ADVERTISEMENT

ಮೀಸಲಾತಿಗೆ ಕೈ ಹಾಕಿದರೆ ಭಸ್ಮ: ಎಚ್ಚರಿಕೆ

ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ, ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 9:45 IST
Last Updated 23 ಜನವರಿ 2017, 9:45 IST
ಮೀಸಲಾತಿಗೆ ಕೈ ಹಾಕಿದರೆ ಭಸ್ಮ: ಎಚ್ಚರಿಕೆ
ಮೀಸಲಾತಿಗೆ ಕೈ ಹಾಕಿದರೆ ಭಸ್ಮ: ಎಚ್ಚರಿಕೆ   

ರಾಯಚೂರು: ಸಂವಿಧಾನ ಬದ್ಧ ಮೀಸಲಾತಿ ಮುಟ್ಟಲು ಆಗುವುದಿಲ್ಲ. ಅದರ ತಂಟೆಗೆ ಹೋದವರು ಭಸ್ಮವಾಗುತ್ತಾರೆ ಎಂದು ಹೈಕೋರ್ಟ್‌ ವಕೀಲ ಶ್ರೀಧರ ಪ್ರಭು ಎಚ್ಚರಿಸಿದರು.

ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕದಿಂದ ಜನಾಂದೋಲನ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ನಿಮಿತ್ತ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮೀಸಲಾತಿ ತೆಗೆಯಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಮೀಸಲಾತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ಸೌಲಭ್ಯ ಪಡೆಯುತ್ತಿಲ್ಲ. ಹಿಂದುಳಿದ ವರ್ಗದವರೂ ಪಡೆಯುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇಷ್ಟು ದಿನಗಳು ಹೋರಾಟ ಮಾಡಿದ್ದಾರೆ. ಈಗ ವಿಶ್ರಾಂತಿ ಪಡೆದು, ಹಿಂದುಳಿದ ವರ್ಗದವರು ಈ ಹೋರಾಟವನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ಮೀಸಲಾತಿ ತೆಗೆಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಷ್ಟೋ ಸಲ ಹೇಳಿದೆ. ಆದರೆ, ದಲಿತರನ್ನು ಸರಸಂಘ ಸಂಚಾಲಕರನ್ನಾಗಿ ಮಾಡಿಲ್ಲ ಎಂದು ಟೀಕಿಸಿದರು.

ಪ್ರಜಾಪ್ರಭುತ್ವ ಉಳಿಸಲು ಬಹುಜನ ಸಮಾಜದಿಂದ ಮಾತ್ರ ಸಾಧ್ಯ. ಉತ್ತರ ಪ್ರದೇಶದ ಈ ಚುನಾವಣೆಯು ರಾಷ್ಟ್ರದ ದಿಕ್ಕನ್ನು ಬದಲಿಸಲಿದೆ ಎಂದರು. ಕ್ಯಾಪಿಟೇಷನ್‌ ಹಾಗೂ ಡೊನೇಷನ್‌ ತೆಗೆದುಕೊಳ್ಳುವ ಜಗದ್ಗುರುಗಳು ಹಾಗೂ ಜಾತಿ ಸಂಘಟನೆಗಳು ಬಡವರಿಗೆ ಉಚಿತವಾಗಿ ಶಿಕ್ಷಣ ಒದಗಿಸಲಿ ಎಂದು ಸವಾಲು ಹಾಕಿದರು.

‘ಸ್ವರಾಜ್ಯವೇ ಜನ್ಮಸಿದ್ಧ ಹಕ್ಕು ಎಂದು ಹೇಳಿದ್ದು ಬಾಲಗಂಗಾಧರ ತಿಲಕ ಅವರಲ್ಲ. ಎಂದ ಅವರು ಮಹಾತ್ಮ ಗಾಂಧೀಜಿ ಅವರು ಸ್ವದೇಶಿ ಚಳವಳಿಗೆ ಅಂದಿನ ಉದ್ಯಮಿಗಳಿಂದ ಹಣ ಪಡೆದುಕೊಂಡಿದ್ದರು’ ಎಂದು ಆರೋಪಿಸಿದರು.

ಮೈಸೂರು ಕುವೆಂಪು ಭಾಷಾ ಭಾರತಿ ಸಂಶೋಧನಾರ್ಥಿ ಶಿವಕುಮಾರ ಮಾತನಾಡಿ, ಭಾರತದಲ್ಲಿ ಇದುವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಬಹುಜನರಗೋಸ್ಕರ ಕಾರ್ಯ ನಿರ್ವಹಿಸಿಲ್ಲ. ಮತ ಬ್ಯಾಂಕ್‌ ರಾಜಕಾರಣ ಮಾಡಿಕೊಂಡು ಬಂದಿವೆ ಎಂದು ಆಪಾದಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲ ಸ್ವಾತಂತ್ರ್ಯ ನಂತರವೂ ಮೇಲ್ವರ್ಗದವರೆ ಆಡಳಿತ ನಡೆಸುವ ಮೂಲಕ ಶೇ 80ರಷ್ಟು ಜನಸಂಖ್ಯೆ ಹೊಂದಿರುವ ಬಹುಜನರ ರಕ್ತ ಹೀರಿದ್ದಾರೆ. ನರೇಂದ್ರ ಮೋದಿ ಅವರ ಸರ್ಕಾರವೂ ಅದೇ ದಾರಿಯಲ್ಲಿ ಸಾಗಿದೆ. ಕಪ್ಪುಹಣ ನಿಯಂತ್ರಣದ ಹೆಸರಿನಲ್ಲಿ ಬಡವರಿಗೆ ತೊಂದರೆ ನೀಡುತ್ತಿದ್ದಾರೆ. ಕಪ್ಪು ಹಣ ನಗದು ರೂಪದಲ್ಲಿ ಶೇ 6 ರಷ್ಟು ಮಾತ್ರವಿದೆ. ಉಳಿದದ್ದು ಆಸ್ತಿಯ ರೂಪದಲ್ಲಿದೆ. ಆದರೆ, ಮೋದಿ ಅವರು ಆಸ್ತಿಯ ಲೆಕ್ಕ ಪಡೆದಿಲ್ಲ ಎಂದು ದೂರಿದರು.

ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಧರ್ಮರಾಜ ಗೋನಾಳ ಅಧ್ಯಕ್ಷತೆ ವಹಿಸಿದ್ದರು. ವೈಟಿಪಿಎಸ್‌ ಮುಖ್ಯ ಎಂಜಿನಿಯರ್‌ ಮಹೇಂದ್ರ, ಡಾ.ರಮೇಶಬಾಬು, ಪ್ರೊ.ಜಾಗೃತಿ ದೇಶಮಾನೆ, ಡಾ.ರಾಜಶೇಖರ, ವೀರಭದ್ರಪ್ಪ, ಮಧುಚಕ್ರವರ್ತಿ, ಕುಂಟೆಪ್ಪ ಗೌರಿಪುರ, ಜಾನ್‌ವೆಸ್ಲಿ, ಕೃಷ್ಣ, ವೆಂಕಟಸ್ವಾಮಿ, ಆಂಜನೇಯ, ಯಲ್ಲಪ್ಪ ಜಾಲಿಬೆಂಚಿ, ತಾಯರಾಜ ಮರ್ಚಟ್ಹಾಳ, ರಘುವೀರ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.