ADVERTISEMENT

ಬೆಳಕು ಸೂಸದ ಸೌರ ದೀಪ: ನಾಗರಿಕರಿಗೆ ಪರಿತಾಪ

ಐತಿಹಾಸಿಕ ಕೋಟೆಯ ವಾಯುವಿಹಾರ ಪಥ l ಹಣಕಾಸು ನೆರವಿಗೆ ನಗರಸಭೆಗೆ ಕೋರಿಕೆ l ಕೆಟ್ಟುನಿಂತ ದೀಪಗಳು

ಶಶಿಧರ ಗರ್ಗಶ್ವೇರಿ
Published 9 ಜನವರಿ 2017, 5:55 IST
Last Updated 9 ಜನವರಿ 2017, 5:55 IST
ರಾಯಚೂರಿನ ಮೆಕ್ಕಾ ದರ್ವಾಜದಿಂದ ಜೆಸ್ಕಾಂ ಕಚೇರಿ ವರೆಗಿನ ಕೋಟೆ ಮೇಲು ಭಾಗದ ವಾಯು ವಿಹಾರದ ಪಥದಲ್ಲಿ ಕೆಟ್ಟಿರುವ ಸೌರ ವಿದ್ಯುತ್‌ ದೀಪಗಳು
ರಾಯಚೂರಿನ ಮೆಕ್ಕಾ ದರ್ವಾಜದಿಂದ ಜೆಸ್ಕಾಂ ಕಚೇರಿ ವರೆಗಿನ ಕೋಟೆ ಮೇಲು ಭಾಗದ ವಾಯು ವಿಹಾರದ ಪಥದಲ್ಲಿ ಕೆಟ್ಟಿರುವ ಸೌರ ವಿದ್ಯುತ್‌ ದೀಪಗಳು   

ರಾಯಚೂರು: ನಗರದ ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಇರುವ ಮೆಕ್ಕಾ ದರ್ವಾಜದಿಂದ ಜೆಸ್ಕಾಂ ಕಚೇರಿಯ ವರೆಗಿನ ಕೋಟೆಯ ಮೇಲುಭಾಗದಲ್ಲಿ 500 ಮೀಟರ್‌ ದೂರದ ವಾಯುವಿಹಾರದ ಪಥದಲ್ಲಿರುವ ಸೌರ ವಿದ್ಯುದ್ದೀಪಗಳು ನಿರ್ವಹಣೆ ಕೊರತೆಯಿಂದ ಕೆಟ್ಟು ನಿಂತಿವೆ.

ಐದಾರು ವರ್ಷಗಳ ಹಿಂದೆ ಜಿಲ್ಲಾಡಳಿತ ಅಭಿವೃದ್ಧಿ ಪಡಿಸದ ಈ ಪಥದಲ್ಲಿ 55 ಸೌರ ವಿದ್ಯುದ್ದೀಪಗಳನ್ನು ಅಳವಡಿಸಿ ಬೆಳಿಗ್ಗೆ 5.30ರಿಂದ 8 ಮತ್ತು ಸಂಜೆ 6ರಿಂದ 8ರ ಸಮಯದಲ್ಲಿ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಈ ಸೌರ ವಿದ್ಯುದ್ದೀಪಗಳು ನಿರ್ವಹಣೆ ಇಲ್ಲದೆ  ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಬೆಳಕು ಸೂಸುತ್ತಿಲ್ಲ. ಇದರಿಂದ ವಾಯುವಿಹಾರಿಗಳಿಗೆ ತೊಂದರೆ ಆಗಿದೆ. ಮಾತ್ರವಲ್ಲದ ಮತ್ತೆ ಕುಡುಕರ, ಪುಂಡಪೋಕರಿ ಹಾವಳಿಗೆ ಅವಕಾಶ ಮಾಡಿಕೊಟ್ಟಿದೆ.

ಈ  ಸೌರವಿದ್ಯುದ್ದೀಪಗಳ ಬ್ಯಾಟರಿಗಳನ್ನು ವರ್ಷಕ್ಕೆ ಎರಡು ಬಾರಿ ನಿರ್ವಹಣೆ ಮಾಡಬೇಕು ಡಿಸ್ಟ್ರಿಲ್ ನೀರು ಹಾಕಬೇಕು ಇಂತಹ ಒಂದು ನಿರ್ವಹಣಾ ಕಾರ್ಯಕ್ಕೆ ₹ 60ರಿಂದ 70 ಸಾವಿರ ಮೊತ್ತ ಅಗತ್ಯವಿದೆ. ಆದರೆ, ಪ್ರಾಚ್ಯವಸ್ತು ಇಲಾಖೆ, ಜಿಲ್ಲಾಡಳಿತ ಹಾಗೂ ನಗರಸಭೆ ಆಸಕ್ತಿ ವಹಿಸಿಲ್ಲ.

‘ಕೋಟೆಯ ವಾಯುವಿಹಾರ ಪಥದಲ್ಲಿರುವ ಸೌರ ವಿದ್ಯುದ್ದೀಪಗಳಲ್ಲಿ ಬಹುತೇಕ ದೀಪಗಳು ಬ್ಯಾಟರಿ ನಿರ್ವಹಣೆ  ಇಲ್ಲದ ಕಾರಣ ಕೆಟ್ಟಿವೆ. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಅವರು ₹ 2.50 ಲಕ್ಷ ಅನುದಾನ ನೀಡಿದ್ದು, ಅದರಲ್ಲಿ ದುರಸ್ತಿ ಕಾರ್ಯವನ್ನು ಶೀಘ್ರ ಕೈಗೊಳ್ಳಲಾಗುವುದು’ ಎಂದು ನಗರಸಭೆಯ ಉಪಾಧ್ಯಕ್ಷರೂ ಆದ ಐತಿಹಾಸ ಕೋಟೆ ಅಧ್ಯಯನ ಸಮಿತಿಯ ಗೌರವಾಧ್ಯಕ್ಷ ಜಯಣ್ಣ ಹೇಳಿದರು.

‘ಕೋಟೆಯ ಬಗ್ಗೆ ಪ್ರಾಚ್ಯವಸ್ತು ಇಲಾಖೆಗೆ ಸ್ವಲ್ಪವೂ ಕಾಳಜಿ ಇಲ್ಲ. ಎಲ್ಲದಕ್ಕೂ ಅನುದಾನದ ಕೊರತೆ ಎಂದು ಸಬೂಬು ಹೇಳಲಾಗುತ್ತದೆ. ಹೋಗಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸದ ನಿರ್ವಹಣೆಯನ್ನೂ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ ಜಿಲ್ಲಾಧಿಕಾರಿ ಅವರು ಈಚೆಗೆ ಕೋಟೆ ಪ್ರದೇಶಕ್ಕೆ ಭೇಟಿ ನೀಡಿ ಕೋಟೆಯನ್ನು ಅಭಿವೃದ್ಧಿ ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ಅವರಿಗೂ ಸೌರ ವಿದ್ಯುದ್ದೀಪಗಳ ಬ್ಯಾಟರಿ ದುರಸ್ತಿ ಬಗ್ಗೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಐತಿಹಾಸಿಕ ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ ಹಫೀಜುಲ್ಲಾ  ಅವರು ಹೇಳಿದರು.

ಹಿನ್ನೆಲೆ: ಐದಾರು ವರ್ಷಗಳ ಹಿಂದೆ ಈ ಭಾಗದ ಕೋಟೆಯಲ್ಲಿ ಗಿಡಗಂಟಿಗಳು ಬೆಳೆದು ಸೌಂದರ್ಯ ಹಾಳಾಗಿತ್ತು. ಪುಂಡಪೋಕರಿಗಳು, ಕುಡುಕರ ಕಾಟ ಇತ್ತು. ಮಲ, ಮೂತ್ರ ವಿಸರ್ಜನೆಯ ತಾಣವಾಗಿತ್ತು. ಇದನ್ನು ತಪ್ಪಿಸಲು ಮತ್ತು ಜನರು ನಿತ್ಯ ಕೋಟೆಗೆ ಹೋಗಿಬರುವಂತಾದರೆ ಕೋಟೆ ಸಂರಕ್ಷಣೆ ಸಾಧ್ಯವೆಂದು ಪಾರಂಪರಿಕ ನಡಿಗೆ ಪಥವನ್ನು ಮಾಡಲಾಯಿತು. ಜನರಿಂದಲೂ ಉತ್ತಮ ಸ್ಪಂದನೆ ದೊರೆಯಿತು. ಜೊತೆಗೆ ಕುಡುಕರ ಹಾವಳಿಯೂ ಇಲ್ಲವಾಯಿತು.

ಕೋಟೆ ಇತಿಹಾಸ
ರಾಯಚೂರಿನ ಕೋಟೆ 12ನೇ ಶತಮಾನಕ್ಕೆ ಸೇರಿದ್ದು ಎಂಬ ಇತಿಹಾಸ ಇದೆ. ಆದರೆ, ಈಗ ಪಳೆಯುಳಿಕೆಯ ಸ್ಥಿತಿಯಲ್ಲಿರುವ ಕೋಟೆ 13ನೇ ಶತಮಾನಕ್ಕೆ ಸೇರಿದ್ದು.

ಕೋಟೆಯು ಅನೇಕ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಹೊಯ್ಸಳರ ಅರಸು ವಿಷ್ಣುವರ್ಧನ ಕ್ರಿ.ಶ. 1108–1152ರ ಮಧ್ಯೆ ಈ ಕೋಟೆಯನ್ನ ವಶಪಡಿಸಿಕೊಂಡನೆಂಬ ಉಲ್ಲೇಖ ಇದೆ. ನಂತರದಲ್ಲಿ ಕಾಕತೀಯರು, ವಿಜಯನಗರದ ಅರಸರು, ಬಹಮನಿ ಸುಲ್ತಾನರು, ಆದಿಲ್‌ಶಾಹಿಗಳು ರಾಯಚೂರಿನ ಕೋಟೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT