ADVERTISEMENT

ನೀರಿಗೆ ಬರ: ಕೆರೆಗೆ ಬೇಕಿದೆ ಕಾಯಕಲ್ಪ

ಮೂಲ ಸೌಕರ್ಯ ವಂಚಿತ ಬುಂಕಲದೊಡ್ಡಿ ಗ್ರಾಮ: ರೋಗ ಭೀತಿ

ಅಲಿಬಾಬಾ ಪಟೇಲ್
Published 24 ಜನವರಿ 2017, 9:20 IST
Last Updated 24 ಜನವರಿ 2017, 9:20 IST
ನೀರಿಗೆ ಬರ: ಕೆರೆಗೆ ಬೇಕಿದೆ ಕಾಯಕಲ್ಪ
ನೀರಿಗೆ ಬರ: ಕೆರೆಗೆ ಬೇಕಿದೆ ಕಾಯಕಲ್ಪ   

ಜಾಲಹಳ್ಳಿ: ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದ ಬುಂಕಲದೊಡ್ಡಿ ಗ್ರಾಮದಲ್ಲಿ ಮೂಲ ಸೌಕರ್ಯ ಇಲ್ಲದೆ ಜನರು ಪರದಾಡುವಂತಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಶೈಕ್ಷಣಿಕ, ನೀರಾವರಿ ಸೇರಿದಂತೆ ಅನೇಕ ಸೌಲಭ್ಯಗಳಿಲ್ಲದೆ ಜನರು ಪರಿತಪಿಸುವಂತಾಗಿದೆ ಎಂಬುದು ಗ್ರಾಮಸ್ಥರ ದೂರು.

ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮ ಸುಮಾರು 4 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿದೆ. 7 ಜನ ಗ್ರಾ.ಪಂ ಸದಸ್ಯರು ಆಯ್ಕೆಯಾಗಿದ್ದಾರೆ.

‘ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ಎಲ್ಲಾ ಮನೆಗಳ ಎದುರು ಚರಂಡಿಯ ಹೊಲಸು ನಿಂತು ರಸ್ತೆ ಕೆಸರು ಗದ್ದೆಯಾಗಿದೆ. ಇದರಿಂದ ಸೊಳ್ಳೆಗಳು ಹೆಚ್ಚಿವೆ. ಕುಡಿವ ನೀರಿಗೆ ಅಗಸರದೊಡ್ಡಿ ಯಿಂದ ಕಿರುನೀರು ಸರಬರಾಜು ಮಾಡಲಾಗುತ್ತದೆ. ಆದರೆ ಸಮರ್ಪಕ ಪೂರೈಕೆ ಇಲ್ಲದ ಕಾರಣ ತೊಂದರೆ ಉಂಟಾಗಿದೆ. ಗ್ರಾಮದಲ್ಲಿ ಒಂದೂ ಕೈಪಂಪ್‌ ಇಲ್ಲ. ವಿದ್ಯುತ್‌ ಇದ್ದರೆ ನೀರು ಇಲ್ಲವಾದರೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕಲುಷಿತ ನೀರು ಸೇವಿಸಿ ಅನೇಕರು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ’ ಎಂದು ವೆಂಕಟೇಶ ಕಾವಲಿ ದೂರುತ್ತಾರೆ.

ಮಹಿಳೆಯರಿಗೆ  ಶೌಚಾಲಯ ಇಲ್ಲ.  ನರೇಗ ಯೋಜನೆ ಅಡಿ ಗ್ರಾ.ಪಂ ವತಿಯಿಂದ ಸ್ವಚ್ಛ ಅಭಿಯಾನ ಅಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಂಡವರಿಗೆ ಸಹಾಯಧನ ವಿತರಿಸಿಲ್ಲ. ಇದರಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ.

‘20ಜನ ರೈತರು ದನದ ಶೆಡ್‌ ನಿರ್ಮಾಣ ಮಾಡಿಕೊಂಡಿದ್ದಾರೆ. ಅದರಲ್ಲಿ 9 ಜನರಿಗೆ ಮಾತ್ರ ಹಣ  ಪಾವತಿಸಲಾಗಿದೆ. ಉಳಿದ 11 ಜನ ರೈತರಿಗೆ ಒಂದು ವರ್ಷದಿಂದ ಹಣ ಪಾವತಿಸಿಲ್ಲ. ಜಾಬ್‌ ಕಾರ್ಡ್‌ ಗ್ರಾ.ಪಂ ಸದಸ್ಯರು ಹಾಗೂ ಗುತ್ತಿಗೆದಾರರು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ’ ಎಂದು ತಿಮ್ಮಣ್ಣ ಚಾಲುವಾದಿ ಆರೋಪಿಸುತ್ತಾರೆ.

ನೀರಾವರಿ ಕಲ್ಪಿಸಲು ಮನವಿ: ಗ್ರಾಮದ ಪಕ್ಕದಲ್ಲಿಯೇ ಬುಂಕಲದೊಡ್ಡಿ ಕೆರೆ ಇದ್ದರೂ ನೀರಿಗೆ ಬರ ಎನ್ನುವಂತಾಗಿದೆ.  ಈ ಗ್ರಾಮದ ಕೆರೆ ಸುಮಾರು 40 ಎಕರೆ ವಿಸ್ತೀರ್ಣದಲ್ಲಿದ್ದು, ಈ ಹಿಂದೆ ಕೆರೆಯಿಂದ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು, ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನೀರು ಸಂಗ್ರಹ ಕಡಿಮೆಯಾಗಿ ದನಕರುಗಳಿಗೆ ಮಾತ್ರ ನೀರಿ ಸೀಮಿತವಾಗಿದೆ. ಕೆರೆಯ ಮೇಲ್ಭಾಗದಲ್ಲಿ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ಇದೆ. ಅಲ್ಲಿಂದ ಕೆರೆಗೆ ಸಂಪರ್ಕ ಕಲ್ಪಿಸಿದರೆ ನೀರಾವರಿ ವಂಚಿತ ಸುಮಾರು 400 ಎಕರೆ ಕೃಷಿ ಭೂಮಿಗೆ ಅನುಕೂಲ ಮಾಡಿ ಕೊಡಲು ಸಾಧ್ಯ ಇದೆ.

ಈ ವಿಷಯದ ಬಗ್ಗೆ ಆನೇಕ ಭಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುಖಂಡರಾದ ಹನುಮಂತ ವಂದಲಿ, ಸೋಮರೆಡ್ಡಿ,  ಹನುಮಂತಪ್ಪ ದೂರುತ್ತಾರೆ.  ರೈತರಿಗೆ ಅನುಕೂಲ ಕಲ್ಪಿಸಲು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಕೆಲಸ ಮಾಡಬೇಕು. ಗ್ರಾಮಕ್ಕೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.