ADVERTISEMENT

ನೀಟ್‌: ರಾಜ್ಯ ಸರ್ಕಾರದಿಂದ ಅನ್ಯಾಯ– ಶಾಸಕ ಆರೋಪ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2016, 6:59 IST
Last Updated 26 ಡಿಸೆಂಬರ್ 2016, 6:59 IST

ರಾಯಚುರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್‌) ಕನ್ನಡದಲ್ಲಿ ಬರೆಯಲು ಅವಕಾಶ ಕಳೆದುಕೊಂಡಿದ್ದಕ್ಕೆ ರಾಜ್ಯ ಸರ್ಕಾರದ ಲೋಪ ಕಾರಣವೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ನವೆಂಬರ್ 21ರಂದು ಕೇಂದ್ರಕ್ಕೆ ಪತ್ರ ಬರೆದು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ನಡೆಸುವಂತೆ ಕೋರುತ್ತದೆ. ನಂತರ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಡಿ. 14ರಂದು ಪತ್ರ ಬರೆಯುವ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೆದ್‌ ಅಖ್ತರ್‌, ಅದಕ್ಕೆ ಡಿ. 20ರಂದು ಸಹಿ ಮಾಡುತ್ತಾರೆ. ಈ ಪತ್ರ ಡಿ. 22ಕ್ಕೆ ಕೇಂದ್ರದ ಆರೋಗ್ಯ ಸಚಿವಾಲಯಕ್ಕೆ ತಲುಪುತ್ತದೆ. ಆದರೆ, ಕೇಂದ್ರ ಆರೋಗ್ಯ ಸಚಿವಾಲಯವು ಡಿ. 21ರಂದೇ ಪರೀಕ್ಷೆ ಬರೆಯಲು ಅವಕಾಶ ಇರುವ ಭಾಷಾ ಮಾಧ್ಯಮಗಳ ಕುರಿತ ಆದೇಶ ಹೊರಡಿಸಿರುತ್ತದೆ. ರಾಜ್ಯ ಸರ್ಕಾರದ ಇಂತಹ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವುದರಿಂದ ವಂಚಿತರಾದರು’ ಎಂದು ಆರೋಪಿಸಿದರು.

‘ನೀಟ್‌ ಪರೀಕ್ಷೆ ಬರೆಯುವ ಭಾಷಾವಾರು ಪಟ್ಟಿಯಿಂದ ಕನ್ನಡವನ್ನು ಕೈಬಿಟ್ಟು ಅನ್ಯಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರು ಆಕ್ಷೇಪಿಸಿರುವುದು ಬೇಜವಾಬ್ದಾರಿತನ. ತಮ್ಮ ತಪ್ಪನ್ನು ಮರೆಮಾಚಿ, ಕೇಂದ್ರ ಸರ್ಕಾರ ಅಥವಾ ಸಚಿವ ಅನಂತಕುಮಾರ್‌ ಅವರಿಂದ ವಂಚನೆ ಆಯಿತು ಎಂಬುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಆದರೂ ಕೇಂದ್ರ ಸಚಿವ ಆನಂತಕುಮಾರ್‌ ಅವರು ಕನ್ನಡದಲ್ಲಿ ನೀಟ್‌ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಸಾಧ್ಯವೆ ಎಂಬ ಬಗ್ಗೆ ಸಂಬಂಧಿಸಿದ ಸಚಿವಾಲಯ ಮತ್ತು ಸಚಿವರೊಂದಿಗೆ ಚರ್ಚೆ ನಡೆಸಿ ಆದೇಶದಲ್ಲಿ ಮಾರ್ಪಾಟು ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

ನಿರ್ಣಯದಂತೆ ನೀರು ಬಿಡದಿದ್ದರೆ ರಸ್ತೆ ತಡೆ: ‘ನಾರಾಯಪುರ ಎಡದಂಡೆ ನಾಲೆಗೆ ಕೃಷ್ಣಾ ನದಿ ನೀರನ್ನು ಐಸಿಸಿ ಸಭೆಯ ನಿರ್ಣಯದಂತೆ ಮಾರ್ಚ್‌ ಅಂತ್ಯದವರೆಗೂ ಬಿಡಬೇಕು. ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇಲ್ಲ. ಆದ್ದರಿಂದ ಹಿಂಗಾರು ಹಂಗಾಮಿಗೆ ನೀರು ಬಿಡಲು ಅಡ್ಡಿಯಲ್ಲ. ಆದರೂ ಅಧಿಕಾರಿಗಳು 11 ದಿನ ನೀರು ಹರಿಸಿ 11 ದಿನ ನಿಲ್ಲಿಸುತ್ತಿರುವುದು ಸರಿಯಲ್ಲ’ ಎಂದು ಶಿವನಗೌಡ ಆಕ್ಷೇಪಿಸಿದರು.

‘ಒಂದು ವೇಳೆ ವಾರಬಂದಿ ಮಾಡಬೇಕಿದ್ದರೆ 3–4 ದಿನ ಮಾಡಲಿ ಅದನ್ನು ಬಿಟ್ಟು ಐಸಿಸಿ ನಿರ್ಣಯವನ್ನೆ ಉಲ್ಲಂಘಿಸಿದರೆ ಹೇಗೆ’ ಎಂದು ಪ್ರಶ್ನಿಸಿದರು.
‘ಐಸಿಸಿ ಸಭೆ ನಿರ್ಣಯದಂತೆ ನೀರು ಬಿಡಲು ಇನ್ನೊಂದುವಾರ ಗಡುವು ನೀಡಲಾಗುವುದು. ಆದರೂ ಅಧಿಕಾರಿಗಳು ತಮ್ಮ  ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಜನವರಿ 3 ಅಥವಾ 4ರಿಂದ ತಿಂಥಿಣಿ ಬ್ರಿಡ್ಜ್‌ ಸಮೀಪ ಬೀದರ್‌– ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಅನಿರ್ದಿಷ್ಟಾವಧಿ ರಸ್ತೆ ತಡೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮುಖಂಡರಾದ ತ್ರಿವಿಕ್ರಮ ಜೋಷಿ, ಬಸನಗೌಡ ಬ್ಯಾಗವಾಟ್, ಕಡಗೋಲು ರಾಮಚಂದ್ರ, ಬಂಡೇಶ ವಲ್ಕಂದಿನ್ನಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.