ADVERTISEMENT

ಪಿಡಿಒ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:05 IST
Last Updated 22 ಮಾರ್ಚ್ 2017, 9:05 IST

ಸಿಂಧನೂರು: ತಾಲ್ಲೂಕಿನ ಸೋಮಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮರಗುಂಡಪ್ಪ ಗ್ರಾಮಸ್ಥರ ಹಾಗೂ ಕೃಷಿ ಕೂಲಿಕಾರರ ಸಮಸ್ಯೆಗೆ ಸ್ಪಂದಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಮಂಗಳವಾರ ನಗರದಲ್ಲಿ  ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ತಾಲ್ಲೂಕು ಪಂಚಾಯಿತಿ ಕಚೇರಿ ತಲುಪಿದ  ಪ್ರತಿಭಟನಾಕಾರರು ಪಿಡಿಒ ವಿರುದ್ಧ ಘೋಷಣೆ ಕೂಗಿದರು. 

ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರದ ಆದೇಶದಂತೆ ಕೂಲಿಕಾರರಿಗೆ ಕೆಲಸ ಹಂಚಿಕೆ ಮಾಡಿಲ್ಲ. ಕೇವಲ ಒಂದು ವಾರ ಕೆಲಸ ಕೊಟ್ಟು, ನಂತರ ಕೆಲಸ ಇಲ್ಲ ಎನ್ನುತ್ತಿದ್ದಾರೆ.  ಪಿಡಿಒ ಮತ್ತು ಸದಸ್ಯರು ಶಾಮೀಲಾಗಿ ಗ್ರಾಮದಲ್ಲಿ ಬಾವಿ ಹೂಳೆತ್ತುವ ಮತ್ತು ಕೆರೆ ಅಭಿವೃದ್ಧಿ ಕೆಲಸವನ್ನು ಬೇಕಾಬಿಟ್ಟಿಯಾಗಿ ನಡೆಸಿ ₹74,872 ಬಿಲ್‌ ಮಾಡಿದ್ದಾರೆಂದು ಕಾರ್ಮಿಕ ಮುಖಂಡ ನರಸಿಂಹಪ್ಪ ಜನತಾಕಾಲೊನಿ ಆರೋಪಿಸಿದರು.

ಈ ಭಾರಿ ಮಳೆ ಅಭಾವದಿಂದ ತಾಲ್ಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜನ ಗುಳೆ ಹೋಗುತ್ತಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದವರಿಗೆ ಸರ್ಕಾರ ನಿಗದಿ ಪಡಿಸಿದ ಕೂಲಿಗಿಂತ ಕಡಿಮೆ ಕೊಟ್ಟು ವಂಚಿಸಲಾಗುತ್ತಿದೆ ಎಂದು ಮುಖಂಡ ವೀರೇಶ ದೂರಿದರು.

ಕೂಲಿಕಾರರ ದನದ ಶೆಡ್ಡು ಮತ್ತು ಹಿಂಗುಗುಂಡಿಗಳ ಬಿಲ್‌ ಪಾವತಿಸಬೇಕು. ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಜನರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಸಹಾಯಧನ ಮಂಜೂರು ಮಾಡಬೇಕು. ಎನ್ಆರ್ಇಜೆ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗದವರಿಗೆ ಜಮೀನುಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕಿ ಸರೋಜಾದೇವಿಗೆ ಮನವಿ  ಸಲ್ಲಿಸಲಾಯಿತು. ಸಂಘದ ಗ್ರಾಮ ಘಟಕದ ಅಧ್ಯಕ್ಷೆ ಅಮರಮ್ಮ ಈರಪ್ಪ, ಉಪಾಧ್ಯಕ್ಷೆ ಹುಲಿಗೆಮ್ಮ ಅಂಬಣ್ಣ, ಕಾರ್ಮಿಕ ಮುಖಂಡರಾದ ಅಪ್ಪಣ್ಣ ಕಾಂಬಳೆ, ಚಂದಪ್ಪ, ರೇಣುಕಮ್ಮ, ನಾಗಮ್ಮ, ದುರುಗಮ್ಮ, ಶಾರದಮ್ಮ, ರಾಮಣ್ಣ, ನಿಂಗಪ್ಪ, ಶಂಕ್ರಪ್ಪ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.