ ಎರಡು ಮೂರು ಕಿ.ಮೀ. ಪೈಪ್‌ಲೈನ್‌ ಮಾಡಿಕೊಂಡು ನೀರು ಕಬಳಿಸಲಾಗುತ್ತಿದೆ. ಇದಕ್ಕೆ ಅಧಿಕಾರಿಗಳೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳಪೆ ಕಾಮಗಾರಿ ನಿಲ್ಲಿಸಬೇಕು, ಮೇಲ್ಭಾಗದಲ್ಲಿರುವ 500ಕ್ಕೂ ಹೆಚ್ಚು ಅಕ್ರಮ ಪಂಪ್‌ಸೆಟ್‌, ಪೈಪ್‌ಲೈನ್‌ ತೆರವು ಮಾಡಬೇಕು, ಕಾಲುವೆಯ ಬೆಡ್ ಮತ್ತು ಟೂಬ್ ಲೇವಲ್ ಮಾಹಿತಿ ನೀಡಬೇಕು. ಇಲ್ಲವಾದರೆ ಆ. 3ರಂದು ಶ್ರೀರಾಮನಗರದಲ್ಲಿ ರಸ್ತೆ ತಡೆ ನಡೆಸುವುದಾಗಿ ರೈತ ಮಾದೇಗೌಡ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.