ADVERTISEMENT

ಪ್ರಾಣಿ ಬಲಿ ತಡೆ: ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:23 IST
Last Updated 22 ಮೇ 2017, 6:23 IST

ಮುನಿರಾಬಾದ್‌: ಮನಃಶಾಂತಿ ನೀಡಬೇಕಾದ ದೇವಾಲಯದ ತಾಣಗಳು ರಕ್ತ ಕಾರುವ ವಧಾ ಸ್ಥಾನಗಳಾಗಬಾರದು ಎಂದು ಬೆಂಗಳೂರಿನ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದಸ್ವಾಮಿ ಹೇಳಿದರು.

ಸಮೀಪದ ಹುಲಿಗಿಯ ಹುಲಿಗೆಮ್ಮದೇವಿ ಜಾತ್ರೆಯ ಅಂಗವಾಗಿ ಭಾನುವಾರ ನಡೆದ ಪ್ರಾಣಿ ಬಲಿ ತಡೆ ಜಾಗೃತಿ ಪಾದಯಾತ್ರೆಯಲ್ಲಿ  ಮಾತನಾಡಿದರು. ‘ಲೋಕದ ಕೋಟಿ ಜೀವರಾಶಿಗಳಿಗೆ ಅನ್ನ ನೀಡುವ, ನಮ್ಮನ್ನೆಲ್ಲ ರಕ್ಷಿಸುವ ತಾಯಿ ನನಗೆ ಹಸಿವಾಗುತ್ತಿದೆ ಪ್ರಾಣಿ ರಕ್ತ ಕೊಡು ಎಂದು ಕೇಳುತ್ತಾಳೆಯೇ? ರಕ್ತ ಹರಿಸಿದರೆ ದೇವಿ ಸಂತೃಪ್ತಳಾಗುವುದಿಲ್ಲ.

ಪ್ರತಿ ವರ್ಷ ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ಪ್ರಾಣಿಗಳ ಬಲಿ ನಡೆಯುತ್ತಿದೆ. ಇದನ್ನು ತಡೆಯಬೇಕು. ಸಂಪ್ರದಾಯದ ಹೆಸರಲ್ಲಿ ಮೂಕಪ್ರಾಣಿಗಳ ವಧೆ ನಿಲ್ಲಬೇಕು. ಪ್ರಾಣಿಗಳಿಗೂ ಜೀವಿಸಲು ಅವಕಾಶ ಮಾಡಿಕೊಡಿ. ಪ್ರಾಣಿ ಬಲಿ ಬದಲಾಗಿ ಅದರ ಸಂಕೇತವಾಗಿ ಕುಂಬಳಕಾಯಿ, ನಿಂಬೆಹಣ್ಣು ಕೊಡಿ. ಪ್ರಾಣಿಬಲಿ ನೀಡಿದರೆ ದೇವಿ ಶಾಂತಳಾಗುವಳು ಎಂಬ ಮೂಢನಂಬಿಕೆ ಬೇಡ. ನಿಸರ್ಗದಲ್ಲಿ ನಮ್ಮಂತೆ ಪಶು, ಪಕ್ಷಿ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಬಲಿ ನೀಡಿ ಪಾಪ ಕಟ್ಟಿಕೊಳ್ಳುವುದು ಬೇಡ’ ಎಂದು ಹೇಳಿದರು.

ADVERTISEMENT

‘ನಾವು ಹರಕೆ ಹೊತ್ತಿದ್ದೇವೆ. ದೇವರಿಗೆ ಮೋಸಮಾಡಿದಂತೆ ಆಗುತ್ತದೆಂದು ಬಲಿ ಕೊಡುವವರು ಉಂಟು. ಇನ್ನು ಮುಂದು ಪ್ರಾಣಿ ಬಲಿ ಹರಕೆ ಮಾಡಿಕೊಳ್ಳಬೇಡಿ ಎಂದು ಹೇಳಿದರು. ಭಕ್ತರು ಬಲಿಗಾಗಿ ತೆಗೆದುಕೊಂಡು ಹೋಗುತ್ತಿದ್ದ ಕೆಲವು ಪ್ರಾಣಿಗಳನ್ನು ರಕ್ಷಿಸಿರುವುದಾಗಿ ಸ್ವಾಮೀಜಿ ಹೇಳಿದರು.
ಮಂಡಳಿ ಸಂಚಾಲಕಿ ಸುನಂದಾದೇವಿ, ಶರಣಪ್ಪಕಮ್ಮಾರ, ಬಸಯ್ಯ ವಸ್ತ್ರದಮಠ, ಶಾಂತಮ್ಮ,  ಎನ್‌.ಕೃಷ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.