ADVERTISEMENT

ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ರಾಯಚೂರು–ಪ್ರತಿಭಟನೆ, ಎಂದಿನಂತೆ ಜನಜೀವನ, ಬಸ್‌, ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 14:12 IST
Last Updated 19 ಏಪ್ರಿಲ್ 2015, 14:12 IST

ರಾಯಚೂರು:  ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟುವ ರಾಜ್ಯದ ಯೋಜನೆಗೆ ತಮಿಳುನಾಡು ವಿರೋಧಿಸುತ್ತಿರುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ನೀಡಿದ್ದ ರಾಜ್ಯ ಬಂದ್‌ ಕರೆಗೆ ಜಿಲ್ಲೆಯಲ್ಲಿನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದರೆ, ಜಿಲ್ಲಾ ಕೇಂದ್ರ ರಾಯಚೂರು ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ ಮತ್ತು ಸರ್ಕಾರಿ ನೌಕರರ ಸಂಘ ಮೇಕೆದಾಟು ಯೋಜನೆ ಬೆಂಬಲಿಸಿ ಮನವಿ ಪತ್ರ ನೀಡಿವೆ.

ರಾಯಚೂರು ಜಿಲ್ಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ರೈಲುಗಳು ಎಂದಿನಂತೆ ಸಂಚರಿಸಿದವು. ಆಟೊ ಮತ್ತು ಇನ್ನಿತರ ವಾಹನಗಳ ಸಂಚಾರಕ್ಕೆ ಯಾವುದೇ                           ತೊಂದರೆ ಆಗಲಿಲ್ಲ.

ತರಕಾರಿ ಮಾರುಕಟ್ಟೆ, ಅಂಗಡಿ– ಮುಂಗಟ್ಟುಗಳು ತೆರೆದಿದ್ದವು. ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಕೂಡ ಕಾರ್ಯನಿರ್ವಹಿಸಿದವು. ಸಿನಿಮಾ ಮಂದಿರಗಳು ಬಂದ್‌ ಆಚರಿಸಲಿಲ್ಲ. ಶಾಲಾ– ಕಾಲೇಜುಗಳಿಗೆ ಬೇಸಿಗೆ ರಜೆ ಇರುವ ಕಾರಣ ಅವು ಬಾಗಿಲು ಹಾಕಿದ್ದವು.

ಬಂದ್‌ಗೆ ಬೆಂಬಲ: ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಬಳಿ ಅಣೆಕಟ್ಟೆ ಕಟ್ಟುವುದು  ರಾಜ್ಯದ ಹಕ್ಕಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘ ಹೇಳಿದೆ. ರಾಜ್ಯ ಬಂದ್‌ ಕರೆಯನ್ನು ಬೆಂಬಲಿಸಿರುವ ಸಂಘ, ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿಪತ್ರ ಸಲ್ಲಿಸಿದೆ.  ಕೃಷ್ಣಾ ಬಿ ಸ್ಕೀಮ್‌ ಯೋಜನೆಯನ್ನು  ನುಷ್ಠಾನಗೊಳಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದರಿಂದ ನದಿ ಪಾತ್ರದ ತಗ್ಗಿನ ರಾಜ್ಯಕ್ಕೆ ಹೆಚ್ಚಿನ ನೀರು ಹರಿದುಹೋಗಿದೆ.

ಇದರಿಂದ ಅಲ್ಲಿಯ ಜನರು ಉತ್ತಮ ಆರ್ಥಿಕ ಸಾಮರ್ಥ್ಯ ಗಳಿಸಿಕೊಂಡಿದ್ದಾರೆ ಎಂದು ಮನವಿ ಪತ್ರದಲ್ಲಿ ಹೇಳಿದೆ.

371(ಜೆ) ಕಾಯ್ದೆ ಜಾರಿಗೆ 61 ವರ್ಷ ಕಾಯಬೇಕಾಯಿತು. ಈಗ ಅದರ ಸಮರ್ಪಕ ಅನುಷ್ಠಾನಕ್ಕಾಗಿ ಎರಡು ವರ್ಷದಿಂದ ಕಾಯುತ್ತಿರುವುದು ಇಲ್ಲಿಯ ಜನರ ತಾಳ್ಮೆಯಾಗಿದೆ ಎಂದು ಸಂಘ ತಿಳಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ವೃಂದದ ಹುದ್ದೆ ಮತ್ತು ಶಿಕ್ಷಣದಲ್ಲಿ ಶೇ 5 ರಷ್ಟು ಮೀಸಲಾತಿ ನೀಡಬೇಕು. ಕೃಷ್ಣಾ ಬಿ ಸ್ಕೀಮ್‌ ಜಾರಿಗೊಳಿಸಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಅಭಿವೃದ್ಧಿಗೆ ಕ್ರಮ ಜರುಗಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಗೌಣವಾಗಿಸಬೇಕು ಎಂದು ಒತ್ತಾಯಿಸಿದೆ.

ಮನವಿ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹೆಬೂಬ ಪಾಷಾ ಮೂಲಿಮನಿ, ನಾಗರಾಜ ಹಾಗೂ ಇತರರು ಇದ್ದರು.

ಪ್ರತಿಭಟನಾ ರ್‍್ಯಾಲಿ: ಕರ್ನಾಟಕ ರಕ್ಷಣಾ ವೇದಿಕೆ (ಎಚ್‌.ಶಿವರಾಮೇಗೌಡ ಬಣ) ಜಿಲ್ಲಾ ಘಟಕ ಕರ್ನಾಟಕ ಬಂದ್‌ ಬೆಂಬಲಿಸಿ ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಈ ಭಾಗದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರಶೆಟ್ಟಿ ಬಣ) ಜಿಲ್ಲಾ ಘಟಕ ಮೇಕೆದಾಟು ಆಣೆಕಟ್ಟು ನಿರ್ಮಾಣ ಮತ್ತು ರಾಯಚೂರಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ.
*
ಮುಖ್ಯಾಂಶಗಳು
*ಸರ್ಕಾರಿ ಕಚೇರಿ, ಬ್ಯಾಂಕ್‌ ಕಾರ್ಯನಿರ್ವಹಣೆ

* ಆಟೊ, ಇನ್ನಿತರ ವಾಹನಗಳ ಸಂಚಾರಕ್ಕೆ ಧಕ್ಕೆ ಇಲ್ಲ
*ತೆರೆದಿದ್ದ ಅಂಗಡಿ, ಮಾರುಕಟ್ಟೆ ಮಳಿಗೆಗಳು
*
ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಬಳಿ ಅಣೆಕಟ್ಟೆ ಕಟ್ಟುವುದು ರಾಜ್ಯದ ಹಕ್ಕಾಗಿದೆ. ಮಹೆಬೂಬ ಪಾಷಾ ಮೂಲಿಮನಿ, ಅಧ್ಯಕ್ಷ , ಜಿಲ್ಲಾ ಘಟಕ,ಸ.ನೌ.ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT